ರಾಯರ 355ನೇ ಆರಾಧನಾ ಮಹೋತ್ಸವಕ್ಕೆ ಸಿದ್ಧತೆ

    ರಾಯರ 355ನೇ ಆರಾಧನಾ ಮಹೋತ್ಸವಕ್ಕೆ ಸಿದ್ಧತೆ  Preparations for Rayaru's 355th Aradhana Mahotsava

ಲೋಕದರ್ಶನ ವರದಿ 

ಬಳ್ಳಾರಿ  27: ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನಾಧೀಶ್ವರರಾದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನಾಧೀಶ್ವರರಾದ ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳವರ ಕರಕಮಲ ಸಂಜಾತರಾದ, ಮಂತ್ರಾಲಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ, ಬಳ್ಳಾರಿಯ ಶ್ರೀ ಸತ್ಯನಾರಾಯಣ ಪೇಟೆಯ ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವ ನಡೆಯಲಿದೆ.  

ಆಗಸ್ಟ್‌ 29ರಂದು ಪೂರ್ವಾರಾಧನೆ, 30ರಂದು ಮಧ್ಯಾರಾಧನೆ ಹಾಗೂ 31ರಂದು ಉತ್ತರಾರಾಧನೆ ವಿಶೇಷ ವೈಭವ ಮತ್ತು ಶ್ರದ್ಧಾಭಕ್ತಿಯಿಂದ ಜರುಗಲಿದೆ. ಈಗಾಗಲೇ ಆರಾಧನಾ ಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗಿವೆ.  

ಆಗಸ್ಟ್‌ 26ರಂದು ಋಗ್ವೇದ ನಿತ್ಯ ನೂತನ ಉಪಾಕರ್ಮ ಹಾಗೂ 28ರಂದು ಯಜುರ್ವೇದ ನಿತ್ಯ ನೂತನ ಉಪಾಕರ್ಮ ನಡೆಯಲಿದೆ. ಆಗಸ್ಟ್‌ 31ರಂದು ಬೆಳಗ್ಗೆ 9ಕ್ಕೆ ಮಹಾರಥೋತ್ಸವ ಜರುಗಲಿದೆ. ಸೆಪ್ಟೆಂಬರ್ 1ರಂದು ಬೆಳಗ್ಗೆ 9ರಿಂದ 11.30ರವರೆಗೆ ಸಾಮೂಹಿಕ ಶ್ರೀ ಪವಮಾನ ಹೋಮ ನಡೆಯಲಿದೆ.  

ಆರಾಧನಾ ದಿನಗಳಲ್ಲಿ ಪ್ರತಿದಿನ ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ವೇದ ಪಾರಾಯಣ, ಪಂಚಾಮೃತಾಭಿಷೇಕ, ಕನಕ ಮಹಾಪೂಜೆ, ನೈವೇದ್ಯ, ಅಲಂಕಾರ, ಹಸ್ತೋದಕ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಉತ್ಸವ, ಸ್ವಸ್ತಿ ವಾಚನ, ಮಹಾಮಂಗಳಾರತಿ ಹಾಗೂ ದಾಸವಾಣಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.  

ಆಗಸ್ಟ್‌ 18ರಿಂದ 22ರವರೆಗೆ ಪ್ರತಿದಿನ ಸಂಜೆ ಪಂಡಿತ ವಿಜಯೇಂದ್ರಾಚಾರ್ ಅವರಿಂದ ಪ್ರವಚನ ನಡೆಯಿತು. ಆರಾಧನಾ ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಗುರುರಾಯರ ಸೇವೆ ಸಲ್ಲಿಸಿ ತೀರ್ಥ-ಪ್ರಸಾದ ಹಾಗೂ ಫಲಮಂತ್ರಾಕ್ಷತೆ ಸ್ವೀಕರಿಸಬೇಕೆಂದು ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಮನವಿ ಮಾಡಿದ್ದಾರೆ.