ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ರೈತ ಭಾರತ ಪಕ್ಷ ಆಗ್ರಹ

   ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ರೈತ ಭಾರತ ಪಕ್ಷ ಆಗ್ರಹ Raitha Bharata Paksha demands strict action against the accused

ಲೋಕದರ್ಶನ ವರದಿ 

ವಿಜಯಪುರ 29: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಕುರಿತು ವರದಿ ಮಾಡಿದ್ದ ಹಿರಿಯ ಪತ್ರಕರ್ತ ಪರಶುರಾಮ ಶಿವಶರಣ ಅವರ ಮನೆಗೆ ತೆರಳಿ ಕುಟುಂಬದವರಿಗೆ ಬೆದರಿಕೆ ಹಾಕಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು, ಅಗತ್ಯವಿದ್ದಲ್ಲಿ ಗಡಿಪಾರು ಮಾಡಬೇಕೆಂದು ರೈತ ಭಾರತ ಪಕ್ಷ ಆಗ್ರಹಿಸಿದೆ.

ಈ ಕುರಿತು ಪಕ್ಷದ ಮುಖಂಡರು ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.  ಪತ್ರಕರ್ತ ಪರಶುರಾಮ ಶಿವಶರಣ ಅವರು ಆಗಸ್ಟ್‌ 20 ರಂದು ‘ಹೊಸದಿಗಂತ’ ಪತ್ರಿಕೆಯಲ್ಲಿ ‘ಬೇರು ಬಿಟ್ಟ ಅಕ್ರಮ ದಂಧೆಕೋರರ ಜಾಲ, ಕಾಳಸಂತೆಕೋರರಿಂದ ಮಹಾರಾಷ್ಟ್ರಕ್ಕೆ ಸಾಗಣೆ, ಅನ್ನಭಾಗ್ಯ ಅಕ್ಕಿ ಖದೀಮರಿಗೆ ವಿಜಯಪುರ ಸ್ವರ್ಗ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿದ್ದರು. ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಕುರಿತು ವರದಿಯಲ್ಲಿ ಬೆಳಕು ಚೆಲ್ಲಲಾಗಿತ್ತು. 

ಸರ್ಕಾರದ ಜನಪರ ಯೋಜನೆಗಳಲ್ಲಿನ ಅಕ್ರಮಗಳನ್ನು ಬಹಿರಂಗಪಡಿಸಿ, ಅವುಗಳ ದುರ್ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ ಪತ್ರಕರ್ತರು ಮಾಡಿರುವ ವರದಿ ಸಮಾಜದ ಹಿತದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ರೈತ ಭಾರತ ಪಕ್ಷದ ಮುಖಂಡರು ಹೇಳಿದರು. 

ವರದಿ ಪ್ರಕಟವಾದ ಬಳಿಕ ಅಕ್ರಮ ದಂಧೆಕೋರರು ಪತ್ರಕರ್ತರ ಮೇಲೆ ಕುಪಿತಗೊಂಡು, ಅವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಮನೆಗೆ ತೆರಳಿ ಕುಟುಂಬದವರಿಗೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಪತ್ರಕರ್ತರನ್ನು ಬೆದರಿಸುವ ಮೂಲಕ ಅಕ್ರಮ ಚಟುವಟಿಕೆಗಳನ್ನು ಮುಚ್ಚಿಹಾಕಲು ಪ್ರಯತ್ನಿಸುವುದು ಖಂಡನೀಯ ಎಂದರು. ಸರಕಾರದ ಜನಪರ ಯೋಜನೆಯ ದುರ್ಬಳಕೆಯ ಕುರಿತು ವರದಿ ಮಾಡಿದ ಪತ್ರಕರ್ತನ ಮನೆಗೆ ತೆರಳಿ ಬೆದರಿಕೆ ಹಾಕುವ ಮಟ್ಟಿಗೆ ಅಕ್ರಮ ದಂಧೆಕೋರರು ಜಿಲ್ಲೆಯಲ್ಲಿ ಬೆಳೆದಿರುವುದು ಆತಂಕಕಾರಿ. ಪೊಲೀಸ್ ಇಲಾಖೆ ಮತ್ತು ಕಾನೂನಿನ ಭಯವಿಲ್ಲದಂತೆ ಇಂತಹ ಕೃತ್ಯಗಳು ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ನಾಗರಿಕ ಸಮಾಜ ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಬಾರದು,  ಎಂದು ಪಕ್ಷದ ಮುಖಂಡರು ಹೇಳಿದರು. 

ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಪತ್ರಕರ್ತರಿಗೆ ಹಾಗೂ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸುವುದರ ಜತೆಗೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮ ದಂಧೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.