ಇಂದಿನಿಂದ ಪಿ.ವಿ.ನರಸಿಂಹರಾವ್ ಜನ್ಮ ಶತಮಾನೋತ್ಸವ ವರ್ಷ: ಮನ್ ಕಿ ಬಾತ್ ನಲ್ಲಿ ಪಿವಿಎನ್ ಕೊಂಡಾಡಿದ ಮೋದಿ

ನವದೆಹಲಿ, ಜೂ, 28: ಹಿರಿಯ ಕಾಂಗ್ರೆಸ್ ಮುಖಂಡ ಪಿ.ವಿ. ನರಸಿಂಹ ರಾವ್ ಅವರ ಸಾಧನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದಾರೆ. ಕಾಂಗ್ರೆಸ್ ಪಕ್ಷ ನಾಚಿಸುವಂತೆ ನರಸಿಂಹರಾವ್ ಅವರ ಕಾರ್ಯವೈಖರಿ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಆಕಾಶವಾಣಿಯ ತಮ್ಮ ಮನ್ ಕಿ ಬಾತ್ ನಲ್ಲಿ ಕಾರ್ಯಕ್ರಮದಲ್ಲಿ ಪಿ.ವಿ.ಎನ್ ಅವರನ್ನು ಸ್ಮರಿಸಿಕೊಂಡಿದ್ದಾರೆ. “ ಇಂದು ಜೂನ್ ೨೮ರಂದು ದೇಶ ನಮ್ಮ ಹಿಂದಿನ ಪ್ರಧಾನಮಂತ್ರಿಯೊಬ್ಬರಿಗೆ ಗೌರವ ಸಲ್ಲಿಸುತ್ತಿದೆ. ಅವರು ಅತ್ಯಂತ ಸೂಕ್ಷ್ಮ ಸಮಯದಲ್ಲಿ ದೇಶವನ್ನು ಮುನ್ನಡೆಸಿದ್ದಾರೆ. ಅವರೇ ಹಿಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್. ಅವರ ಜನ್ಮಶತಾಬ್ದಿ ವರ್ಷ ಇಂದಿನಿಂದ ಆರಂಭವಾಗುತ್ತಿದೆ. ಪಿ.ವಿ.ಎನ್ ಅವರ ಬಗ್ಗೆ ಮಾತನಾಡುವಾಗ, ಸ್ವಾಭಾವಿಕ ರೂಪದಲ್ಲಿ ಹಾಗೂ ರಾಜಕೀಯ ನೇತಾರನ ರೂಪದಲ್ಲಿ ಅವರ ಚಿತ್ರ ಕಣ್ಮುಂದೆ ಬರುತ್ತದೆ. ಅವರು ಅನೇಕ ಭಾಷೆಗಳನ್ನು ಅರಿತಿದ್ದರು ಎನ್ನುವುದೂ ಸತ್ಯ. ಭಾರತೀಯ ಹಾಗೆಯೇ ವಿದೇಶಿ ಭಾಷೆಗಳಲ್ಲಿಯೂ ಅವರು ಮಾತನಾಡುತ್ತಿದ್ದರು”  ಎಂದಿದ್ದಾರೆ.

ಒಂದು ರೀತಿಯಲ್ಲಿ ಪಿ.ವಿ.ಎನ್ ಅವರು ಭಾರತೀಯ ಮೌಲ್ಯಗಳಿಂದ ರೂಪುಗೊಂಡಿದ್ದರೆ, ಇನ್ನೊಂದು ಕಡೆ ಪಾಶ್ಚಾತ್ಯ ಸಾಹಿತ್ಯ, ವಿಜ್ಞಾನದ ಬಗ್ಗೆಯೂ ಜ್ಞಾನ ಹೊಂದಿದ್ದರು. ಅವರು ಭಾರತದ ಅತ್ಯಂತ ಅನುಭವಿ ನೇತಾರರಲ್ಲಿ ಒಬ್ಬರಾಗಿದ್ದರು. ಅವರ ಜೀವನದ ಮತ್ತೊಂದು ಅಂಶವೂ ಉಲ್ಲೇಖನೀಯವಾಗಿದೆ, ಆ ಬಗ್ಗೆ ನಾವು ತಿಳಿದುಕೊಳ್ಳಬೇಕಿದೆ. ನರಸಿಂಹರಾವ್  ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಹೈದರಾಬಾದ್ ನಿಜಾಮ ವಂದೇ ಮಾತರಂ ಗೀತೆಗೆ ಅನುಮತಿ ನೀಡಲು ನಿರಾಕರಿಸಿದ್ದ ಸಮಯದಲ್ಲಿ ಆತನ ವಿರುದ್ಧ ನಡೆದಿದ್ದ ಆಂದೋಲನದಲ್ಲಿ ನರಸಿಂಹರಾವ್ ಕೂಡ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ಅವರಿಗೆ ಕೇವಲ ೧೭ ವರ್ಷ. ಸಣ್ಣ ವಯಸ್ಸಿನಿಂದಲೇ ನರಸಿಂಹ ರಾವ್ ಅವರು ಅನ್ಯಾಯದ ವಿರುದ್ಧ ದನಿ ಎತ್ತುವಲ್ಲಿ ಮುಂಚೂಣಿಯಲ್ಲಿದ್ದರು. ತಮ್ಮ ದನಿ ಎತ್ತುವಲ್ಲಿ  ಅವರು ಯಾವುದೇ ಪ್ರಯತ್ನವನ್ನೂ ಬಾಕಿ ಉಳಿಸುತ್ತಿರಲಿಲ್ಲ ಎಂದಿದ್ದಾರೆ. ನರಸಿಂಹ ರಾವ್ ಇತಿಹಾಸವನ್ನು  ಚೆನ್ನಾಗಿ ಅರಿತಿದ್ದರು. ಅತ್ಯಂತ ಸಾಧಾರಣ ಹಿನ್ನೆಲೆಯಿಂದ ಮೇಲೆ ಬಂದಿದ್ದ ಅವರು,  ಶಿಕ್ಷಣದ ಮೇಲೆ ಅವರ ಹಿಡಿತ, ಕಲಿಯುವ  ಪ್ರವೃತ್ತಿ ಹಾಗೂ ಇವೆಲ್ಲದರ ಜತೆಗೆ, ಅವರ ನೇತೃತ್ವ ಸಾಮರ್ಥ್ಯ ಎಲ್ಲವೂ ಸ್ಮರಣೀಯ. ನರಸಿಂಹ ರಾವ್ ಅವರ ಜನ್ಮಶತಾಬ್ದಿ ವರ್ಷದಲ್ಲಿ ತಾವೆಲ್ಲ ಅವರ ಜೀವನ ಹಾಗೂ ವಿಚಾರಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ.