ಕ್ಷಯಮುಕ್ತ ಜಿಲ್ಲೆಯಾಗಿಸಲು ಸಾರ್ವಜನಿಕರ ಸಹಕಾರ ಅಗತ್ಯ: ಡಾ. ಯಲ್ಲಾ ರಮೇಶ್ ಬಾಬು
Public cooperation is essential to make the district TB-free: Dr. Yalla Ramesh Babu
ಲೋಕದರ್ಶನ ವರದಿ
ಬಳ್ಳಾರಿ, 10: ಜಿಲ್ಲೆಯನ್ನು ಸಂಪೂರ್ಣ ಕ್ಷಯಮುಕ್ತ (ಟಿಬಿ ಮುಕ್ತ) ಜಿಲ್ಲೆಯನ್ನಾಗಿ ರೂಪಿಸಲು ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಕರೆ ನೀಡಿದರು. ಕ್ಷಯರೋಗವು ಮೈಕೋಬ್ಯಾಕ್ಟೀರಿಯಂ ಟ್ಯೂಬರ್ಕುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಮುಖ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ದೇಹದ ಇತರೆ ಭಾಗಗಳಾದ ಮೂಳೆ, ಮೆದುಳು ಹಾಗೂ ಮೂತ್ರಪಿಂಡಗಳಿಗೂ ಹರಡಬಹುದು ಎಂದು ಅವರು ತಿಳಿಸಿದರು.
ಕ್ಷಯರೋಗದ ಪ್ರಮುಖ ಲಕ್ಷಣಗಳು:
ಎರಡು ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿಯುವ ಕೆಮ್ಮು, ಕೆಮ್ಮಿದಾಗ ಕಫದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಸಂಜೆ ಅಥವಾ ರಾತ್ರಿ ವೇಳೆ ಜ್ವರ ಬರುವುದು, ಅತಿಯಾಗಿ ಬೆವರುವುದು, ಕಾರಣವಿಲ್ಲದೆ ದೇಹದ ತೂಕ ಹಾಗೂ ಹಸಿವು ಕಡಿಮೆಯಾಗುವುದು, ನಿರಂತರ ಸುಸ್ತು ಹಾಗೂ ಉಸಿರಾಟದ ತೊಂದರೆಗಳು ಕ್ಷಯರೋಗದ ಲಕ್ಷಣಗಳಾಗಿವೆ.
ಗಾಳಿಯ ಮೂಲಕ ಹರಡುವ ಕಾಯಿಲೆ:
ಕ್ಷಯರೋಗವು ಗಾಳಿಯ ಮೂಲಕ ಹರಡುತ್ತದೆ. ಶ್ವಾಸಕೋಶದ ಟಿಬಿ ಇರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಅಥವಾ ಉಗುಳಿದಾಗ ಬ್ಯಾಕ್ಟೀರಿಯಾಗಳು ಗಾಳಿಯಲ್ಲಿ ಸೇರಿ, ಅದನ್ನು ಉಸಿರಾಡುವ ಆರೋಗ್ಯವಂತ ವ್ಯಕ್ತಿಗೆ ಸೋಂಕು ತಗುಲಬಹುದು. ಆದರೆ ಟಿಬಿ ಪೀಡಿತರು ಬಳಸಿದ ವಸ್ತುಗಳು, ತಟ್ಟೆ ಅಥವಾ ಲೋಟಗಳಿಂದ ಈ ಕಾಯಿಲೆ ಹರಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಉಚಿತ ಪರೀಕ್ಷೆ ಮತ್ತು ಚಿಕಿತ್ಸೆ ಲಭ್ಯ:
ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಯರೋಗ ಪತ್ತೆಗೆ ಉಚಿತ ವ್ಯವಸ್ಥೆ ಕಲ್ಪಿಸಲಾಗಿದೆ. ಕಫ ಪರೀಕ್ಷೆ, ಎಕ್ಸ್ರೇ ಜೊತೆಗೆ ಸಿಬಿನಾಟ್/ಟ್ರೂನಾಟ್ನಂತಹ ಅತ್ಯಾಧುನಿಕ ಪರೀಕ್ಷೆಗಳ ಮೂಲಕ ಕಡಿಮೆ ಸಮಯದಲ್ಲಿ ರೋಗ ಪತ್ತೆ ಮಾಡಲಾಗುತ್ತದೆ. ಕ್ಷಯರೋಗ ಸಂಪೂರ್ಣವಾಗಿ ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಮುಖ್ಯ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಇಂದ್ರಾಣಿ ವಿ. ಅವರು ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ಡಾಟ್ಸ್ ಕೇಂದ್ರಗಳ ಮೂಲಕ ಉಚಿತವಾಗಿ ಓಷಧಿಗಳನ್ನು ಆರೋಗ್ಯ ಕಾರ್ಯಕರ್ತರ ಮೇಲ್ವಿಚಾರಣೆಯಲ್ಲಿ ನೀಡಲಾಗುತ್ತದೆ. ಸಾಮಾನ್ಯ ಟಿಬಿಗೆ ಕನಿಷ್ಠ 6 ತಿಂಗಳು ಹಾಗೂ ತೀವ್ರ ಸ್ವರೂಪದ ಪ್ರಕರಣಗಳಿಗೆ ವೈದ್ಯರ ಸಲಹೆಯಂತೆ 9 ರಿಂದ 12 ತಿಂಗಳವರೆಗೆ ನಿರಂತರ ಚಿಕಿತ್ಸೆ ಪಡೆಯಬೇಕು. ಚಿಕಿತ್ಸೆ ಮಧ್ಯದಲ್ಲಿ ನಿಲ್ಲಿಸಿದರೆ ಓಷಧ ನಿರೋಧಕ ಟಿಬಿ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.
ನಿಕ್ಷಯ್ ಪೋಷಣ್ ಯೋಜನೆಯಡಿ ಆರ್ಥಿಕ ನೆರವು:
ಭಾರತ ಸರ್ಕಾರದ ನಿಕ್ಷಯ್ ಪೋಷಣ್ ಯೋಜನೆಯಡಿ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರಕ್ಕಾಗಿ ಚಿಕಿತ್ಸೆ ಅವಧಿಯಲ್ಲಿ ಪ್ರತಿ ತಿಂಗಳು ರೂ.1000 ಆರ್ಥಿಕ ನೆರವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮೊಟ್ಟೆ, ಹಾಲು, ಬೇಳೆಕಾಳುಗಳು, ಹಸಿರು ತರಕಾರಿಗಳು ಹಾಗೂ ಹಣ್ಣುಗಳಂತಹ ಪೌಷ್ಟಿಕ ಆಹಾರ ಸೇವನೆ ಅಗತ್ಯವಾಗಿದೆ.
ತಡೆಗಟ್ಟುವ ಕ್ರಮಗಳು:
ಮಗು ಜನಿಸಿದ ತಕ್ಷಣ ಬಿಸಿಜಿ ಲಸಿಕೆ ಹಾಕಿಸುವುದರಿಂದ ಮಕ್ಕಳಲ್ಲಿ ಕ್ಷಯರೋಗ ತಡೆಯಲು ಸಹಾಯವಾಗುತ್ತದೆ. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ ಬಳಸಬೇಕು. ಮನೆಯಲ್ಲಿ ಯಾರಿಗಾದರೂ ಟಿಬಿ ಇದ್ದರೆ ಕುಟುಂಬದ ಇತರ ಸದಸ್ಯರೂ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮನೆಗಳಲ್ಲಿ ಗಾಳಿ ಮತ್ತು ಬೆಳಕು ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು. ಯಾರಿಗಾದರೂ ಮೇಲ್ಕಂಡ ಲಕ್ಷಣಗಳು ಕಂಡುಬಂದರೆ ತಕ್ಷಣ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಉಚಿತ ಪರೀಕ್ಷೆ ಹಾಗೂ ಚಿಕಿತ್ಸೆ ಪಡೆಯಬೇಕು ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ 