ಮಂತ್ರಿ ಸ್ಥಾನ ತಪ್ಪಿದ ಹಿನ್ನೆಲೆ: ಕೊಪ್ಪಳದಲ್ಲಿ ಹಿಟ್ನಾಳ್ ಬೆಂಬಲಿಗರ ಆಕ್ರೋಶ

ಮಂತ್ರಿ ಸ್ಥಾನ ತಪ್ಪಿದ ಹಿನ್ನೆಲೆ: ಕೊಪ್ಪಳದಲ್ಲಿ ಹಿಟ್ನಾಳ್ ಬೆಂಬಲಿಗರ ಆಕ್ರೋಶ  Outrage among Hitnal's supporters in Koppal after he missed out on a ministerial berth

ಕೊಪ್ಪಳ, ಆ. 3: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರಿಗೆ ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಮೂರು ಬಾರಿ ಸತತವಾಗಿ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗಲಿದೆ ಎಂಬ ನೀರೀಕ್ಷೆ ಇತ್ತು. ಆದರೆ ಸಚಿವ ಸಂಪುಟದಲ್ಲಿ ಅವರಿಗೆ ಅವಕಾಶ ದೊರೆಯದಿರುವುದು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರಲ್ಲಿ ನಿರಾಸೆ ಮೂಡಿಸಿದೆ.  

ಈ ಕುರಿತು ಪ್ರತಿಕ್ರಿಯಿಸಿರುವ ಹಿಟ್ನಾಳ್ ಅವರ ಕಟ್ಟಾ ಬೆಂಬಲಿಗ ಹಾಗೂ ನಗರಸಭೆಯ ಮಾಜಿ ಸದಸ್ಯೆ ಮಾನ್ವಿ ಪಾಷಾ, ಪಕ್ಷದ ಹೈಕಮಾಂಡ್ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

"ಶಾಸಕ ರಾಘವೇಂದ್ರ ಹಿಟ್ನಾಳ್ ಅವರಿಗೆ ಸಚಿವ ಸ್ಥಾನ ಸಿಗದಿರುವುದು ಕ್ಷೇತ್ರದ ಜನತೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಬೇಸರ ತಂದಿದೆ. ಅವರು ಸದಾ ಜನಪರವಾಗಿ ಕಾರ್ಯನಿರ್ವಹಿಸಿ ಪಕ್ಷವನ್ನು ಬಲಪಡಿಸಿದ್ದಾರೆ. ಇಂತಹ ನಾಯಕರಿಗೆ ಸಚಿವ ಸ್ಥಾನ ನೀಡಬೇಕಾಗಿತ್ತು," ಎಂದು ಅವರು ಹೇಳಿದರು.  

"ಸಚಿವ ಸ್ಥಾನ ಸಿಗದಿದ್ದರೂ ಕ್ಷೇತ್ರದ ಜನರು ಹಿಟ್ನಾಳ್ ಅವರ ಕೈ ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ಅವಕಾಶ ದೊರೆಯಲಿದೆ ಎಂಬ ವಿಶ್ವಾಸವಿದೆ. ಆದರೆ ಈ ಬಾರಿ ಅವಕಾಶ ತಪ್ಪಿರುವುದು ಸಮಂಜಸವಾಗಿಲ್ಲ. ಇದರಿಂದ ಜಿಲ್ಲೆಯಲ್ಲಿ ಪಕ್ಷಕ್ಕೆ ರಾಜಕೀಯವಾಗಿ ಹಿನ್ನಡೆಯಾಗುವ ಸಾಧ್ಯತೆಯಿದೆ," ಎಂದು ಅವರು ಅಭಿಪ್ರಾಯಪಟ್ಟರು.  

ಹಿಟ್ನಾಳ್ ಅವರಿಗೆ ಶೀಘ್ರದಲ್ಲೇ ಸಚಿವ ಸಂಪುಟ ದರ್ಜೆಯ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಅಥವಾ ಕೆಎಂಎಫ್ ಅಧ್ಯಕ್ಷ ಸ್ಥಾನ ಸೇರಿದಂತೆ ಸೂಕ್ತ ಜವಾಬ್ದಾರಿಯನ್ನು ನೀಡುವಂತೆ ಪಕ್ಷದ ವರಿಷ್ಠರನ್ನು ಮಾನ್ವಿ ಪಾಷಾ ಆಗ್ರಹಿಸಿದ್ದಾರೆ.