ಮಹಾಲಿಂಗಪುರದಲ್ಲಿ ಕಿರಿಯ ಕ್ರಿಕೆಟಿಗರ ಪ್ರತಿಭೆಗೆ ವೇದಿಕೆ; ಟಿ-20 ಪಂದ್ಯಾವಳಿಗೆ ಅದ್ಧೂರಿ ಚಾಲನೆ
Platform for young cricketing talent in Mahalingapura; T-20 tournament kicks off in grand style
ಲೋಕದರ್ಶನ ವರದಿ
ಮಹಾಲಿಂಗಪುರ 13 : ಪಟ್ಟಣದ ಕೋಳಿಗುಡ್ಡ ಮೈದಾನದಲ್ಲಿ ರೆಡ್ಡಿ ಕ್ರಿಕೆಟ್ ಅಕಾಡೆಮಿ ವತಿಯಿಂದ ರಾಯಚೂರು ವಲಯದ 15 ವರ್ಷದೊಳಗಿನ ಶಾಲಾ ಬಾಲಕರಿಗಾಗಿ ಆಯೋಜಿಸಿರುವ ಟಿ-20 ಲೆದರ್ ಬಾಲ್ ತರಬೇತಿ ಪಂದ್ಯಾವಳಿಗೆ ಮಂಗಳವಾರ ಗಣ್ಯರ ಸಮ್ಮುಖದಲ್ಲಿ ಅದ್ಧೂರಿ ಚಾಲನೆ ದೊರೆಯಿತು. ಕಿರಿಯ ವಯಸ್ಸಿನಲ್ಲಿಯೇ ಬಾಲಕರಲ್ಲಿ ಕ್ರಿಕೆಟ್ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ಸ್ಪರ್ಧಾತ್ಮಕ ಅನುಭವ ಒದಗಿಸುವ ಉದ್ದೇಶದಿಂದ ಪಂದ್ಯಾವಳಿ ಆಯೋಜಿಸಲಾಗಿದೆ. ರಾಯಚೂರು ವಲಯದ ವಿವಿಧ ಶಾಲೆಗಳ ತಂಡಗಳು ಪಾಲ್ಗೊಂಡಿದ್ದು, ಪಂದ್ಯಾವಳಿಯ ಆರಂಭದಿಂದಲೇ ಆಟಗಾರರಲ್ಲಿ ಉತ್ಸಾಹ ಹಾಗೂ ಗೆಲುವಿನ ಹುಮ್ಮಸ್ಸು ಕಂಡುಬಂದಿತು.
ಮೊದಲ ಪಂದ್ಯದಲ್ಲಿ ತೇರದಾಳದ ಡಾ. ಸಿದ್ಧಾಂತ ದಾನಿಗೊಂಡ ಸೆಂಟ್ರಲ್ ತಂಡವು ಉತ್ತಮ ಪ್ರದರ್ಶನ ನೀಡಿ ರಬಕವಿಯ ಪದ್ಮಾವತಿ ಇಂಟರ್‌ನ್ಯಾಶನಲ್ ತಂಡವನ್ನು 59 ರನ್‌ಗಳಿಂದ ಮಣಿಸಿತು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ತೇರದಾಳ ತಂಡ ಆರಂಭಿಕ ಪಂದ್ಯದಲ್ಲೇ ಗಮನ ಸೆಳೆಯಿತು. ನಂತರ ನಡೆದ ಮತ್ತೊಂದು ಪಂದ್ಯದಲ್ಲಿ ಸಮೀರವಾಡಿಯ ಕೆ.ಜೆ. ಸೋಮಯ್ಯ ಇಂಗ್ಲಿಷ್ ಮಾಧ್ಯಮ ಶಾಲೆ ತಂಡವು ರಬಕವಿಯ ಎಕ್ಸ್‌ಪರ್ಟ್ ಎಸ್.ಬಿ. ಇಂಟರ್ ನ್ಯಾಶನಲ್ ಸೈನಿಕ ಶಾಲೆ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಮುಂದಿನ ಹಂತದತ್ತ ಹೆಜ್ಜೆ ಹಾಕಿತು.
