ದ್ಯಾಮವ್ವದೇವಿ ದುರ್ಗಾದೇವಿ ಮೂರ್ತಿಗಳು ಮೆರವಣಿಗೆ

ದ್ಯಾಮವ್ವದೇವಿ ದುರ್ಗಾದೇವಿ ಮೂರ್ತಿಗಳು ಮೆರವಣಿಗೆ  Procession of idols of Goddess Durga and Goddess Dhyamvadevi

ಕುಂದರಗಿ 01: ಪಲ್ಲಕ್ಕಿಯ ಆಲೋಡನ.... ಮೇಲಿಂದ ಮೋಡದಂತೆ ಆಗಾಗ ಸುರಿದು ಬೀಳುವ ಹೊನ್ನಾಟದ ಭಂಡಾರ... ಅಕ್ಷರಶಃ ಚಿನ್ನದ ಲೇಪಿಸಿಕೊಂಡವರಂತೆ ಕಂಡು ಬರುವ ಭಕ್ತರು.. ಆಗಾಗ ಅವರ ಮೊಗದಲ್ಲಿ ಹರ್ಷ.. ಹೆಂಗಳೆಯರ ಸಡಗರ...ಇಷ್ಟಕ್ಕೆಲ್ಲ ಲಯಕಾರಕ ಹೆಜ್ಜೆಗೆ ಸಂಗೀತದ ಸಾಥ್‌ಒಟ್ಟಾರೆ ಗ್ರಾಮದಲ್ಲಿ ಎಲ್ಲಿ ನೋಡಿದರಲ್ಲಿ ಭಕ್ತಿಯ ಪರಾಕಾಷ್ಠೆ, ದುರ್ಗಾದೇವಿ ಮತ್ತು ದಯಾಮಾಯಿ ದ್ಯಾಮವ್ವಳ ಮೆರವಣಿಗೆ ಅದ್ದೂರಿಯಿಂದ ನಡೆದು ಬಂದಿತು. 

ಗ್ರಾಮದ ಗ್ರಾಮ ದೇವತೆಗಳಾದ ದ್ಯಾಮವ್ವ ಮತ್ತು ದುರ್ಗಾದೇವಿಯ ಉಡಿ ತುಂಬವ ಕಾರ್ಯಕ್ರಮ ಬೇರೊಂದು ಲೋಕವನ್ನೇ ಸೃಷ್ಟಿಸಿತ್ತು. ಬೆಳಗ್ಗೆ ದೇವಸ್ಥಾನದಲ್ಲಿ ದ್ಯಾಮವ್ವ ದುರ್ಗಾದೇವಿ ಮೂರ್ತಿಗೆ ಅಭಿಷೇಕ ಹೂವಿನ ಅಲಂಕಾರ ವಿವಿಧ ಪೂಜೆಗಳು ಜರಗಿದವು, ಗ್ರಾಮದ ಮುಖಂಡರು ಮಹಿಳೆಯರು ಯುವಕರು ಸೇರಿ ಮತ್ತು ತಿಮ್ಮನಗೌಡ ಪಾಟೀಲ್ ಅವರ ಮನೆಯಿಂದ ಆರತಿ ಬಂದ ನಂತರ ಗ್ರಾಮ ದೇವತೆಗಳ ದ್ಯಾಮವ್ವ ದೇವಿ ದುರ್ಗಾದೇವಿಗಳ ಮೂರ್ತಿ ಮೆರವಣಿಗೆ ಪಲ್ಲಕ್ಕಿ ಉತ್ಸವ ಸಕಲ ವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮುಖಾಂತರ ದ್ಯಾಮವ್ವ ದೇವಸ್ಥಾನಕ್ಕೆ ಬಂದು ತಲುಪಿತು.  

ಯುವಕರು ಟ್ರಾಕ್ಟರ್ ಮೇಲೆ ದುರ್ಗಾದೇವಿ ಭಾವಚಿತ್ರ ಇಟ್ಟು ಮೆರವಣಿಗೆಯಲ್ಲಿ ಭಕ್ತರು ಭಂಡಾರ ಎರಚಿ ಭಕ್ತಿ ಭಾವ ವ್ಯಕ್ತಪಡಿಸಿದರು. ಇಡೀ ಗ್ರಾಮವೇ ಸಂಭ್ರಮದ ವಾತಾವರಣ ನಿರ್ಮಾಣವಾಯಿತು. ಸಾಯಂಕಾಲ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಗ್ರಾಮ ದೇವತೆಗಳಾದ ದುರ್ಗಾದೇವಿ ದ್ಯಾಮವ್ವದೇವಿ ಉಡಿ ತುಂಬುವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಗ್ರಾಮ ದೇವತೆಗಳಾದ ದ್ಯಾಮವ್ವದೇವಿ ದುರ್ಗಾದೇವಿ ಮೂರ್ತಿಗೆ ಮೌನೇಶ ಬಡಿಗೇರ ಅವರಿಂದ ಬಣ್ಣ ಮಾಡಲಾಯಿತು ಅವರಿಗೆ ಗ್ರಾಮದ ವತಿಯಿಂದ ಸನ್ಮಾನ ಕಾರ್ಯಕ್ರಮ ಮಾಡಲಾಯಿತು.  

ಗ್ರಾಮದ ಮುಖಂಡರಾದ ತಿಮ್ಮನಗೌಡ ಪಾಟೀಲ ಮಹಾಲಿಂಗಯ್ಯ ದೂಡಮನಿ ಅರವಿಂದಪ್ಪ ಕಂಬಾರ ಇಸ್ಮಾಯಿಲಸಾಬ ಜಮಾದಾರ ರಾಚಯ್ಯ ಬಾರಾಗಣಿ ಮಲ್ಲಪ್ಪ ಬಡಿಗೇರ ಹನುಮಂತ ಬಡಿಗೇರ ಉಮೇಶ ತಳವಾರ ಕಲ್ಲಪ್ಪ ಪಾತ್ರೋಟ ಲಕ್ಷ್ಮಣ ಪಾತ್ರೋಟ ಗಿರಮಲ್ಲಪ್ಪ ಬಡಿಗೇರ ಸೈದಪ್ಪ ಬಡಿಗೇರ ನಾಗಪ್ಪ ಬಡಿಗೇರ ಮುಂತಾದವರು ಇದ್ದರು.