ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದರೆ ಜನರ ಅಭಿವೃದ್ಧಿ ಸಾಧ್ಯ
People's development is possible if officials work in coordination
ಬಳ್ಳಾರಿ 25: ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದರೆ ಮಾತ್ರ, ಜನರ ಅಭಿವೃದ್ಧಿ ಸಾಧ್ಯ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಜಿಲ್ಲಾ ಮಟ್ಟದ ದಿಶಾ ಸಮಿತಿಯ ಅಧ್ಯಕ್ಷರೂ ಆದ ಈ.ತುಕಾರಾಮ್ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ನ ಹೊಸ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಬುಧವಾರ ಎಪಡಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ “ದಿಶಾ” ಸಮಿತಿಯ ಮೂರನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಧಿಕಾರಿಗಳು ತಮ್ಮ ಇಲಾಖೆಗಳ ಸಮಗ್ರ ಮಾಹಿತಿಯನ್ನು ಕನ್ನಡಿಯಂತೆ ಸಿದ್ಧವಿಟ್ಟುಕೊಂಡು ಸಭೆಗಳಲ್ಲಿ ಪ್ರಸ್ತುತಪಡಿಸಬೇಕು. ಇದರಿಂದ ಜನರ ಅಭಿವೃದ್ಧಿಗೆ ಬೇಕಾದ ಸಮರ್ಕ ಅನುದಾನ ಕುರಿತು ಸರ್ಕಾರಗಳ ಮುಂದೆ ಪ್ರಸ್ತಾಪಿಸಲು ಸಾಧ್ಯವಾಗುತ್ತದೆ ಎಂದರು.
*ಪಿಎಂಎಫ್‌ಎಂಇ ಯೋಜನೆ ಸಾಕಾರಗೊಂಡಿಲ್ಲ:*
ಅಸಂಘಟಿತ ವಲಯದಲ್ಲಿನ ಸಣ್ಣ ಆಹಾರ ಸಂಸ್ಕರಣಾ ಘಟಕಗಳನ್ನು ಉತ್ತೇಜಿಸಲು, ಅವರಿಗೆ ಸಾಲ ಸೌಲಭ್ಯ ನೀಡಲು ಪ್ರಧಾನ ಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳ ಯೋಜನೆಯಡಿ ಲೋನ್ ಗಾಗಿ ಸಲ್ಲಿಸಿದ ಅರ್ಜಿಗಳಲ್ಲಿ ಮಂಜೂರಾತಿಗಳಿಗಿಂತ ತಿರಸ್ಕಾರಗೊಂಡಿರುವ ಅರ್ಜಿಗಳೇ ಹೆಚ್ಚಾಗಿದ್ದು, ಯಾವ ಕಾರಣಕ್ಕೆ ತಿರಸ್ಕಾರಗೊಂಡಿವೆ? ಎಂದು ಪ್ರಶ್ನಿಸಿದ ಸಂಸದರು, ಈ ಯೋಜನೆಯು ಜಿಲ್ಲೆಯಲ್ಲಿ ಸಾಕಾರಗೊಂಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಬ್ಯಾಂಕ್ ಅಧಿಕಾರಿಗಳಿಗೆ ರೈತರ ಮೇಲೆ ಕಾಳಜಿ ಇಲ್ಲ. ಅವರ ಹಣದಿಂದಲೇ ಬ್ಯಾಂಕ್ ಗಳು ವ್ಯವಹಾರ ನಡೆಸುತ್ತಿವೆ. ಮುಖ್ಯವಾಗಿ ಜಿಲ್ಲಾ ಲೀಡ್ ಬ್ಯಾಂಕ್ ಸಭೆಗಳು ನಡೆಯುತ್ತಿಲ್ಲ. ಕೃಷಿ, ತೋಟಗಾರಿಕೆ ಅಧಿಕಾರಿಗಳು ರೈತರ ಲೋನ್ ಅರ್ಜಿಗಳಿಗೆ ಸಂಬಂಧಿಸಿದಂತೆ ಬೇಕಾದ ಪೂರಕ ದಾಖಲೆಗಳ ಮಾಹಿತಿ ನೀಡಬೇಕು. ಬೆಳೆವಿಮೆ ನೋಂದಣಿಗೆ ಹೆಚ್ಚಾಗಿ ಕಾಳಜಿ ವಹಿಸಬೇಕು. ರೈತರ ಪ್ರೋತ್ಸಾಹಕ್ಕೆ ಬೆನ್ನೆಲುಬಾಗಬೇಕು ಎಂದರು.