ಎರಡು ಪಂದ್ಯಗಳಲ್ಲಿಯೂ ಕಿರಿಯ ಆಟಗಾರರು ಆತ್ಮವಿಶ್ವಾಸದಿಂದ ಆಟವಾಡಿ ಪ್ರೇಕ್ಷಕರ ಗಮನ ಸೆಳೆದರು. ಪಂದ್ಯಾವಳಿಯು ಲೀಗ್ ಕಂ ನಾಕೌಟ್ ಮಾದರಿಯಲ್ಲಿ ನಡೆಯುತ್ತಿದ್ದು, ಪ್ರತಿ ಪಂದ್ಯ 20 ಓವರ್‌ಗಳಿಗೆ ಸೀಮಿತವಾಗಿದೆ. ವಿವಿಧ ಶಾಲೆಗಳ ತಂಡಗಳು ಭಾಗವಹಿಸಿರುವುದರಿಂದ ಮುಂದಿನ ಪಂದ್ಯಗಳಲ್ಲಿಯೂ ಉತ್ತಮ ಪೈಪೋಟಿ ನೀರೀಕ್ಷಿಸಲಾಗಿದೆ. ಪಂದ್ಯಾವಳಿಯ ಮೂಲಕ ಆಟಗಾರರಿಗೆ ಲೆದರ್ ಬಾಲ್ ಕ್ರಿಕೆಟ್‌ನ ಅನುಭವ ದೊರೆಯುವುದರ ಜೊತೆಗೆ, ಶಿಸ್ತು, ತಂಡದ ಮನೋಭಾವ, ಸಮಯಪ್ರಜ್ಞೆ ಹಾಗೂ ಕ್ರೀಡಾ ಸ್ಫೂರ್ತಿಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ.
ಡಾ. ಅಶೋಕ ದಿನ್ನಿಮನಿ ಮಾತನಾಡಿ, “ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸಾಕಷ್ಟು ಪ್ರತಿಭಾವಂತ ಕಿರಿಯ ಕ್ರಿಕೆಟಿಗರಿದ್ದಾರೆ. ಆದರೆ ಅವರಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಹಾಗೂ ಉತ್ತಮ ಮಟ್ಟದ ಸ್ಪರ್ಧೆಯ ಅವಶ್ಯಕತೆಯಿದೆ. ಇಂತಹ ಪಂದ್ಯಾವಳಿಗಳು ಬಾಲಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ, ಭವಿಷ್ಯದಲ್ಲಿ ಉತ್ತಮ ಕ್ರಿಕೆಟಿಗರಾಗಿ ಬೆಳೆಯಲು ಪ್ರೇರಣೆ ನೀಡುತ್ತವೆ. ಕ್ರೀಡೆಯೊಂದಿಗೆ ಶಿಸ್ತು ಮತ್ತು ಪರಿಶ್ರಮವನ್ನು ರೂಢಿಸಿಕೊಂಡರೆ ಯಶಸ್ಸು ಸಾಧಿಸಲು ಸಾಧ್ಯ” ಎಂದು ಹೇಳಿದರು. ರಾಯಚೂರು ವಲಯದ ಕಿರಿಯ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಲು ಅವಕಾಶ ಕಲ್ಪಿಸಿರುವ ರೆಡ್ಡಿ ಕ್ರಿಕೆಟ್ ಅಕಾಡೆಮಿಯ ಪ್ರಯತ್ನಕ್ಕೆ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರು ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ರಾಜ್ಯಮಟ್ಟದ ಕ್ರಿಕೆಟ್‌ಗೆ ಪ್ರವೇಶಿಸುವ ನೀರೀಕ್ಷೆಯೂ ಮೂಡಿದೆ. ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮನೋಹರ ಶಿರೋಳ, ಮಹಾದೇವ ಕಡಬಲ್ಲವರ, ಕಾರ್ತಿಕೇಯನ್, ಸಿದ್ದು ಬೆಕ್ಕೇರಿ, ಮಹೇಶ್ ರೆಡ್ಡಿ ಹಾಗೂ ಮುತ್ತು ಹೊಸಪೇಟಿ ಸೇರಿದಂತೆ ಗಣ್ಯರು, ಕ್ರೀಡಾಭಿಮಾನಿಗಳು, ತರಬೇತುದಾರರು ಹಾಗೂ ಆಟಗಾರರು ಉಪಸ್ಥಿತರಿದ್ದರು.
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 