ಬಟ್ಟಲು ಖಾಲಿಯಾಗದಂತೆ ನಿಗಾ ಇರಲಿ ಸಾಕಿ ಎನ್ನುವ ಪ್ರಸನ್ನ ಅವರ ಗಜಲ್

“ಗಜಲ್ ಗಮಲು” 


ಬದುಕಲಿ ಎಲ್ಲವನು ಕಳೆದುಕೊಂಡರೂ ಪ್ರೀತಿಯೊಂದಿರಲಿ 

ನೆಮ್ಮದಿಗೆ ಏನೂ ಬೇಡ ಅಂದುಕೊಂಡರೂ ಪ್ರೀತಿಯೊಂದಿರಲಿ 

‘ಪ್ರೀತಿಯಿಲ್ಲದೆ ಮೋಡಗಟ್ಟೀತು ಹೇಗೆ, ಮಳೆಯಾದೀತು ಹೇಗೆ, ಹೂ ಅರಳೀತು ಹೇಗೆ?’ ಎಂದು ಕವಿ ಹೇಳಿದ ಹಾಗೆ, ನೆಮ್ಮದಿಯೊಂದನ್ನು ಬಿಟ್ಟು ಬದುಕಲು ಇನ್ನೇನು ಬೇಡ ಎಂದು ತೀರ್ಮಾನಿಸಿದರೂ ಖಂಡಿತ ಪ್ರೀತಿಯ ಸಾಂಗತ್ಯ ಬೇಕೇ ಬೇಕು ಎಂದು ಸಾಬೀತು ಪಡಿಸುವ ಈ ಗಜಲ್ ಸಾಲುಗಳು ಮಂಡಲಗಿರಿ ಪ್ರಸನ್ನ ಅವರದು. ರಾಯಚೂರು ಜಿಲ್ಲೆಯ ಕನಕಗಿರಿಯಲ್ಲಿ ಜನಿಸಿದ ಇವರು ವೃತ್ತಿಯಿಂದ ಇಂಜಿನಿಯರ್‌. ಹಲವು ವರ್ಷಗಳ ಕಾಲ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಪ್ರಾಜೆಕ್ಟ್‌ ಮತ್ತು ಮಾರ್ಕೆಟಿಂಗ್ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಈಗ ಸಂಪೂರ್ಣ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಕಾವ್ಯ, ಕಥೆ, ಮಕ್ಕಳ ಕಾವ್ಯ, ಲಲಿತ ಪ್ರಬಂಧ, ಮಕ್ಕಳ ನಾಟಕ, ಗಜಲ್, ಹೈಕು ಸೇರಿದಂತೆ ನೂರಾರು ಬಿಡಿ ಲೇಖನಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಪತ್ರಕರ್ತರಾಗಿಯೂ ಕೆಲವು ವರ್ಷ ವೃತ್ತಿ ನಿರ್ವಹಿಸಿದ್ದಾರೆ. ಇವರ ‘ಅಮ್ಮ ರೆಕ್ಕೆ ಹಚ್ಚು’ ಮಕ್ಕಳ ಕವಿತೆ ಮಹಾರಾಷ್ಟ್ರದ ಕನ್ನಡ ಭಾರತಿ ಪಠ್ಯದಲ್ಲಿ ಸೇರೆ​‍್ಡಯಾಗಿದೆ. ಕವಿತೆ, ಲಲಿತ ಪ್ರಬಂಧ, ಮಕ್ಕಳ ಕವಿತೆ, ನಾಟಕ, ಸಂಪಾದನೆ, ಲಲಿತ ಪ್ರಬಂಧ ಸೇರಿದಂತೆ ಒಟ್ಟು 12 ಕೃತಿಗಳು ಪ್ರಕಟವಾಗಿವೆ. ‘ನಿದಿರೆ ಇರದ ಇರುಳು’ ಇವರ ಪ್ರಥಮ ಗಜಲ್ ಸಂಕಲನ. ಸಂಕ್ರಮಣ ಕಾವ್ಯ ಪುರಸ್ಕಾರ, ಮಕ್ಕಳ ಸಾಹಿತ್ಯ ರತ್ನ, ಶಿಕ್ಷಣ ಸಿರಿ, ರಾಯಚೂರು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಸಮತಾ ಕಥಾ ಪುರಸ್ಕಾರ ಇವರಿಗೆ ಲಭಿಸಿರುವ ಗೌರವ ಪುರಸ್ಕಾರಗಳಾಗಿವೆ. ಇವರು ಬರೆದ ಗಜಲ್‌ನ ಓದು ಮತ್ತು ಅದರ ಒಳನೋಟವನ್ನು ಗಮನಿಸೋಣ. 

