ಕಡಿಮೆ ದಾಖಲಾತಿ ಹೆಸರಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಜಿಲ್ಲಾ ಪಂಚಾಯತ್ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆ

ಕಡಿಮೆ ದಾಖಲಾತಿ ಹೆಸರಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಜಿಲ್ಲಾ ಪಂಚಾಯತ್ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆ Protest condemns Zilla Panchayat's decision to close government schools in the name of low enrollmen

ಲೋಕದರ್ಶನ ವರದಿ

ಧಾರವಾಡ 20 : ಇತ್ತೀಚಿಗೆ ನಡೆದ ಧಾರವಾಡ ಜಿಲ್ಲಾ ಪಂಚಾಯತ್ ಸಭೆಯಲ್ಲಿ, ಒಂದು ತರಗತಿಗೆ 25 ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆಗಳನ್ನು ವೀಲೀನದ ಹೆಸರಿನಲ್ಲಿ ಮುಚ್ಚುವ ತೀರ್ಮಾನವನ್ನು ಕೈಗೊಂಡಿದ್ದು, ಈ ನಿರ್ಧಾರವನ್ನು ಖಂಡಿಸಿ ಇಂದು ಎಐಡಿಎಸ್‌ಒ ಧಾರವಾಡ ಜಿಲ್ಲಾ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. 

ಪ್ರತಿಭಟನೆಯನ್ನು ಉದ್ದೇಶಿಸಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಸಲಹೆಗಾರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ ಅಧ್ಯಕ್ಷರಾದ ಲಿಂಗರಾಜ ಅಂಗಡಿಯವರು ಮಾತನಾಡಿ, “ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳು, ಶಿಕ್ಷಕರ ನೇಮಕಾತಿ ಮಾಡಿಕೊಂಡು ಅಭಿವೃದ್ಧಿಪಡಿಸಬೇಕಾದ ಸರ್ಕಾರ  ಕಡಿಮೆ ದಾಖಲಾತಿಯ ನೆಪವಡ್ಡಿ ಸರಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಅತ್ಯಂತ ವಿಷಾದನೀಯ. ಧಾರವಾಡವು ಬೇಂದ್ರೆ ಸೇರಿದಂತೆ ಅನೇಕ ಸಾಹಿತಿಗಳು ಹುಟ್ಟಿರುವ ನೆಲ. ಇಂತಹ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದನ್ನು  ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಹಿಂದೆ ಬಿಜೆಪಿ ಮತ್ತು ಈಗ ಕಾಂಗ್ರೆಸ್ ಸರ್ಕಾರವು ಶಾಲೆ ಮುಚ್ಚುತ್ತಿದೆ. ಬಂಡವಾಳಶಾಹಿಗಳ ಹಿತಾಸಕ್ತಿಯಿಂದ ಸರ್ಕಾರವು ಶಾಲೆ ಮುಚ್ಚಿ ಶಿಕ್ಷಣವನ್ನು ಸಂಪೂರ್ಣ ವ್ಯಾಪಾರೀಕರಣ ಮಾಡಲು ಹೊರಟಿದೆ” ಎಂದು ಸರ್ಕಾರವನ್ನು ಖಂಡಿಸಿದರು. 

ಪ್ರತಿಭಟನೆಯನ್ನು ಉದ್ದೇಶಿಸಿ  ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿಗಳಾದ ಶಶಿಕಲಾ ಮೇಟಿ ಮಾತನಾಡಿ ಕಡಿಮೆ ದಾಖಲಾತಿ ಹೊಂದಿರುವ  ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡು ಅಭಿವೃದ್ಧಿಪಡಿಸುವ ಬದಲಿಗೆ, ಶ ಕಡಿಮೆ ದಾಖಲಾತಿ ನೆಪವೊಡ್ಡಿ  ಶಾಲೆಗಳನ್ನೇ ಕೊಲ್ಲುವ ಕ್ರಮಕ್ಕೆ ಜಿಲ್ಲಾ ಪಂಚಾಯತ್ ಮುಂದಾಗಿರುವುದು ಅತ್ಯಂತ ಖಂಡನೀಯ. ದೂರದ ಹಳ್ಳಿಗಳು ಮತ್ತು ಕಾಡಂಚಿನ ಗ್ರಾಮಗಳಲ್ಲಿ ಬಹುತೇಕ ಶಾಲೆಗಳಲ್ಲಿ 25 ಕ್ಕಿಂತ ಕಡಿಮೆ ದಾಖಲಾತಿಯೇ ಇರುತ್ತದೆ ಹಾಗೂ ಆ ಹಳ್ಳಿಗೆ ಅದೇ ದೊಡ್ಡ ಸಂಖ್ಯೆಯ ದಾಖಲಾತಿ. ಈ ಪ್ರದೇಶಗಳಲ್ಲಿ ಬಹುಪಾಲು ಕೃಷಿ ಕಾರ್ಮಿಕರು ಹಾಗೂ ಕೂಲಿಕಾರರ ಮಕ್ಕಳೇ ಈ ಶಾಲೆಗಳಲ್ಲಿ ಓದುತ್ತಿದ್ದು, ಕಡಿಮೆ ದಾಖಲಾತಿಯ ನೆಪವೊಡ್ದಿ ಶಾಲೆಗಳನ್ನು ಮುಚ್ಚುವ ಈ ನಿಲುವು ಬಡ ರೈತ-ಕಾರ್ಮಿಕರ ವಿರೋಧಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಖಂಡಿಸಿ ಈಗಾಗಲೇ ಜಿಲ್ಲೆಯಾದ್ಯಂತ ಜನ ಹೋರಾಟ ನಡೆಯುತ್ತಿದ್ದು, ಒಂದೇ ಒಂದೇ ಮಗು ಇದ್ದರೂ ಶಾಲೆ ಮುಚ್ಚುವುದಿಲ್ಲ ಎಂದು ಹೇಳುವ ಸರ್ಕಾರವು, ಜಿಲ್ಲಾಡಳಿತದ ಮೂಲಕ ನೂರಾರು ಸರ್ಕಾರಿ ಶಾಲೆಗಳನ್ನು ಕೊಲ್ಲಲು ಮುಂದಾಗಿದೆ. ಇದರ ವಿರುದ್ಧ ಧಾರವಾಡದ ಜನತೆ ಒಂದಾಗಿ ಹೋರಾಟವನ್ನು ಬಲಿಷ್ಠವಾದ ಹೋರಾಟವನ್ನು ಕಟ್ಟಬೇಕೆಂದು ಕರೆ ನೀಡಿದರು.  ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷರಾದ ಸಿಂಧು ಕೌದಿ, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಶರಣಬಸವ ಗೋನವಾರ, ಭುವನ ಬಳ್ಳಾರಿ, ಗಂಗಾ ಕೊಕರೆ, ವೀರಭದ್ರಯ್ಯ ಚಿಕ್ಕಮಠ, ಸದಸ್ಯರಾದ ಯಲ್ಲಪ್ಪ ಸಂಗ್ರೇಸಿಕೊಪ್ಪ, ನಾಗಪ್ಪ ಏಣಗಿ, ಸಿದ್ದು ಚಿಪ್ಪಲಕಟ್ಟಿ ಇತರರು ಇದ್ದರು.