ಬೆಳಗಾವಿ : ಖಾಸಗಿ ಆಸ್ಪತ್ರೆ ಒಂದರಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ಗೆ ಪ್ರೀತ್ಸೆ, ಪ್ರೀತ್ಸೆ ಎಂದು ಪೀಡಿಸುತ್ತಿದ್ದ ಪಾಗಲ್ ಪ್ರೇಮಿ ಯುವಕನ ಪ್ರೀತಿ ನಿರಾಕರಿಸಿದ ನರ್ಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಅಕ್ಟೋಬರ್ 30ರಂದು ಈ ಘಟನೆ ನಡೆದಿದ್ದು, ಆದರೆ ಈಗ ಖಡೇಬಜಾರ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಪ್ರಕಾಶ ಜಾಧವ ಎಂಬಾತ ನರ್ಸ್ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದನು. ಆದರೆ, ಆಕೆ ಆ ಪಾಗಲ್ ಪ್ರೇಮಿಯ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಆತ ಹತಾಶೆಗೊಂಡು ಆಕೆ ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ನೊಂದು ನರ್ಸ್ ತಂದೆ ಸಾವು : ಈ ಘಟನೆಯಿಂದ ನರ್ಸ್ ತಂದೆ ತೀವ್ರ ನೊಂದು ಮೃತಪಟ್ಟಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಮಗಳ ಮೇಲಿನ ದಾಳಿಯಿಂದ ತೀವ್ರ ನೊಂದುಕೊAಡ ತಂದೆ ಸಾವು ಕಂಡಿದ್ದಾರೆ. ಮಗಳ ಸ್ಥಿತಿ ಹೀಗಾಯ್ತಲ್ಲ ಎಂದು ನೊಂದ ಅವರು, ಘಟನೆ ನಡೆದು 15 ದಿನಗಳ ಬಳಿಕ ಮೃತಪಟ್ಟಿದ್ದಾರೆ.
ಆರೋಪಿಯಿಂದ ಮಗಳಿಗೆ ಜೀವ ಬೆದರಿಕೆ ಇರುವ ಬಗ್ಗೆ ಆತಂಕ ಕೊಳಗಾಗಿದ್ದರು. ಇನ್ನು ಮುಂದೆ ಜೈಲಿನಿಂದ ಹೊರಬಂದ ನಂತರ ದಾಳಿಕೋರ ನಮ್ಮ ಮಗಳ ಮೇಲೆ ಏನಾದರೂ ಮಾಡಬಹುದು ಎಂಬ ಆತಂಕ ಅವರನ್ನು ಕಾಡಿದೆ. ಇದೇ ನೋವಿನಿಂದ ಅವರು ಮೃತಪಟ್ಟಿರುವುದಾಗಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ತಂದೆಯನ್ನು ಕಳೆದುಕೊಂಡು ಕಂಗಾಲಾಗುವಂತಾಗಿದೆ.