*ಮಾದರಿ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿಸಿ:*
ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಲಭ್ಯವಿರುವ ಶೆಡ್ ಬಳಕೆಯಾಗುತ್ತಿಲ್ಲ, ರಸ್ತೆಯಲ್ಲಿ ರೈತರು ಉತ್ಪನ್ನ ಮಾರಾಟ ಮಾಡುತ್ತಿದ್ದಾರೆ. ಅವರಿಗೆ ಅಲ್ಲಿಗೆ ಹೋಗುವಂತೆ ನಿರ್ದೇಶನ ನೀಡಬೇಕು. ಸಂಡೂರು ತಾಲ್ಲೂಕಿನಲ್ಲಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕ ವಾಹನ ತೂಕ ಸೇತುವೆ ನಿರ್ಮಿಸಲಾಗಿದ್ದು, ನಿರ್ವಹಣೆ ಇಲ್ಲದೇ ತುಕ್ಕು ಹಿಡಿಯುತ್ತಿದೆ. ಕೇಂದ್ರ, ರಾಜ್ಯ ಅನುದಾನ ದುರ್ಬಳಕೆಯಾಗಿದೆ. ಜವಾಬ್ದಾರಿ ಇದೆಯೇ? ಎಂದು ಎಪಿಎಂಸಿ ಉಪನಿರ್ದೇಶಕರಿಗೆ ಪ್ರಶ್ನಿಸಿದರು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಅತ್ಯಾಧುನಿಕ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣ ಮಾಡಲು ಮಾಸ್ಟರ್ ಪ್ಲಾನ್ ರೂಪಿಸಬೇಕು ಎಂದು ತಿಳಿಸಿದರು.
*ಕಾಲೇಜುಗಳಿಗೆ ಸಿಸಿಟಿವಿ ಅಳವಡಿಸಲು ಸೂಚನೆ:*
ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ ಕಂಡುಬರುತ್ತಿವೆ. ರಾತ್ರಿ ವೇಳೆ ಗಸ್ತು ಪಡೆ ಹೆಚ್ಚಿಸಬೇಕು. ಇಸ್ಪೀಟ್, ಜೂಜಾಟ, ಅಕ್ರಮ ದಂಧೆ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಎಸ್ಪಿಯವರಿಗೆ ಸೂಚಿಸಿದ ಸಂಸದರು, ನಗರದಲ್ಲಿ ಪದವಿ, ಪದವಿಪೂರ್ವ ಕಾಲೇಜುಗಳಲ್ಲಿ ರಾ್ಯಗಿಂಗ್ ಚಟುವಟಿಕೆ ಕಂಡುಬರುತ್ತಿದ್ದು, ಕಾಲೇಜು ಆವರಣಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
*ಕಾಗದರಹಿತ ಸಭೆ ನಡೆಸಲು ಮುಂದಡಿ:*
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಗೆ ಹಂಚಿಕೆಯಾದ ಅನುದಾನ ಮಾಹಿತಿ, ಅನುಷ್ಠಾನದ ವಿವರ, ಕಾಮಗಾರಿ ಪ್ರಗತಿ ಹಾಗೂ ಅಧಿಕಾರಿಗಳ ಸಮಯ ಉಳಿತಾಯಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡು ತಹಶೀಲ್ದಾರ್, ತಾಪಂ ಇಓ ಗಳಿಗೆ ಎನ್‌ಎಂಡಿಸಿ ಸಿಎಎಸ್‌ಆರ್ ಅನುದಾನದಡಿ ಜೂನ್ ಒಳಗಾಗಿ ಟ್ಯಾಬ್ ವಿತರಿಸಲು ಮುಂದಡಿ ಇಡಲಾಗುವುದು. ಇದರಿಂದ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಬಳ್ಳಾರಿಯಲ್ಲಿ ಪಾರ್ಲಿಮೆಂಟ್ ಮಾದರಿಯಲ್ಲಿ ಕಾಗದರಹಿತ ಡಿಜಿಟಲ್ ದಿಶಾ, ಕೆಡಿಪಿ ಸಭೆ ನಡೆಸಲಾಗುವುದು ಎಂದರು.
ಸಮಗ್ರ ಶಿಕ್ಷಣ ಅಭಿಯಾನದಡಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಕ್ರೀಡಾ ಸಾಮಾಗ್ರಿ ಖರೀದಿ, ಶಾಲೆಗಳಲ್ಲಿ ಪರಿಸರ ಹಸಿರುಕರಣ ಹಾಗೂ ಇತರೆ ಕೌಶಲ ತರಬೇತಿ ಕಾರ್ಯಕ್ರಮಗಳಿಗಾಗಿ ಬಿಡುಗಡೆಯಾದ ಅನುದಾನ ಮಾಹಿತಿ ನೀಡಬೇಕು ಎಂದು ಡಿಡಿಪಿಐ ಅಧಿಕಾರಿಗೆ ತಿಳಿಸಿದರು.
