ಪ್ರತಿಜ್ಞಾ ದಿನ ಆಚರಣೆ: ಸಮಾನತೆ, ನ್ಯಾಯದ ಭಾರತ ನಿರ್ಮಾಣಕ್ಕೆ ಸಂಕಲ್ಪ

ಪ್ರತಿಜ್ಞಾ ದಿನ ಆಚರಣೆ: ಸಮಾನತೆ, ನ್ಯಾಯದ ಭಾರತ ನಿರ್ಮಾಣಕ್ಕೆ ಸಂಕಲ್ಪ  Pledge Day Celebration: Resolve to build an Equality, Justice India


ಬೆಳಗಾವಿ, ಆ.15: ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಹನೀಯರು ಕಂಡ ಕನಸಿನ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿ-ಯುವಜನರು ಸಂಕಲ್ಪ ತೊಡಬೇಕು ಎಂದು ಆಗ್ರಹಿಸಿ, ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್‌ ಆರ್ಗನೈಸೇಶನ್ (ಎಐಡಿಎಸ್‌ಒ) ವತಿಯಿಂದ ಆ.15ರಂದು ‘ಪ್ರತಿಜ್ಞಾ ದಿನ’ ಆಚರಿಸಲಾಯಿತು.  

ಬೆಳಗಾವಿಯ ಸರ್ದಾರ್ ಕಾಲೇಜು ಸೇರಿದಂತೆ ಕುಟ್ಟಲವಾಡಿ, ಹೊನ್ನಿಹಾಳ, ಇಂದಾಳ ನಗರ, ಮೆಳಿಕೇರಿ ಹಾಗೂ ಹಳ್ಳೂರಿನ ಸರ್ಕಾರಿ ಶಾಲೆಗಳಲ್ಲಿ ಕಾರ್ಯಕ್ರಮಗಳು ನಡೆದವು. ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ ಪ್ರತಿಜ್ಞೆ ಸ್ವೀಕರಿಸಿದರು.  

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು, ದೇಶದ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಹಸಿವು, ನಿರುದ್ಯೋಗ, ಅಸಮಾನತೆ ಮತ್ತು ಅಸುರಕ್ಷಿತ ಪರಿಸ್ಥಿತಿಗಳಿಂದ ಮುಕ್ತ ಭಾರತ ನಿರ್ಮಾಣಕ್ಕಾಗಿ ಶ್ರಮಿಸುವುದಾಗಿ ವಿದ್ಯಾರ್ಥಿಗಳು ಸಂಕಲ್ಪ ಮಾಡಿದರು. ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ಪ್ರತಿಯೊಬ್ಬರಿಗೂ ದೊರೆಯುವ ಸಮಾನತೆಯ ಸಮಾಜ ನಿರ್ಮಾಣದ ಆಶಯವನ್ನು ಪ್ರತಿಜ್ಞೆಯಲ್ಲಿ ವ್ಯಕ್ತಪಡಿಸಲಾಯಿತು.  

ಸ್ವಾತಂತ್ರ್ಯ ದೊರೆತು ಹಲವು ದಶಕಗಳು ಕಳೆದರೂ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸುಗಳು ಸಂಪೂರ್ಣವಾಗಿ ನನಸಾಗಿಲ್ಲ ಎಂದು ಎಐಡಿಎಸ್‌ಒ ಆರೋಪಿಸಿತು. ಶಿಕ್ಷಣದ ವ್ಯಾಪಾರೀಕರಣ, ನಿರುದ್ಯೋಗ, ಮಹಿಳೆಯರ ಮೇಲಿನ ದೌರ್ಜನ್ಯ, ರೈತರ ಆತ್ಮಹತ್ಯೆ ಹಾಗೂ ಸರ್ಕಾರಿ ಶಾಲೆಗಳ ಮುಚ್ಚುವಿಕೆ ಸೇರಿದಂತೆ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಘಟನೆ ಕಳವಳ ವ್ಯಕ್ತಪಡಿಸಿತು.  

ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರು ಕಂಡ ಸಮಾನತೆ ಮತ್ತು ನ್ಯಾಯಾಧಾರಿತ ಭಾರತ ನಿರ್ಮಾಣದ ಜವಾಬ್ದಾರಿ ವಿದ್ಯಾರ್ಥಿ-ಯುವಜನರ ಮೇಲಿದೆ ಎಂದು ಸಂಘಟನೆ ತಿಳಿಸಿತು. ಹುತಾತ್ಮರ ಆಶಯಗಳನ್ನು ಈಡೇರಿಸಲು ವಿದ್ಯಾರ್ಥಿ-ಯುವಜನರು ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಎಐಡಿಎಸ್‌ಒ ಕರೆ ನೀಡಿತು.