ಪಾಕಿಸ್ತಾನ ಯಾರೊಬ್ಬರ ಯುದ್ಧದ ಭಾಗವಾಗುವುದಿಲ್ಲ: ಅಮೆರಿಕ-ಇರಾನ್ ಬಿಕ್ಕಟ್ಟು ಕುರಿತು ಇಮ್ರಾನ್ ಪ್ರತಿಕ್ರಿಯೆ

ಇಸ್ಲಾಮಾಬಾದ್, ಜ 10, ಅಮೆರಿಕ ಮತ್ತು ಇರಾನ್ ನಡುವಿನ ಬಿಕ್ಕಟ್ಟು ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನ ಯಾರೊಬ್ಬರ ಯುದ್ಧದ ಭಾಗವಾಗದೆ ಎರಡೂ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪ್ರಯತ್ನಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. ‘ನಾವು ಇರಾನ್ ಮತ್ತು ಅಮೆರಿಕ ನಡುವೆ ಸ್ನೇಹ ಬಾಂಧವ್ಯ ಪುನರ್ ಸ್ಥಾಪಿಸಲು ಪ್ರಯತ್ನಿಸುತ್ತೇವೆ. ಅಮೆರಿಕ ಮತ್ತು ಇರಾನ್ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಯುವಂತಾಗಲು ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಲು ಸಿದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಿಳಿಸಲಾಗಿದೆ.’ ಎಂದು ಇಮ್ರಾನ್ ಖಾನ್ ಹೇಳಿಕೆಯನ್ನು ಉಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿದೆ.‘ಪಾಕಿಸ್ತಾನ ಈ ಹಿಂದೆ ಮತ್ತೊಂದು ದೇಶದ ಯುದ್ಧದಲ್ಲಿ ಭಾಗಿಯಾಗಿ ತಪ್ಪು ಮಾಡಿರುವುದರಿಂದ ಮತ್ತೆ ಇನ್ನೊಂದು ದೇಶದ ಯುದ್ಧದಲ್ಲಿ ಭಾಗಿಯಾಗಲು ಇಚ್ಛಿಸುವುದಿಲ್ಲ.’ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ‘ಯುದ್ಧಗಳಲ್ಲಿ ಯಾರೊಬ್ಬರೂ ವಿಜಯ ಸಾಧಿಸಿದ್ದಾರೆಂದು ಹೇಳಲು ಆಗುವುದಿಲ್ಲ. ಏಕೆಂದರೆ ಜಯ ಸಾಧಿಸಿದವನೇ ನಷ್ಟ ಕಂಡಿರುತ್ತಾನೆ. ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಪಾಕಿಸ್ತಾನ ಭಾಗಿಯಾಗುವುದರೊಂದಿಗೆ ಭಾರೀ ಬೆಲೆ ತೆರೆದಿದೆ. ಇದೀಗ ಪಾಕಿಸ್ತಾನ ಯುದ್ಧಗಳಲ್ಲಿ ಭಾಗಿಯಾಗುವುದಿಲ್ಲ. ಆದರೆ, ದೇಶಗಳನ್ನು ಒಂದುಗೂಡಿಸಲು ಪ್ರಯತ್ನಿಸುತ್ತದೆ.’ ಎಂದು ಅವರು ಹೇಳಿದ್ದಾರೆ.