ಸರ್ಕಾರಿ ಆಸ್ಪತೆಗಳಲ್ಲಿ ಓಷಧಿ ಕೊರತೆ ಇದೆ ಎಂಬುದರ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಆರೋಗ್ಯ ಸಚಿವ ಡಾ.ದಿನೇಶ್ ಗುಂಡೂರಾವ್ ಅವರು ಈಗಾಗಲೇ ಅಗತ್ಯ ಕ್ರಮ ವಹಿಸಿದ್ದಾರೆ. ಜಿಲ್ಲೆಯಲ್ಲಿ ಯಾವುದಾದರೂ ಆಸ್ಪತ್ರೆಗಳಲ್ಲಿ ಓಷಧಿ ಕೊರತೆ ಕಂಡುಬಂದಿದೆಯೇ? ಎಂದು ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ವಿಚಾರಿಸಿದರು. ಇದಕ್ಕೆ ಪ್ರತ್ರಿಕ್ರಿಯಿಸಿದ ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು ಅವರು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಓಷಧಿಗಳ ಕೊರತೆ ಕಂಡುಬಂದಿಲ್ಲ ಎಂದು ಸಭೆಗೆ ತಿಳಿಸಿದರು.
ನಗರದ ಟಿಬಿ ಸೆಂಟರ್ ಜಂಕ್ಷನ್ ನಿಂದ ಹೊರವಲಯದ ವೇಣಿವೀರಾಪುರ ಬಳಿಯ ಎನ್ ಹೆಚ್ ರಸ್ತೆಗೆ ಕೂಡುವಂತೆ 4 ಲೇನ್ ರಸ್ತೆ, ಅಲ್ಲಿಂದ (ವೇಣಿ ವೀರಾಪುರ ಬಳಿಯಿಂದ) ಸಿರುಗುಪ್ಪ ರಸ್ತೆಗೆ ತಲುಪುವ ರಿಂಗ್ ರೋಡ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಅನುಮತಿ ಪಡೆಯಲು ಸೂಕ್ತವಾದ ವೈಜ್ಞಾನಿಕ ವರದಿ ತಯಾರಿಸಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು. ಅದೇ ರೀತಿಯಾಗಿ ಬಳ್ಳಾರಿ- ಸಿರುಗುಪ್ಪ ಗೆ ಹೋಗುವ ರಸ್ತೆ ನಿರ್ಮಾಣ ಕಾಮಗಾರಿಗೆ ವೇಗ ನೀಡಬೇಕು ಎಂದು ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ಬೇಸಿಗೆ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಆರ್‌ಓ ಘಟಕಗಳನ್ನು ದುರಸ್ತಿ ಮಾಡಿಟ್ಟುಕೊಳ್ಳಬೇಕು. ಕುಡಿಯುವ ನೀರಿಗೆ ಹಾಹಾಕಾರವಾಗದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಬಾಲ್ಯವಿವಾಹ, ಪೋಕ್ಸೋ ಕಾಯ್ದೆ ಕುರಿತು ಕಲಾವಿದರ ಮೂಲಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಸರ್ಕಾರಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರಿಂದ ಸಮುದಾಯಗಳ ಮೇಲೆ ಪರಿಣಾಮ ಬೀರಲಿದೆ ಎಂದರಲ್ಲದೇ, ಅರಣ್ಯ ಹಕ್ಕು ಸಮಿತಿ ಬಗ್ಗೆ ಅರಿವು ಹೊಂದಬೇಕು. ಒಟ್ಟಾರೆ ಅಧಿಕಾರಿಗಳು ಮಾನವೀಯತೆಯ ಕೆಲಸ ಮಾಡಬೇಕು ಎಂದರು.
ರಾಜ್ಯ ಸಭೆ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಆರೋಗ್ಯ ನ್ಯೂನ್ಯತೆಗಳನ್ನು ಗುರುತಿಸಬೇಕು.ಇದರಿಂದ ಮಕ್ಕಳನ್ನು ಸದೃಢರನ್ನಾಗಿಸಲು ಕೈಗೊಳ್ಳಬಹುದಾದ ಯೋಜನೆಗಳನ್ನು ರೂಪಿಸಬಹುದು ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ವಿವಿಧ ಇಲಾಖೆಗಳ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿ ಸೂಕ್ತ-ಸಲಹೆ ಸೂಚನೆ ನೀಡಿದರು.
ಈ ವೇಳೆ ಸಂಡೂರು ಶಾಸಕರಾದ ಈ.ಅನ್ನಪೂರ್ಣ, ವಿಧಾನ ಪರಿಷತ್ ಶಾಸಕ ವೈ.ಎಂ.ಸತೀಶ್, ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್. ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರಿಸ್ ಸುಮೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ ಪೆನ್ನೇಕರ್, ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್. ಬಸವರಾಜ, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಪಂ ಇಓ ಗಳು ಹಾಗೂ ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 