ಗೃಹ ಸಚಿವ ಅಮಿತ್ ಶಾ ಹೇಳಿಕೆಖಂಡಿಸಿ ಪ್ರತಿಭಟನೆ: ಗದ್ದಲ; ಸಂಸದನಿಗೆ ಗಾಯ

Protest against Home Minister Amit Shah's statement: Clash; MP injured

ನವದೆಹಲಿ 19: ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ನೀಡಿದ ಹೇಳಿಕೆ ಪ್ರತಿಪಕ್ಷಗಳ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಅಂಬೇಡ್ಕರ್ ಹೆಸರು ಹೇಳುವುದು ಒಂದು ಫ್ಯಾಷನ್ ಆಗಿದ್ದು, ಇದರ ಬದಲು ದೇವರ ಜಪ ಮಾಡಿದರೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು' ಎಂದು ಅಮಿತ್ ಶಾ ಹೇಳಿದ್ದರು.

ಅಮಿತ್ ಶಾರ ಈ ಹೇಳಿಕೆ ವಿರೋಧಿಸಿದ  ಪ್ರತಿಪಕ್ಷ ಗಳು ಶಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್‌ನ ಸದಸ್ಯರು ನೀಲಿ ಬಣ್ಣದ ಬಟ್ಟೆಯನ್ನು ಧರಿಸಿ ಸಂಸತ್ ಆವರಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಇಂಡಿಯಾಗೆ ವಿರುದ್ಧವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸಂಸದರು ಅಂಬೇಡ್ಕರ್ ಅವರನ್ನು ಅವಮಾನಿಸಿದ ಪ್ರತಿಪಕ್ಷ ಕಾಂಗ್ರೆಸ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತ, ನಾಮಫಲಕಗಳನ್ನು ಹಿಡಿದು ಸಂಸತ್ತಿನ ಆವರಣದೊಳಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಒಂದು ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ಪ್ರತಿಭಟನಾ ಮೆರವಣಿಗೆ ಮುಖಾಮುಖಿಯಾಗಿದ್ದು, ಈ ವೇಳೆ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಅವರು ಗಾಯಗೊಂಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನನ್ನನ್ನು ತಳ್ಳಿದರು ಎಂದು ಸಂಸದ ಸಾರಂಗಿ ಅವರು ಆರೋಪಿಸಿದ್ದಾರೆ. ಆದರೆ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ರಾಹುಲ್ ಗಾಂಧಿ ನಾನು ತಳ್ಳಿಲ್ಲ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ನಾಯಕರು ಸಂಸತ್ತಿನ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಯಿಂದ ಸಂಸತ್ ಭವನದವರೆಗೆ ಜೈ ಭೀಮ್ ಘೋಷಣೆಗಳನ್ನು ಕೂಗುತ್ತ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿದರು.