ಮಳೆ ಕೊರತೆ: ರಾಣೇಬೆನ್ನೂರು ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ರೈತರ ಒತ್ತಾಯ

ಮಳೆ ಕೊರತೆ: ರಾಣೇಬೆನ್ನೂರು ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ರೈತರ ಒತ್ತಾಯ  Rainfall deficit: Farmers urge declaration of Ranebennur taluk as drought-hit


ರಾಣೇಬೆನ್ನೂರು 02: ಈ ಬಾರಿ ಎಲ್ನಿನೋ ಪರಿಣಾಮದಿಂದ ತಾಲೂಕಿನಲ್ಲಿ ನೀರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಇರುವುದರಿಂದ ರಾಣೇಬೆನ್ನೂರು ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಜಿ.ಪಂ. ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ನೇತೃತ್ವದಲ್ಲಿ ರೈತರು ಸೋಮವಾರ ತಹಶೀಲ್ದಾರ್ ಆರ್‌.ಹೆಚ್‌. ಭಗವಾನ ಅವರಿಗೆ ಮನವಿ ಸಲ್ಲಿಸಿದರು.  

ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಸಮರ​‍್ಕವಾಗಿ ಮಳೆಯಾಗದೆ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಮಳೆಯ ಕೊರತೆಯಿಂದ ತಾಲೂಕಿನ ವಿವಿಧ ಭಾಗಗಳಲ್ಲಿ ಬೆಳೆಗಳು ಒಣಗಿ ಹೋಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ರೈತರು ಮನವಿಯಲ್ಲಿ ತಿಳಿಸಿದ್ದಾರೆ.  

ಈಗಾಗಲೇ ರಾಜ್ಯ ಸರ್ಕಾರ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಆದರೆ ರಾಣೇಬೆನ್ನೂರು ತಾಲೂಕನ್ನು ಆ ಪಟ್ಟಿಯಿಂದ ಕೈಬಿಟ್ಟಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸರ್ಕಾರ ಯಾವ ಮಾನದಂಡದ ಆಧಾರದ ಮೇಲೆ ಬರಪೀಡಿತ ತಾಲೂಕುಗಳನ್ನು ಘೋಷಿಸಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.  

ತಾಲೂಕಿನಲ್ಲಿ ಜೂನ್, ಜುಲೈ ಹಾಗೂ ಆಗಸ್ಟ್‌ ತಿಂಗಳಲ್ಲಿ ವಾಡಿಕೆಯಂತೆ ಮಳೆಯಾಗಿಲ್ಲ. ಆದ್ದರಿಂದ ಮಳೆಯ ಕೊರತೆಯನ್ನು ಪರಿಗಣಿಸಿ, ತಾಲೂಕಿನಲ್ಲಿನ ಬೆಳೆಗಳ ಸ್ಥಿತಿಗತಿಯನ್ನು ಸಮಗ್ರವಾಗಿ ಪರೀಶೀಲಿಸಬೇಕು. ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ತಕ್ಷಣವೇ ಬೆಳೆಗಳ ವಾಸ್ತವ ಸ್ಥಿತಿಯನ್ನು ಪರೀಶೀಲಿಸಿ, ನೈಜ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ರೈತರು ಆಗ್ರಹಿಸಿದರು.  

ಈಗಾಗಲೇ ಕಂದಾಯ ಇಲಾಖೆ ಹಾಗೂ ಸ್ಥಳೀಯ ಕೃಷಿ ಇಲಾಖೆ ಅಧಿಕಾರಿಗಳು ಮಳೆಯ ಕೊರತೆಯಿಂದ ಬೆಳೆಗಳು ಹಾನಿಗೊಳಗಾಗಿರುವ ಕುರಿತು ವರದಿ ನೀಡಿದ್ದಾರೆ. ಸರ್ಕಾರ ಕೂಡಲೇ ಈ ವರದಿಯನ್ನು ಪರೀಶೀಲಿಸಿ ರಾಣೇಬೆನ್ನೂರು ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು. ಇಲ್ಲವಾದಲ್ಲಿ ರೈತರೊಂದಿಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.  

ಈ ಸಂದರ್ಭದಲ್ಲಿ ಯುವರಾಜ ಬಾರಾಟಕ್ಕೆ, ಗಂಗಾಧರ ಬೂದನೂರು, ಕಿರಣ ಬುಳ್ಳನಗೌಡ್ರ, ಶಿವಕುಮಾರ ಶೆಟ್ಟರ್, ರಮೇಶ್ ಹೊನ್ನಾಳಿ, ಗುಡ್ಡೇಶ ನಿಟ್ಟೂರು ಸೇರಿದಂತೆ ರೈತರು, ನಾಗರಿಕರು ಹಾಗೂ ಇತರರು ಉಪಸ್ಥಿತರಿದ್ದರು.