ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಲೇಬರ್ ಕೋಡ್ ವಿರುದ್ದ ನಗರದಲ್ಲಿ ಪ್ರತಿಭಟನೆ

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಲೇಬರ್ ಕೋಡ್ ವಿರುದ್ದ ನಗರದಲ್ಲಿ ಪ್ರತಿಭಟನೆ Protest in the city against the central government's anti-labor labor code

ಬಳ್ಳಾರಿ 12 :  ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ಮೇರೆಗೆ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಇಂದು ನಗರದಲ್ಲಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ರೈತ ಸಂಘಟನೆಗಳನ್ನು ಒಳಗೊಂಡ ಸಂಯುಕ್ತ ಹೋರಾಟ ಕರ್ನಾಟಕವು ಸಹ ಮುಷ್ಕರಕ್ಕೆ ಬೆಂಬಲ ನೀಡಿ, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ನಗರದ ನಾರಾಯಣ್ ರಾವ್ ಪಾರ್ಕ್ನಿಂದ ಡಿಸಿ ಕಚೇರಿವರಿಗೆ ಮೆರವಣಿಗೆಯಲ್ಲಿ ಸಾಗಿದ ಕಾರ್ಮಿಕರು, ರೈತರು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಲೇಬರ್ ಕೋಡ್ , ವಿಬಿ ಜಿರಾಮ್ ಜಿ ಇನ್ನಿತರ ಕಾರ್ಮಿಕ-ರೈತ ವಿರೋಧಿ ನೀತಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ನಡೆದ ಸಭೆಯಲ್ಲಿ ಜೆಸಿಟಿಯು ಹಾಗೂ ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರು ಮಾತನಾಡಿ. "ಲೇಬರ್ ಕೋಡ್ಗಳಿಂದ ದುಡಿಯುವವರ ಬದುಕು ಬಂಗಾರವಾಗುತ್ತದೆಂದು ಹೇಳಲಾಗುತ್ತದೆ. ಆದರೆ ಮುಷ್ಕರದ ಹಕ್ಕನ್ನು ಕಸಿದುಕೊಳ್ಳುವ, ಕಾರ್ಮಿಕರ ಸಾಮೂಹಿಕ ಚೌಕಾಸಿ ಹಕ್ಕನ್ನು ಮೊಟಕುಗೊಳಿಸುವ, ನಿಗದಿತ ಅವಧಿಗೆ ಉದ್ಯೋಗದ ಮೂಲಕ ಖಾಯಂ ಸ್ವರೂಪದ ಕೆಲಸಗಳಿಗೆ ತಿಲಾಂಜಲಿ ಹಾಡುವ ಹುನ್ನಾರ ಇದೆ.ದಿನಕ್ಕೆ 12 ತಾಸು ಕೆಲಸದ ಅವಧಿ ಹೆಚ್ಚಿಸಿರುವುದು ಮತ್ತು ಮಹಿಳಾ ಉದ್ಯೋಗಿಗಳಿಗೆ ರಾತ್ರಿ ಪಾಳೀಯಲ್ಲೂ ದುಡಿಸಿಕೊಳ್ಳಲು ಅವಕಾಶ ನೀಡುವ ಈ ಲೇಬರ್ ಕೋಡ್ಗಳು ಕಾರ್ಮಿಕರ ಆರೋಗ್ಯ, ಭದ್ರತೆ ಬಗ್ಗೆ ಕಿಂಚಿತ್ತೂ ಕಾಳಜಿ ತೋರದೆ, ತ್ಯಾಗ-ಬಲಿದಾನಗಳ ಮೂಲಕ ಗಳಿಸಿಕೊಂಡ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂದರು.ಬಂಡವಾಳಶಾಹಿಗಳ ವ್ಯಾಪಾರ ಸುಗಮಗೊಳಿಸುವ ಉದ್ದೇಶದಿಂದ 29 ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಗರಿಷ್ಠ ಲಾಭಗಳಿಸಲು ಅವಕಾಶ ಕಲ್ಪಿಸಿ ಮತ್ತಷ್ಟು ಕಾರ್ಮಿಕರನ್ನು ಶೋಷಿಸಲು ಲೇಬರ್ ಕೋಡ್ಗಳನ್ನು ಜಾರಿಗೊಳಿಸಲಾಗುತ್ತಿದೆ ಅದಕ್ಜಾಗಿ ರಾಜ್ಯ ಸರ್ಕಾರ ಲೇಬರ್ ಕೋಡ್ ಕರ್ನಾಟಕದಲ್ಲಿ ಜಾರಿಗೆ ತರಬಾರದೆಂದು ಆಗ್ರಹಿಸಲಾಯಿತು. 

"ನರೇಗಾ ಯೋಜನೆಯನ್ನು ವಿಬಿ-ಜಿ-ರಾಮ್ ಎಂದು ಬದಲಿಸಿ ಉದ್ಯೋಗ ಖಾತ್ರಿಯ ಹಕ್ಕನ್ನೇ ಕಸಿದುಕೊಂಡು, ಹಳ್ಳಿಯ ಬಡಜನರ ಆಸರೆಯನ್ನು ಕಿತ್ತುಕೊಂಡಿದೆ.ಕೇಂದ್ರ ಸರ್ಕಾರದ ವಿವಿಧ ಸಾಮಾಜಿಕ ಯೋಜನೆಗಳಡಿ ದುಡಿಯುವ ಕೋಟ್ಯಾಂತರ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಮಿಕರನ್ನು ಸರ್ಕಾರಿ ನೌಕರರ ಸ್ಥಾನಮಾನ ನೀಡದೇ, ಕನಿಷ್ಠ ವೇತನ ಮತ್ತು ಪಿಎಫ್, ಇಎಸ್‌ಐ, ನಿವೃತ್ತಿ ಪರಿಹಾರಗಳನ್ನು ಒದಗಿಸದೇ ಬಿಡಿಗಾಸಿನಲ್ಲಿ ದುಡಿಸಿಕೊಂಡು ಶೋಷಿಸಲಾಗುತ್ತಿದೆ. ಅದಕ್ಕಾಗಿ ದುಡಿಯುವ ಜನರ ಹಕ್ಕುಗಳನ್ನು ರಕ್ಷಿಸಲು ನಮ್ಮ ಹೋರಾಟ ಅಗತ್ಯ ಎಂದರು.

ಈ ಪ್ರತಿಭಟನೆಯಲ್ಲಿ ಎಐಯುಟಿಯುಸಿ ದೇವದಾಸ್ ಅಧ್ಯಕ್ಷತೆ ವಹಿಸಿದ್ದರು, ಆರ್‌. ಸೋಮಶೇಖರ್ ಗೌಡ, ಸಿಐಟಿಯು ರಾಜ್ಯ ಉಪಾಧ್ಯಕ್ಷ ಸತ್ಯ ಬಾಬು, ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಆದಿ ಮೂರ್ತಿ, ಅಖಿಲ ಭಾರತ ವಿಮಾ ನೌಕರರ ಸಂಘಟನೆಯ ಸೂರ್ಯನಾರಯಣ, ಬ್ಯಾಂಕ್ ನೌಕರರ ಸಂಘಟನೆಯ ಘನ ಮಲ್ಲಿಕಾರ್ಜುನ,ಸುರೇಶ್, ಗೀತ, ರೈತ ಸಂಘಟನೆಯ ಮುಖಂಡರಾದ ಯು.ಬಸವರಾಜ್ , ಗೋವಿಂದ್, ಮಾಧವ ರೆಡ್ಡಿ, ಸಂಗನಕಲ್ಲು ಕೃಷ್ಣಪ್ಪ, ಹನುಮಂತಪ್ಪ, ಎರಿಸ್ವಾಮಿ, ನಾಗರತ್ನ, ಕಟ್ಟಿಬಸಪ್ಪ, ಮಲ್ಲಮ್ಮ, ಚಂದ್ರಕುಮಾರಿ, ಜಗದೀಶ್ ಇತರರು ಭಾಗವಹಿಸಿದ್ದರು. 


Labor Code Narayan Rao Park DC Office VB Jiram Anti-worker Policies