ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥದ ಕಾಮಗಾರಿ ಪರೀಶೀಲಿಸಿದ ಸಾರಿಗೆ ಸಚಿವ
ಬಾಗಲಕೋಟೆ 14: ಏಜೆಂಟರುಗಳ ಹಾವಳಿ ತಪ್ಪಿಸುವ ಸಲುವಾಗಿ ಸಾರಿಗೆ ಇಲಾಖೆಯಲ್ಲಿ ಆನ್ಲೈನ್ ಸೇವೆಗಳನ್ನು ಪ್ರಾರಂಭಿಸಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಬಾಗಲಕೋಟೆ ಸೀಮಿಕೇರಿ ಕ್ರಾಸ್ ಬಳಿ ನಿರ್ಮಾಣವಾಗುತ್ತಿರುವ ನೂತನ ಸ್ವಯಂ ಚಾಲಿತ ಚಾಲನಾ ಪರೀಕ್ಷಾಪಥ ಕಾಮಗಾರಿ ಪರೀಶೀಲಿಸಿ ಮಾತನಾಡಿದ ಅವರು ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿನ ಸೇವೆಗಳನ್ನು ಪಡೆಯುವಲ್ಲಿ ಏಜೆಂಟರ ಹಾವಳಿ ಇದ್ದ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನಲೆಯಲ್ಲಿ ಈ ಹಾವಳಿ ತಪ್ಪಿಸಲು 34 ಸೇವೆಗಳನ್ನು ಆನ್ಲೈನ್ ಮೂಲಕ ನೀಡಲಾಗುತ್ತಿದೆ. ಹಂತ ಹಂತವಾಗಿ ಎಲ್ಲ ಸೇವೆಗಳನ್ನು ಆನ್ಲೈನ್ ಮೂಲಕ ಮಾಡಲಾಗುತ್ತಿದ್ದು, ಅಧಿಕೃತವಾಗಿ ದೂರುಗಳು ಬಂದಲ್ಲಿ ಆ ಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮೇಲೆಯೇ ಶಿಸ್ತುಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು.
ಬಾಗಲಕೋಟೆ ಸೀಮಿಕೇರಿ ಬಳಿ 12 ಎಕರೆ ಜಮೀನಿನಲ್ಲಿ 6 ಎಕರೆ ಜಮೀನು ಬಳಸಿಕೊಂಡು ನೂತನ ಸ್ವಯಂ ಚಾಲಿತ ಚಾಲನಾ ಪರೀಕ್ಷಾಪಥ ನಿರ್ಮಿಸಲಾಗುತ್ತಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಸೆನ್ಸಾರ್ ಕೆಲಸಕ್ಕೆ ನೀಡಲಾದ ಟೆಂಡರ್ರನ್ನು ರದ್ದುಪಡಿಸಲಾಗಿದೆ. ಕಾರಣ ಇತ್ತೀಚಿನ ನೂತನ ಮಾದರಿಯ ಸೆನ್ಸಾರ್ ಬಂದಿದ್ದು, ಅದಕ್ಕಾಗಿ ಹೊಸ ಟೆಂಡರ್ರನ್ನು ಕರೆಯಾಗಿದೆ. ಪರೀಕ್ಷಾಪಥದ ರಸ್ತೆ ನಿರ್ಮಾಣ ಹಾಗೂ ಪಾದಚಾರಿ ರಸ್ತೆ ಕಾಮಗಾರಿ ಆಗಬೇಕಿದೆ. ಸೆನ್ಸಾರ್ ಹೊರತುಪಡಿಸಿ ಇದಕ್ಕಾಗಿ 9 ಕೋಟಿ ರೂ.ಗಳ ವೆಚ್ಚ ಮಾಡಲಾಗುತ್ತಿದೆ. ಇನ್ನು 3 ರಿಂದ 4 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಶೀಘ್ರದಲ್ಲಿಯೇ ಲೋಕಾರೆ್ಣಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ನಂತರ ನವನಗರದ ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿದ ಸಚಿವರು ಕಡತಗಳನ್ನು ಪರೀಶೀಲನೆ ಮಾಡಿದರು. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಲ್.ಹೊಸಮನಿ ವಿವರಣೆ ನೀಡುತ್ತಾ, ಕಳೆದ 2023-24ನೇ ಸಾಲಿಗೆ ರಾಜಸ್ತ ಸಂಗ್ರಹಣೆ ಶೇ.91.70 ರಷ್ಟು ಆದರೆ 2024-25ನೇ ಸಾಲಿಗೆ ಶೇ.91.66 ಹಾಗೂ ಪ್ರಸಕ್ತ 2025-26ನೇ ಸಾಲಿನ ಎಪ್ರೀಲ್ ಮಾಹೆಯವರೆಗೆ ಶೇ.85.75 ರಷ್ಟು ಆಗಿದೆ. ಮಾರ್ಚ 2024ರ ಅಂತ್ಯಕ್ಕೆ 8390 ವಾಹನಗಳನ್ನು ತಪಾಸಣೆ ಮಾಡಲಾಗಿದ್ದು, ಅದರಲ್ಲಿ 2783 ಪ್ರಕರಣಗಳನ್ನು ದಾಖಲಿಸಲಾಗಿದೆ. ತೆರಿಗೆ ಮತ್ತು ದಂಡ ಸೇರಿ ಒಟ್ಟು 2.22 ಕೋಟಿ ರೂಳಷ್ಟಾಗಿದೆ ಎಂದರು.
ಕಳೆದ 2024-25ನೇ ಸಾಲಿಗೆ ರಸ್ತೆ ಸುರಕ್ಷತಾಗೆ ನೀಡಿದ ಗುರಿಗೆ ಶೇ.100.17 ರಷ್ಟು ಪ್ರಗತಿ ಸಾಧಿಸಲಾಗಿದೆ. ಮಾರ್ಚ 2025ರ ಅಂತ್ಯಕ್ಕೆ 44 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ 9 ವಾಹನಗಳನ್ನು ಬಹಿರಂಗ ಹರಾಜಿನಲ್ಲಿ ವಿಲೇವಾರಿ ಮಾಡಲಾಗಿದೆ. ಎಪ್ರೀಲ್ ಅಂತ್ಯಕ್ಕೆ 35 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಚೇರಿಯ ವ್ಯಾಪ್ತಿಯಲ್ಲಿ 20 ವಾಹನ ತರಬೇತಿ ಶಾಲೆಗಳು ನೋಂದಣಿಯಾಗಿದ್ದು, 15 ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳು ಇರುವುದಾಗಿ ತಿಳಿಸಿದರು.
ಸಚಿವರ ಭೇಟಿ ಸಮಯದಲ್ಲಿ ಅಪರ ಸಾರಿಗೆ ಆಯುಕ್ತ ಕೆ.ಟಿ.ಹಾಲಸ್ವಾಮಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಸಾರಿಗೆ ಇನ್ಸಪೆಕ್ಟರಗಳಾದ ವಾಗೀಶ ಹಿರೇಮಠ, ಅಶ್ವಿನಿ ಬಡಿಗೇರ, ರೇಖಾ ಭಜಂತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.