ಕೃಷ್ಣಾ ನೀರಿನ ಸದ್ಬಳಕೆಗೆ ಆದ್ಯತೆ: ಗಣೇಶ ಹುಕ್ಕೇರಿ

ಕೃಷ್ಣಾ ನೀರಿನ ಸದ್ಬಳಕೆಗೆ ಆದ್ಯತೆ: ಗಣೇಶ ಹುಕ್ಕೇರಿ  Priority for optimal use of Krishna water: Ganesh Hukkeri


ಚಿಕ್ಕೋಡಿ 21: ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಪ್ರಗತಿ ಸಾಧಿಸಲು ಚಿಕ್ಕೋಡಿ-ಸದಲಗಾ ಕ್ಷೇತ್ರಕ್ಕೆ ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ತರಲಾಗುತ್ತಿದೆ. ಕ್ಷೇತ್ರದಲ್ಲಿ ಲಭ್ಯವಿರುವ ಕೃಷ್ಣಾ ನದಿ ನೀರನ್ನು ಸಮರ​‍್ಕವಾಗಿ ಬಳಸಿಕೊಂಡು ಸಮಗ್ರ ನೀರಾವರಿ ಯೋಜನೆಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು. ಪಟ್ಟಣದ ಕೃಷಿ ಇಲಾಖೆಯ ಸಮಗ್ರ ಕೃಷಿ ಪದ್ಧತಿ ಶ್ರೇಷ್ಠತಾ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ಹಾಗೂ ಜಿಲ್ಲಾ ಮಟ್ಟದ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಚಿಕ್ಕೋಡಿ-ಸದಲಗಾ ಕ್ಷೇತ್ರ ಕೃಷಿ ಪ್ರಧಾನ ಪ್ರದೇಶವಾಗಿದ್ದು, ಸಾವಿರಾರು ರೈತರು ಕೃಷಿಯನ್ನೇ ಅವಲಂಬಿಸಿದ್ದಾರೆ. ಕೃಷ್ಣಾ ನದಿ ನೀರನ್ನು ಸಮರ​‍್ಕವಾಗಿ ಬಳಸಿಕೊಂಡು ಹೆಚ್ಚಿನ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಮೂಲಕ ಕೃಷಿ ಉತ್ಪಾದಕತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಕೃಷ್ಣಾ ನದಿ ದಂಡೆಯ ಹಲವು ರೈತರ ಜಮೀನುಗಳಲ್ಲಿ ಸವಳು-ಜವಳು ಸಮಸ್ಯೆ ಕಾಣಿಸಿಕೊಂಡಿದ್ದು, ಬೆಳೆ ಉತ್ಪಾದನೆಗೆ ತೊಂದರೆಯಾಗುತ್ತಿದೆ. ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸವಳು-ಜವಳು ನಿವಾರಣೆ ಕಾಮಗಾರಿಗಳಿಗೆ 10 ಕೋಟಿ ಅನುದಾನ ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಮಳೆ ಕೊರತೆಯಿಂದ ರಾಜ್ಯದಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೃಷಿ ಕ್ಷೇತ್ರವೂ ಇದರ ಪರಿಣಾಮ ಎದುರಿಸುತ್ತಿದೆ.

ಇಂತಹ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುವುದರಿಂದ ಸರ್ಕಾರದ ಹೆಚ್ಚಿನ ಸಹಾಯಧನದೊಂದಿಗೆ ದೊರೆಯುವ ಸೋಲಾರ್ ಪಂಪ್ಸೆಟ್ ಯೋಜನೆಯ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು. ಸೌರಶಕ್ತಿ ಬಳಕೆಯಿಂದ ನೀರಾವರಿಗೆ ಅನುಕೂಲವಾಗುವುದರ ಜೊತೆಗೆ ವಿದ್ಯುತ್ ಮೇಲಿನ ಅವಲಂಬನೆಯೂ ಕಡಿಮೆಯಾಗಲಿದೆ ಎಂದು ಹೇಳಿದರು. ಬೆಳಗಾವಿ ಕೃಷಿ ಜಂಟಿ ನಿರ್ದೇಶಕ ಎಚ್‌.ಡಿ. ಕೋಳೆಕರ ಮಾತನಾಡಿ, ಜಿಲ್ಲೆಯಲ್ಲಿ ಸೋಯಾಬೀನ್, ಶೇಂಗಾ, ಸೂರ್ಯಕಾಂತಿ ಹಾಗೂ ಕುಸುಬಿ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ಸುಮಾರು 1.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬೀನ್ ಬೆಳೆಯಲಾಗುತ್ತಿದ್ದು, ಪ್ರಸ್ತುತ ಸರಾಸರಿ 12ರಿಂದ 13 ಕ್ವಿಂಟಲ್ ಇಳುವರಿ ದೊರೆಯುತ್ತಿದೆ.

ಇಳುವರಿ ಹೆಚ್ಚಿಸಲು ರೈತರಿಗೆ ತಾಂತ್ರಿಕ ಮಾಹಿತಿ, ಉತ್ತಮ ಕೃಷಿ ಪದ್ಧತಿಗಳ ತರಬೇತಿ ಹಾಗೂ ಪ್ರಾತ್ಯಕ್ಷಿಕೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು. ಶೇಂಗಾ, ಸೂರ್ಯಕಾಂತಿ ಹಾಗೂ ಕುಸುಬಿ ಬೆಳೆಗಳ ವಿಸ್ತರಣೆಗೆ ಕೃಷಿ ಇಲಾಖೆ ಪ್ರೋತ್ಸಾಹ ನೀಡುತ್ತಿದ್ದು, ರೋಗ-ಕೀಟಗಳ ನಿರ್ವಹಣೆ ಹಾಗೂ ಉತ್ತಮ ಕೃಷಿ ಪದ್ಧತಿಗಳ ಕುರಿತು ರೈತರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ರಮೇಶ ಪಾಟೀಲ, ಸಾಬೀರ ಜಮಾದಾರ, ಶಿವಮೂರ್ತಿ ಪಡಲಾಳೆ, ರಾಮಾ ಮಾನೆ, ಅನೀಲ ಮಾನೆ, ಪಿ.ಐ. ಕೋರೆ, ಸುರೇಶ ಚೌಗಳಾ, ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ, ಗೋಪಾಲ ಖೋತ, ಶ್ಯಾಮ ರೇವಡೆ, ಟಿ.ಎಸ್‌. ಮೋರೆ, ಚಿಕ್ಕೋಡಿ ಉಪ ಕೃಷಿ ನಿರ್ದೇಶಕ ಸದಹೇವ ಯರಗುಪ್ಪ, ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.