ಜಮೀನುಗಳ ಒತ್ತುವರಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ: ತಹಶೀಲ್ದಾರರ ಭರವಸೆ ಮೇರೆಗೆ ಹಿಂದಕ್ಕೆ
ಕಾಗವಾಡ 16: ತಾಲೂಕಿನ ಜುಗೂಳ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ ಜಮೀನುಗಳ ಒತ್ತುವರಿ ತೆರವಿಗೆ ಆಗ್ರಹಿಸಿ, ದಲಿತ ಸಮುದಾಯದವರು ಜುಗೂಳ-ಶಹಾಪೂರ ರಸ್ತೆ ತಡೆ ನಡೆಸಿ, ಪ್ರತಿಭಟನೆ ಕೈಗೊಂಡಿದ್ದರು. ಸ್ಥಳಕ್ಕೆ ತಹಶೀಲ್ದಾರ ರಾಜೇಶ ಬುರ್ಲಿ ಭೇಟ್ಟಿ ನೀಡಿ, ಒತ್ತುವರಿ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು. ಗುರುವಾರ ದಿ. 16 ರಂದು ಜುಗೂಳ-ಶಹಾಪೂರ ರಸ್ತೆ ತಡೆ ನಡೆಸಿದ ದಲಿತ ಸಮುದಾಯದವರು ತಮಗೆ ನ್ಯಾಯ ನೀಡುವಂತೆ ಆಗ್ರಹಿಸಿ, ಘೋಷಣೆಗಳನ್ನು ಕೂಗಿ, ತಮ್ಮ ಆಕ್ರೋಶ ಹೊರಹಾಕಿದರು. ಶಹಾಪೂರ ರಸ್ತೆಯ ಮೇಲೆ ಕುಳಿತ ಪ್ರತಿಭಟನೆ ಕೈಗೊಂಡ ಸಮಾಜ ಬಾಂಧವರು ಕೂಡಲೇ ನಮ್ಮ ಜಮೀನುಗಳ ಒತ್ತುವರಿ ಮಾಡಿ, ರಸ್ತೆ ನಿರ್ಮಿಸಿಕೊಂಡವರ ಮೇಲೆ ಸೂಕ್ತ ಕ್ರಮ ಕೈಗೊಂಡು, ನಮ್ಮ ಒತ್ತುವರಿ ಜಮೀನುಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು. ಪರಿಶಿಷ್ಟ ಜಾತಿ, ಪರಿಷಿಷ್ಟ ವರ್ಗಗಳ ಕುಂದುಕೊರೆತೆ ಸಮಿತಿಯ ಅಧ್ಯಕ್ಷರೂ ಆಗಿರುವ ತಹಶೀಲ್ದಾರ ರಾಜೇಶ ಬುರ್ಲಿ ಸ್ಥಳಕ್ಕೆ ಭೇಟ್ಟಿ ನೀಡಿ, ಒತ್ತುವರಿ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು. ಕಾಗವಾಡ ಪಿಎಸ್ಐ ಜಿ.ಜಿ. ಬಿರಾದರ, ಕಂದಾಯ ನೀರೀಕ್ಷಕ ಎಸ್.ಡಿ. ಮುಲ್ಲಾ ಪಿಡಿಓ ಶೈಲಶ್ರೀ ಬಜಂತ್ರಿ, ಗ್ರಾಮ ಆಡಳಿತಾಧಿಕಾರಿ ಸುಭಾಷ ಬಶೆಟ್ಟಿ, ದಲಿತ ಮುಖಂಡರಾದ ಮಹಾದೇವ ಕಾಂಬಳೆ, ಪ್ರತಾಪ ಕಾಂಬಳೆ, ಮಹಾವೀರ ಕಾಂಬಳೆ, ತುಕಾರಾಮ ಕಾಂಬಳೆ, ನಾರಾಯನ ಮಾನೆ, ರಾಜು ಹಿರೇಮನಿ, ಗೋಪಾಲ ಕಾಂಬಳೆ, ಶಂಕರ ಕಾಂಬಳೆ, ಸತೀಶ ಚಾವರೆ, ಹೇಮಂತ ಹಿರೇಮನಿ, ಪ್ರಮೋದ ಕಾಂಬಳೆ, ವಿನೋದ ಹಿರೇಮನಿ ಸೇರಿದಂತೆ ದಲಿತ ಸಮಾಜ ಬಾಂಧವರು ಉಪಸ್ಥಿತರಿದ್ದರು.