ಗ್ರಂಥಾಲಯ ವಿಜ್ಞಾನಕ್ಕೆ ರಂಗನಾಥನ್ ರ ಕೊಡುಗೆ ಅಪಾರ-ಡಾ. ಅಜಿತ ಪ್ರಸಾದ

ಗ್ರಂಥಾಲಯ ವಿಜ್ಞಾನಕ್ಕೆ ರಂಗನಾಥನ್ ರ ಕೊಡುಗೆ ಅಪಾರ-ಡಾ. ಅಜಿತ ಪ್ರಸಾದ Ranganathan's contribution to library science is immense – Dr. Ajitha Prasad

ಲೋಕದರ್ಶನ ವರದಿ 

ಧಾರವಾಡ 12 : ಗ್ರಂಥಾಲಯವೆಂದರೆ ಕೇವಲ ಪುಸ್ತಕಗಳನ್ನು ಸಂಗ್ರಹಿಸುವ ಸ್ಥಳವಲ್ಲ ಅದು ಜ್ಞಾನದ ಭಂಡಾರ, ವಿಚಾರಗಳ ಕೇಂದ್ರ ಮತ್ತು ವ್ಯಕ್ತಿತ್ವ ವಿಕಾಸದ ತಾಣವಾಗಿದೆ. ಪುಸ್ತಕಗಳು ನಮ್ಮ ಉತ್ತಮ ಸ್ನೇಹಿತರಾಗಿದ್ದು, ಅವು ನಮ್ಮ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ಆಲೋಚನಾ ಶಕ್ತಿಯನ್ನು ಬೆಳೆಸುತ್ತವೆ ಎಂದು ಧಾರವಾಡದ ವಿದ್ಯಾಗಿರಿಯ ಜೆ.ಎಸ್‌.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಗ್ರಂಥಾಲಯದಲ್ಲಿ ಆಯೋಜಿಸಲಾಗಿದ್ದ ಗ್ರಂಥಪಾಲಕ ದಿನಾಚರಣೆಯನ್ನಯ ಉದ್ಘಾಟಿಸಿ ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡಿದರು.

‘ಗ್ರಂಥಾಲಯ ವಿಜ್ಞಾನವನ್ನು ಭಾರತದಾದ್ಯಂತ ಬೆಳಗಿಸುವಲ್ಲಿ ಪ್ರಚಾರ ಮಾಡುವಲ್ಲಿ ಡಾ. ಎಸ್‌.ಆರ್‌. ರಂಗನಾಥನ್‌ರೆ ಮೊದಲಿಗರು. ಡಾ. ಎಸ್‌. ಆರ್‌. ರಂಗನಾಥನ್ ಅವರು ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹರೆಂದು ಪ್ರಸಿದ್ಧರಾಗಿದ್ದಾರೆ. ಅವರ ಪೂರ್ಣ ಹೆಸರು ಶಿಯಾಳಿ ರಾಮಾಮೃತ ರಂಗನಾಥನ್‌. ಅವರು 12 ಆಗಸ್ಟ್‌ 1892ರಂದು ತಮಿಳುನಾಡಿನ ಶಿಯಾಳಿಯಲ್ಲಿ ಜನಿಸಿದರು. ಅವರು ಗಣಿತಶಾಸ್ತ್ರದ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ನಂತರ ಮದ್ರಾಸ್ ವಿಶ್ವವಿದ್ಯಾಲಯದ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಗ್ರಂಥಾಲಯ ಕ್ಷೇತ್ರದ ಮಹತ್ವವನ್ನು ಆಳವಾಗಿ ಅರಿತುಕೊಂಡರು.

ಗ್ರಂಥಾಲಯವು ಕೇವಲ ಪುಸ್ತಕಗಳನ್ನು ಸಂಗ್ರಹಿಸುವ ಸ್ಥಳವಲ್ಲ; ಪ್ರತಿಯೊಬ್ಬರಿಗೂ ಜ್ಞಾನವನ್ನು ತಲುಪಿಸುವ ಕೇಂದ್ರವಾಗಬೇಕು ಎಂಬ ಮಹತ್ವದ ವಿಚಾರವನ್ನು ಅವರು ಬೆಳೆಸಿದರು.  ಡಾ. ರಂಗನಾಥನ್ ಅವರ ಆದರ್ಶಗಳನ್ನು ಪಾಲಿಸಿ, ಪ್ರತಿದಿನ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.  ಜೆ.ಎಸ್‌.ಎಸ್ ನ ಆಡಳಿತಾಧಿಕಾರಿ ಅರಿಹಂತ ಪ್ರಸಾದ ಮಾತನಾಡಿ ರಂಗನಾಥನ್‌. ಅವರು ಗ್ರಂಥಾಲಯ ವಿಜ್ಞಾನದಲ್ಲಿ ಸಾಕಷ್ಟು ಕೃಷಿ ಮಾಡಿ ಇವರು ‘ಗ್ರಂಥಾಲಯಗಳ ಪಿತಾಮಹ’ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಅವರು ಕೋಲನ್ ವರ್ಗೀಕರಣ ಪದ್ಧತಿ ಹಾಗೂ ಗ್ರಂಥಾಲಯ ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ಕೃತಿಗಳನ್ನು ರಚಿಸಿ, ಭಾರತದಲ್ಲಿ ಆಧುನಿಕ ಗ್ರಂಥಾಲಯ ವ್ಯವಸ್ಥೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ಜೆ.ಎಸ್‌.ಎಸ್ ಐ.ಟಿ.ಯ ಕಾಲೇಜಿನ ಪ್ರಾಚಾರ್ಯರಾದ   ಮಹಾವೀರ ಉಪಾದ್ಯೆ ವಂದಿಸಿದರು. ಜೆ.ಎಸ್‌.ಎಸ್ ಎಂ.ಸಿ.ಎ ನಿರ್ದೇಶಕರಾದ ಡಾ. ಸೂರಜ್ ಜೈನ್, ಡಾ. ಶೌಕತ್‌ಅಲಿ ಮೇಗಲಮನಿ, ಶಾಂತಿನಾಥ ರೋಖಡೆ, ವಿಜಯಕುಮಾರ ದೇಶಬಾಗ, ಈರಾ​‍್ಪ ಪತ್ತಾರ ಇತರರು ಉಪಸ್ಥಿತರಿದ್ದರು.