ಶಿರಗುಪ್ಪಿಯಲ್ಲಿ ಹಳೇ ವಿದ್ಯಾರ್ಥಿಗಳ ಸ್ನೇಹ ಮಿಲನ: ಎಸ್.ಡಿ. ಬುವಾ
ಶಿರಗುಪ್ಪಿಯಲ್ಲಿ ಹಳೇ ವಿದ್ಯಾರ್ಥಿಗಳ ಸ್ನೇಹ ಮಿಲನ: ಎಸ್.ಡಿ. ಬುವಾ
ಕಾಗವಾಡ 06: ಹಳೆಯ ವಿದ್ಯಾರ್ಥಿಗಳು ಒಂದಡೇ ಸೇರಿ ಸ್ನೇಹಮಿಲನ ಮಾಡುವ ಮೂಲಕ ಉತ್ತಮ ವಿಚಾರಗಳನ್ನು ಹಂಚಿಕೊಳ್ಳಬೇಕು. ಪ್ರತಿಯೊಬ್ಬರು ತಮ್ಮ ಶಿಕ್ಷಣದ ನಂತರ ಸ್ವಾವಲಂಬಿಗಳಾಗಿ ಜೀವನ ರೂಪಿಸಿಕೊಂಡು ಉತ್ತಮ ಕುಟುಂಬ ಹಾಗೂ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕೆಂದು ಶಿರಗುಪ್ಪಿ ಸಿದ್ದೇಶ್ವರ ವಿದ್ಯಾಲಯದ ಮುಖ್ಯಾದ್ಯಾಪಕ ಎಸ್.ಡಿ. ಬುವಾ ತಿಳಿಸಿದ್ದಾರೆ.
ಅವರು ಇತ್ತಿಚಿಗೆ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಅಮೃತ ಸಭಾಭವದಲ್ಲಿ ಸನ್ 2003-04 ರ ಮರಾಠಿ ಪ್ರಾಥಮಿಕ ಶಾಲೆ ಮತ್ತು ಸನ್ 2007-08 ನೇ ಸಾಲಿನ ಸಿದ್ದೇಶ್ವರ ವಿದ್ಯಾಲಯದ ಮರಾಠಿ ಮಾಧ್ಯಮ ಹಳೆ ವಿದ್ಯಾರ್ಥಿಗಳ ಸ್ನೇಹ ಮಿಲನ ಮತ್ತು ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ಪ್ರಜೆಗಳಾಗಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕು. ಜೊತೆಗೆ ಇಂತಹ ಕಾರ್ಯಕ್ರಮಗಳ ಮೂಲಕ ಹಳೆಯ ನೆನಪುಗಳನ್ನು ಮೆಲುಕು ಹಾಕುವುದರೊಂದಿಗೆ ಸದಾ ಒಳ್ಳೆಯ ಚಿಂತನೆಗಳು ವಿನಿಮಯ ಮಾಡುವ ಜೊತೆಗೆ ತಮ್ಮ ಬಾಲ್ಯದ ಸ್ನೇಹದ ಸಂಬಂಧವನ್ನು ಗಟ್ಟಿಗೊಳಿಸಬೇಕೆಂದು ಹಳೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳಿಂದ ಶಿಕ್ಷಕರನ್ನು ಮತ್ತು ಶಿಕ್ಷಕೇತರ ಸಿಬ್ಬಂದಿಯವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸರಕಾರಿ ಮರಾಠಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಸಿ.ಎಂ. ಬಾಡಗೆ, ಎ.ಬಿ. ಶಹಾಪುರೆ, ಶಂಕರ ಪವಾರ, ಎಲ್.ವೈ. ಚೌಗುಲೆ, ಎ.ಎಸ್. ಪಾಟೀಲ, ಬಾಳಾಸಾಹೇಬ ಕೊಟ್ಟಲಗಿ, ಬಸವರಾಜ ಬೆಳಂಕ್ಕಿ, ಅಶ್ವಿನಿ ಚಿನಗುಡ್ಡಿ, ಕುಮಾರ ಸನದಿ, ಗುರೂಜಿ ಸೇರಿದಂತೆ ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಯೋಗಿತಾ ಮಾನೆ ಸ್ವಾಗತಿಸಿದರು. ನಂದಿನಿ ಘಾಟಗೆ ಮತ್ತು ಭಾರತಿ ಶಹಾಪುರೆ ನಿರೂಪಿಸಿದರು. ಪೂಜಾ ಮುಗಳೆ ವಂದಿಸಿದರು.