ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಹೊರಗುತ್ತಿಗೆ ನೌಕರರ ಮನವಿ

ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಹೊರಗುತ್ತಿಗೆ ನೌಕರರ ಮನವಿ  Outsourced employees' appeal demanding implementation of minimum wage

ಲೋಕದರ್ಶನ ವರದಿ

ವಿಜಯನಗರ, ಆ.4: ರಾಜ್ಯ ಸರ್ಕಾರವು 2026ರ ಮೇ 22ರಂದು ಹೊರಡಿಸಿರುವ ಅಂತಿಮ ಅಧಿಸೂಚನೆಯಂತೆ ಕನಿಷ್ಠ ವೇತನವನ್ನು ಜಾರಿಗೊಳಿಸಬೇಕು ಹಾಗೂ ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.  

ರಾಜ್ಯ ಸರ್ಕಾರವು ಮೇ 22ರಿಂದಲೇ ಹೊಸ ಕನಿಷ್ಠ ವೇತನ ಜಾರಿಗೆ ಆದೇಶ ಹೊರಡಿಸಿದ್ದು, ಕಾರ್ಮಿಕ ಇಲಾಖೆ ಜೂನ್ 8ರಂದು ಸಂಬಂಧಿಸಿದ ಎಲ್ಲ ಇಲಾಖೆಗಳಿಗೂ ಈ ಕುರಿತು ನಿರ್ದೇಶನ ನೀಡಿದೆ. ಆದರೂ ವಿಜಯನಗರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕ್ರೀಡಾ ವಸತಿ ಶಾಲೆಗಳು ಹಾಗೂ ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ಕೆಲವು ಇಲಾಖೆಗಳಲ್ಲಿ ಹೊಸ ಕನಿಷ್ಠ ವೇತನವನ್ನು ಇನ್ನೂ ಜಾರಿಗೊಳಿಸಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.  

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಹೊರಗುತ್ತಿಗೆ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ನೌಕರರ ಸಂಘದ ಪದಾಧಿಕಾರಿಗಳ ಸಭೆ ಕರೆಯಿಸಿ, ಕನಿಷ್ಠ ವೇತನವನ್ನು ತಕ್ಷಣದಿಂದಲೇ ಜಾರಿಗೊಳಿಸುವಂತೆ ಸಂಘ ಆಗ್ರಹಿಸಿದೆ.  

ಸಂಘವು ಸಲ್ಲಿಸಿರುವ ಪ್ರಮುಖ ಬೇಡಿಕೆಗಳಲ್ಲಿ ಮೇ 22ರಿಂದಲೇ ಕನಿಷ್ಠ ವೇತನದ ಬಾಕಿ ಮೊತ್ತ ಪಾವತಿಸುವುದು, ನೇಮಕಾತಿ ಆದೇಶ, ಸೇವಾ ಪ್ರಮಾಣಪತ್ರ, ಗುರುತಿನ ಚೀಟಿ, ವೇತನ ಚೀಟಿ, ಪಿಎಫ್ ಹಾಗೂ ಇಎಸ್‌ಐ ಮಾಹಿತಿಯನ್ನು ನೌಕರರಿಗೆ ಕಡ್ಡಾಯವಾಗಿ ನೀಡುವುದು, 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಅಥವಾ ಕಾಯಂ ನೇಮಕಾತಿ ಕಲ್ಪಿಸುವುದು ಹಾಗೂ ವಾರದ ರಜೆ ನೀಡುವುದು ಸೇರಿವೆ.  

ಈ ಸಂದರ್ಭದಲ್ಲಿ ತಿಮ್ಮಪ್ಪ, ಎಂ. ಚಂದ್ರಶೇಖರ, ಜಿ. ಪರಸಪ್ಪ, ದುರುಗೇಶ್, ಶಿವಪ್ಪ, ರಮೇಶ್, ರಾಘವೇಂದ್ರ, ಪವಿತ್ರಾ, ಪ್ರೇಮಾ, ಕಾಳಮ್ಮ, ಸೀತಮ್ಮ, ಅಂಬಿಕಾ, ಸರೋಜ, ರಾಧಾ, ತಾಯಮ್ಮ, ಶಂಭುಲಿಂಗಪ್ಪ, ಹುಲಿಗೆಮ್ಮ, ರಾಮಕ್ಕ, ಗಡಿಗೆಯ್ಯ, ಕಾಡಪ್ಪ, ಪಾರ್ವತಿ, ಮಂಜುಳಾ, ಫರೀದಾ ಬೇಗಂ, ಪ್ರಭಾವತಿ, ಪುಷ್ಪಾವತಿ, ಶರಣಪ್ಪ, ಪುರುಷೋತ್ತಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.