ಗಜಲ್ 


ಅವಳಿರದೆ ಪ್ರತಿಕ್ಷಣ ಹೇಗೆ ಬದುಕಿದೆನೆಂದು ಕೇಳಬೇಡ ಸಾಕಿ 

ಜೀವಂತ ಶವವಾಗಿ ಹೇಗೆ ಉಳಿದೆನೆಂದು ಕೇಳಬೇಡ ಸಾಕಿ 


ವಸಂತ ಪಲ್ಲ"ಸಿದರೂ ಸಂತಸದ ತುಂಬು ಬರದ ಛಾಯೆ 

ಸರಿದಿಹ ಋತುಗಳು ಹೇಗೆ ಕಳೆದೆನೆಂದು ಕೇಳಬೇಡ ಸಾಕಿ 


ಹಗಲು ರಾತ್ರಿಯಲೂ ಬೇಗುದಿಯ ತಲವಾರುಗಳದೆ ಇರಿತ 

ಸತ್ತ ನಿದಿರೆಗೆ ಕನಸು ಹೇಗೆ ಕಟ್ಟಿದೆನೆಂದು ಕೇಳಬೇಡ ಸಾಕಿ 


ನನ್ನೆದೆ ತುಂಬಾ ಹಸಿರು ಹುಣ್ಣಿಮೆ ಅವತರಿಸಿದ ನೋಟ"ತ್ತು 

ಶಿಶಿರದಲು ಬೆಂಕಿಯಾಗಿ ಹೇಗೆ ಉರಿದೆನೆಂದು ಕೇಳಬೇಡ ಸಾಕಿ 


ಇನ್ನೇನು ಹೇಳಲಿ ಮಧುಶಾಲೆಗೆ ಬೀಗ ಹಾಕಬೇಡ ಅಷ್ಟೆ 

ಅದೂ ಮುಚ್ಚಿದರೆ ಹೇಗೆ ಇರುವೆನೆಂದು ಕೇಳಬೇಡ ಸಾಕಿ 


ನಿಗಾ ಇಟ್ಟು 'ಗಿರಿ' ಬಟ್ಟಲು ಖಾಲಿಯಾಗದಂತೆ ನೋಡಿಕೊ 

ಇಷ್ಟು ಕುಡಿದರೂ ಹೇಗೆ ಉಳಿದೆನೆಂದು ಕೇಳಬೇಡ ಸಾಕಿ 


-ಮಂಡಲಗಿರಿ ಪ್ರಸನ್ನ 


ಪ್ರೀತಿ ಎಂಬುದು ಮಧುರ ಅನುಭೂತಿ. ಅಷ್ಟು ಸುಲಭಕ್ಕೆ ಅದರ ಮೋಹಕ ಸೆಳೆತದಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಬಿಟ್ಟೆನೆಂದರೂ ಬಿಡದ ಮೋಹದ ತರಹ ಅದು ಆಯಸ್ಕಾಂತದಂತೆ ಬರಸೆಳೆಯುತ್ತಲೇ ಇರುತ್ತದೆ. ಪ್ರೀತಿಸುವ ಎರಡು ಪುಟ್ಟ ಜೀವಗಳು ಪ್ರೀತಿಯ ತೋಳ ತೆಕ್ಕೆಯಲ್ಲಿ ಬಿದ್ದ ಮೇಲೆ ಜಗದ ಗೊಡವೆಗಳ ಹಂಗಿಲ್ಲದೆ ತಮ್ಮದೇ ಲೋಕದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತವೆ. ಯಾವುದೋ ಒಂದು ಕ್ಷಣ, ಯಾರದೋ ಕೇಡಿಗಣ್ಣು ಆ ಪರಿಶುದ್ಧ ಪ್ರೀತಿಯ ಮೇಲೆ ಬಿದ್ದಿತೋ ಮುಗಿಯಿತು. ಇಷ್ಟು ದಿನ ಬಿಟ್ಟಿರಲಾರದ ಗಟ್ಟಿ ಬಂಧದ ಬಿಗ್ಗಬಿಗಿ ಬಂಧನದಲ್ಲಿದ್ದ ಎರಡು ಜೀವಗಳು ಬೇರೆ ಬೇರೆಯಾಗಿ ಚಡಪಡಿಸುತ್ತವೆ. ನಂತರದ ದಿನಗಳೆಲ್ಲ ವಿರಹ ವೇದನೆಯ ದಳ್ಳುರಿಯಲ್ಲಿ ಬೆಂದು ಇತ್ತ ಬದುಕಲೂ ಆಗದೆ, ಅತ್ತ ಸಾಯಲೂ ಆಗದೆ ಕತ್ತಿಯಲುಗಿನ ದಾರಿಯಂತೆ ಇಂಚಿಂಚೂ ವೇದನೆಗೆ ಮುನ್ನುಡಿ ಬರೆಯುತ್ತದೆ ನೋಡಿ, ಆಗ ಹುಟ್ಟುವುದೇ ಇಂತಹ ಅಪರೂಪದ ಗಜಲ್‌. ಜೀವಕ್ಕೆ ಜೀವವಾದವಳನ್ನು ಬಿಟ್ಟು ಬದುಕಿದ್ದಾದರೂ ಹೇಗೆ ‘ಕೇಳಬೇಡಿ’ ಎನ್ನುತ್ತಲೇ ಎಲ್ಲವನ್ನೂ ಹೇಳಹೊರಡುತ್ತದೆ ಮಂಡಲಗಿರಿ ಪ್ರಸನ್ನ ಅವರ ಈ ಗಜಲ್‌. 

ಅವಳಿರದೆ ಬದುಕಿರುವುದೇ ದೊಡ್ಡ ಪವಾಡ, ಅಂತಹದ್ದರಲ್ಲಿ ‘ನೀನು ಅವಳಿಲ್ಲದೆ ಹೇಗಿದ್ದೀಯಾ?’ ಎಂದು ಯಾರಾದರೂ ಕೇಳಿದರೆ ಹೇಗಾಗಬೇಡ ಹೇಳಿ. ಬದುಕಿದ್ದೂ ಸತ್ತಂತೆ ಇರುವುದಕ್ಕೆ ಪುರಾವೆ, ಅವನ ವಿನಹ ಬೇರೆ ಬೇಡ ಬಿಡಿ. ನಿಸರ್ಗ ತನ್ನ ರೂಪು, ಸೌಂದರ್ಯ ಎಲ್ಲವನ್ನೂ ಬದಲಿಸಿ ಚೈತನ್ಯ ತುಂಬಿದರೂ ಎದೆಬೇಸಿಗೆಯಲ್ಲಿ ಸುಡುಸುಡುವ ಬರಗಾಲದ ಬವಣೆ. ಆಕೆಯಿಲ್ಲದೆ ಕಳೆದ ಋತುಗಳ ಬಣ್ಣಿಸಲು ಪದಗಳೇ ಸಾಲವು. ಹಗಲಿರುಳೂ ಆಕೆಯ ನೆನಪಿನ ಕತ್ತಿಯಿರಿತ. ನಿದ್ದೆ ಜೀವ ಕಳೆದುಕೊಂಡಿದೆ ಎಂದ ಮೇಲೆ ಆಕೆಯ ಕುರಿತಾಗಿ ಕನಸುಗಳ ಕಾಮನಬಿಲ್ಲು ಹೇಗೆ ಮೂಡಿತೆಂದು ಹೇಳುವುದು ಕಷ್ಟ. ಇಂತಹ ಮೈ ಕೊರೆಯುವ ಚಳಿಗಾಲದಲ್ಲೂ ಅವಳು ಹಚ್ಚಿದ ಬೆಂಕಿ ಉರಿದು ಬೂದಿ ಮಾಡಿದ್ದನ್ನು ಹೇಗೆ ಹೇಳಲಿ? ಬೇರೇನೂ ಕೇಳಲಾರೆ ನಿಮ್ಮನ್ನು; ದಯವಿಟ್ಟು ಮಧುಶಾಲೆಗೆ ಬೀಗ ಹಾಕದಿರಿ. ಅದನ್ನೇ ನೀವು ಮುಚ್ಚಿದರೆ ಬದುಕಲಿನ್ನೆಲ್ಲಿಯ ತಾವು? ಕೈಯಲ್ಲಿ ಹಿಡಿದ ಶರಾಬಿನ ಬಟ್ಟಲು ಎಂದಿಗೂ ಖಾಲಿಯಾಗದಂತೆ ನೋಡಿಕೊಳ್ಳಿ; ಇಷ್ಟು ಕುಡಿದರೂ ಇನ್ನೂ ಉಸಿರು ನಿಂತಿಲ್ಲವಲ್ಲ ಎಂದು ಕೇಳಬೇಡಿ. ಆಕೆಯ ಅಗಲಿಕೆಯ ಉರಿಯೇ ಹಾಗೆ, ಅಷ್ಟು ಸುಲಭಕ್ಕೆ ನೆಲಕ್ಕೆ ಕೆಡವಲಾರದು. ಕ್ಷಣ ಕ್ಷಣಕ್ಕೂ ಕೊಂದು ಜೀವಂತವಿರಿಸುತ್ತದೆ. 

ಇಷ್ಟು ವಿರಹ ತೀವ್ರತೆಯಲ್ಲಿ ಹುಟ್ಟಿದ ಗಜಲ್, ಕಳೆದು ಹೋದ ಅವಳನ್ನು, ಅವಳ ನೆನಪನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವುದರ ಮೂಲಕ ಪ್ರೀತಿಯನ್ನು ಮರೆಯುವುದು ಅಷ್ಟು ಸುಲಭವಲ್ಲ ಎಂಬುದನ್ನು ದಾಖಲಿಸುತ್ತದೆ. ಇಂತಹ ಗಜಲ್ ನೀಡಿದ ಮಂಡಲಗಿರಿ ಪ್ರಸನ್ನ ಅವರಿಗೆ ಧನ್ಯವಾದಗಳು.   

ನಾಗೇಶ್ ಜೆ. ನಾಯಕ  

ಶಿಕ್ಷಕರು 

ಮೊ. 9900817716 


- * * * -