ಮನೆ ಸುಟ್ಟಿದ್ದು ರಜಾಕಾರರೇ ಹೊರತು ಮುಸ್ಲಿಮರಲ್ಲ:

ಬೆಂಗಳೂರು: ನಮ್ಮ ಮನೆಯನ್ನು ಸುಟ್ಟಿದ್ದು ರಜಾಕಾರರು, ಮುಸ್ಲಿಮರಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ.

ತನ್ನ ತಾಯಿ, ಸಹೋದರಿ ಸುಟ್ಟು ಹೋದರೂ ಖರ್ಗೆ ಮೌನ ವಹಿಸಿದ್ದಾರೆ’ ಎಂಬ ಯೋಗಿ ಆದಿತ್ಯನಾಥ ಟೀಕೆ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆಯವರು, ಹೌದು 1948 ರಲ್ಲಿ, ರಜಾಕಾರರು ಮಲ್ಲಿಕಾರ್ಜುನ ಖರ್ಗೆಯವರು ಅವರ ಮನೆಯನ್ನು ಸುಟ್ಟು ಹಾಕಿದ್ದರು. ಘಟನೆಯಲ್ಲಿ ಖರ್ಗೆಯವರ ತಾಯಿ ಮತ್ತು ಸಹೋದರಿ ಮೃತಪಟ್ಟಿದ್ದು, ಅದೃಷ್ಟವಶಾತ್ ಖರ್ಗೆಯವರು ಪ್ರಾಣಾಪಾಯದಿಂದ ಪಾರಾಗಿದ್ದು. ಆದರೂ ಅವರು ಕುಗ್ಗಲಿಲ್ಲ. 9 ಬಾರಿ ಶಾಸಕರಾಗಿ, ಎರಡು ಬಾರಿ ಲೋಕಸಭೆ ಮತ್ತು ರಾಜ್ಯಸಭಾ ಸಂಸದರಾಗಿ, ಕೇಂದ್ರ ಸಚಿವರಾಗಿ, ಲೋಕಸಭೆಯ ನಾಯಕರಾಗಿ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಮತ್ತು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ದುರಂತದ ಹೊರತಾಗಿಯೂ, ಅವರು ಅದನ್ನು ಎಂದಿಗೂ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಿಲ್ಲ, ಬಲಿಪಶು ಎಂದು ಆಟವಾಡಲಿಲ್ಲ. ದ್ವೇಷವು ಬಿತ್ತುವ ಕೆಲಸ ಮಾಡಲಿಲ್ಲ ಎಂದು ಹೇಳಿದರು.

ಯೋಗಿ ಆದಿತ್ಯನಾಥ್ ಅವರಿಗೆ ಖರ್ಗೆ ಅವರ ಇತಿಹಾಸ ಗೊತ್ತಿಲ್ಲ. ಹೌದು, ರಜಾಕರು ನಮ್ಮ ಮನೆ ಸುಟ್ಟು ಹಾಕಿದರು. ಸುಟ್ಟಿದ್ದು ರಜಾಕಾರರೇ ಹೊರತು ಮುಸ್ಲಿಮರಲ್ಲ, ಪ್ರತಿಯೊಂದು ಸಮುದಾಯದಲ್ಲೂ ಕೆಟ್ಟವರು, ಒಳ್ಳೆಯವರು ಇದ್ದೇ ಇರುತ್ತಾರೆ. ಒಬ್ಬರು ಮಾಡಿದ ಕೆಲಸಕ್ಕೆ ಇಡೀ ಸಮುದಾಯವನ್ನು ದೂಷಿಸಲು ಆಗುತ್ತಾ? ಮುಸ್ಲಿಮರ ಮೇಲೆಲ್ಲ ಆರೋಪ ಮಾಡಲು ಆಗುತ್ತಾ? ಇದೆಲ್ಲ ಈಗ ಅಪ್ರಸ್ತುತ ಚರ್ಚೆ ಎಂದು ತಿಳಿಸಿದರು.

ಇವರು ಇಷ್ಟೆಲ್ಲ ಮಾತನಾಡುತ್ತಾರಲ್ಲ ಇನ್ನೂ ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ಕೊಡುತ್ತಾರಾ?... ಮೊದಲು ಬಿಜೆಪಿ, ಆರ್‌ಎಸ್‌ಎಸ್‌ ಸಿದ್ಧಾಂತಗಳಲ್ಲಿ ಸಮಾನತೆ ತರಲಿ. ಬಿಜೆಪಿಯವರು ಅಪಾಯದಲ್ಲಿದ್ದರೆ ಮಾತ್ರ ಆಗ ಹಿಂದೂಗಳು ಅಪಾಯದಲ್ಲಿದ್ದಾರೆಂದು ಬಿಂಬಿಸುತ್ತಾರೆ. ನಿಜಕ್ಕೂ ಅಪಾಯದಲ್ಲಿ ಇರೋರು ಬಿಜೆಪಿಯವರು, ಹಿಂದೂಗಳಲ್ಲ. ತಾವು ಅಪಾಯದಲ್ಲಿ ಇದ್ದಾಗ ಹಿಂದೂಗಳ ಹೆಸರು ಬಳಸಿಕೊಳ್ಳುತ್ತಾರೆ.