ಶಿಕ್ಷಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ: ‘ಗುರು ಸ್ಪಂದನ’ ಕಾರ್ಯಕ್ರಮ

ಶಿಕ್ಷಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ: ‘ಗುರು ಸ್ಪಂದನ’ ಕಾರ್ಯಕ್ರಮ  On-the-spot solutions for teachers' issues: ‘Guru Spandana’ programme

ಲೋಕದರ್ಶನ ವರದಿ 

ಧಾರವಾಡ 27: ಶಿಕ್ಷಕರ ಸಮಸ್ಯೆಗಳು ಹಾಗೂ ಎಲ್ಲ ಸೇವಾ ಕಾರ್ಯಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ಅವರಿಗೆ ತ್ವರಿತವಾಗಿ ಸ್ಪಂದಿಸುವ ಉದ್ದೇಶದಿಂದ ‘ಗುರು ಸ್ಪಂದನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ಆರ್‌. ಸದಲಗಿ ಹೇಳಿದರು.  

ಧಾರವಾಡ ಗ್ರಾಮೀಣ ತಾಲ್ಲೂಕಿನ ಬೀರಸಿ ಸಭಾಭವನದಲ್ಲಿ ಆಯೋಜಿಸಿದ್ದ ‘ಗುರು ಸ್ಪಂದನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರ ಸೇವಾ ಪುಸ್ತಕದಲ್ಲಿರುವ ತಪ್ಪು-ದೋಷಗಳನ್ನು ಸ್ಥಳದಲ್ಲೇ ಸರಿಪಡಿಸುವ ಕಾರ್ಯ ನಡೆಯುತ್ತಿದ್ದು, ಇದರಿಂದ ಶಿಕ್ಷಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ದೊರೆಯುತ್ತಿದೆ ಎಂದರು. ಶಿಕ್ಷಕರು ತಮ್ಮ ಸಮಸ್ಯೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ‘ಗುರು ಸ್ಪಂದನ’ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಹೇಳಿದರು.  

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಖಜಾಂಚಿ ಆರ್‌.ಎಂ. ಹೊನ್ನಪ್ಪ ಮಾತನಾಡಿ, ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಿ ಪ್ರತಿ ತಿಂಗಳ ಕೊನೆಯ ದಿನದಂದು ವೇತನ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಶಿಕ್ಷಕರು ಸೇವಾವಧಿಯಲ್ಲಿ ಎದುರಿಸುವ ಆಡಳಿತಾತ್ಮಕ ಸಮಸ್ಯೆಗಳಿಗೆ ಇಂತಹ ಕಾರ್ಯಕ್ರಮಗಳ ಮೂಲಕ ಪರಿಹಾರ ದೊರೆಯುತ್ತಿರುವುದು ಶ್ಲಾಘನೀಯ ಎಂದರು.  

ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ. ಬೊಂಗಾಳೆ ಮಾತನಾಡಿ, ಶಿಕ್ಷಕರ ಸೇವಾ ಸಂಬಂಧಿತ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ಪರಿಹರಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಿಂದ ಶಿಕ್ಷಕರು ತಮ್ಮ ಕೆಲಸದ ನಿಮಿತ್ತ ಶಿಕ್ಷಣಾಧಿಕಾರಿ ಕಚೇರಿಗೆ ಪದೇಪದೇ ತೆರಳುವುದು ತಪ್ಪಲಿದ್ದು, ಮಕ್ಕಳ ಕಲಿಕೆಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗಲಿದೆ ಎಂದರು.  

ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ್ ಕೆ.ಎಫ್‌., ರಾಜ್ಯ ಖಜಾಂಚಿ ಆರ್‌.ಎಂ. ಹೊನ್ನಪ್ಪ, ಜಿಲ್ಲಾ ಖಜಾಂಚಿ ಶಂಕರ ಘಟ್ಟಿ, ತಾಲ್ಲೂಕು ಅಧ್ಯಕ್ಷ ಕೆ.ಎಂ. ಬೊಂಗಾಳೆ, ಪ್ರಧಾನ ಕಾರ್ಯದರ್ಶಿ ಎನ್‌.ಎಸ್‌. ಕಮ್ಮಾರ, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಸಿ.ವೈ. ತಿಗಡಿ, ಕೋಶಾಧ್ಯಕ್ಷ ರಾಜು ಮಾಳವಾಡ, ಎಸ್ಸಿ-ಎಸ್ಟಿ ಶಿಕ್ಷಕರ ಸಂಘದ ಅಧ್ಯಕ್ಷ ಅರ್ಜುನ ದೊಡಮನಿ ಸೇರಿದಂತೆ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.