ಪೋಷಣ ಅಭಿಯಾನ: ಮಕ್ಕಳ ಆರೋಗ್ಯದ ಭವಿಷ್ಯ ರೂಪಿಸುವ ಶಕ್ತಿಯುತ ಹಾದಿ: ಜಿ.ಪಂ. ಸಿಇಓ ಭುವನೇಶ ಪಾಟೀಲ

ಪೋಷಣ ಅಭಿಯಾನ: ಮಕ್ಕಳ ಆರೋಗ್ಯದ ಭವಿಷ್ಯ ರೂಪಿಸುವ ಶಕ್ತಿಯುತ ಹಾದಿ: ಜಿ.ಪಂ. ಸಿಇಓ ಭುವನೇಶ ಪಾಟೀಲ Nutrition Campaign: A powerful path to shaping the future of children's health: Z.P. CEO Bhuvanesh P

ಧಾರವಾಡ   23: ಪೋಷಣ ಅಭಿಯಾನವು ಮಕ್ಕಳ ಭವಿಷ್ಯವನ್ನು ಬದಲಾಯಿಸುವ ಶಕ್ತಿಯುತ ಕಾರ್ಯಕ್ರಮವಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ಒಟ್ಟಾಗಿ ಪೋಷಣ ಕಾರ್ಯದಲ್ಲಿ ನಿರಂತರ ಶ್ರಮಿಸುತ್ತಿದ್ದಾರೆ. ಇದರಿಂದ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಭುವನೇಶ ಪಾಟೀಲ ಅವರು ಹೇಳಿದರು. 

ಅವರು ಇಂದು (ಸೆ.23) ಬೆಳಿಗ್ಗೆ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ 8 ನೇ ರಾಷ್ಟ್ರೀಯ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. 

ವಿಶೇಷವಾಗಿ ಮಕ್ಕಳಿಗೆ ಆದಷ್ಟು ಸಕ್ಕರೆ ಆಹಾರ ಕಡಿಮೆ ಕೊಡಬೇಕು. ಶಿಶುವಿಗೆ ಮೊದಲ ಆರು ತಿಂಗಳು ತಾಯಿ ಹಾಲೇ ಶ್ರೇಷ್ಠ ಆಹಾರ. ಆ ನಂತರ ದ್ರವ ರೂಪದ ಪೌಷ್ಟಿಕ ಆಹಾರವನ್ನು ನೀಡಿದರೆ ಮಕ್ಕಳ ಆರೋಗ್ಯವೂ ಉತ್ತಮವಾಗಿರುತ್ತದೆ. ಹಸಿರು ಸೊಪ್ಪು, ಸಿರಿಧಾನ್ಯ, ಹಣ್ಣುಗಳು ನಮ್ಮ ಮನೆಗಳಲ್ಲಿ ದೊರೆಯುವ ಸರಳ ಪೋಷಕ ಆಹಾರ. ಇವುಗಳನ್ನು ಮಕ್ಕಳ ದಿನನಿತ್ಯದ ಆಹಾರದಲ್ಲಿ ಸೇರಿಸುವುದರಿಂದ ಪೌಷ್ಠಿಕತೆಯ ಕೊರತೆ ಆಗದಂತೆ ಮಾಡಬಹುದು ಎಂದು ಹೇಳಿದರು. 

ಪೋಷಣ ಅಭಿಯಾನವು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಶೇ.100 ಮಕ್ಕಳಿಗೂ ತಾಯಿ ಹಾಲು. ಶೇ.100 ಗರ್ಭಿಣಿಯರಿಗೂ ಪೌಷ್ಠಿಕಾಹಾರ ದೊರಕಬೇಕು. ಮತ್ತು ಎಲ್ಲರಲ್ಲಿಯೂ ಇದರ ಮಹತ್ಮದ ಅರಿವು ಮೂಡಿಸಬೇಕು ಎಂದು ಅವರು ಹೇಳಿದರು.  

ಸಹಜವಾದ, ಪ್ರಕೃತಿಯ ಆಹಾರ ಸೇವನೆ ಮಾಡುವುದು ಆರೋಗ್ಯಕ್ಕೆ ಆಧಾರ. ಇಂದಿನ ಮಕ್ಕಳಿಗೆ ಸಿರಿಧಾನ್ಯಗಳ ಮಹತ್ವವೇ ತಿಳಿದಿಲ್ಲ. ಸಿರಿಧಾನ್ಯಗಳಲ್ಲಿ ಇರುವ ಪೌಷ್ಟಿಕಾಂಶ, ಶಕ್ತಿಯುತ ಗುಣಗಳನ್ನು ಅವರಿಗೆ ತಿಳಿಸಿಕೊಡುವುದು ನಮ್ಮ ಜವಾಬ್ದಾರಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಭುವನೇಶ ಪಾಟೀಲ ಅವರು ಹೇಳಿದರು. 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್‌. ದೊಡ್ಡಮನಿ ಅವರು ಮಾತನಾಡಿ, ಪೋಷಣೆಯ ಕೊರತೆಯಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ವಿಶೇಷವಾಗಿ ಗರ್ಭಿಣಿಯರು, ಶಿಶುಗಳು ಹಾಗೂ ಕುಮಾರಾಸ್ಥೆಯಲ್ಲಿರುವ ಮಕ್ಕಳಿಗೆ ಸಮತೋಲನ ಆಹಾರ, ಪೋಷಕಾಂಶಯುತ ಆಹಾರವು ಅವಶ್ಯವಾಗಿದೆ ಎಂದು ಹೇಳಿದರು. 

ಪ್ರತಿ ಕುಟುಂಬದಲ್ಲಿ ದಿನನಿತ್ಯವೂ ಪೋಷಣದ ಪ್ರಗತಿ ನಡೆಯಬೇಕು. ನಮ್ಮ ಹಿರಿಯರೆಲ್ಲರೂ ಆರೋಗ್ಯದಿಂದ ಇದ್ದದ್ದು, ಅವರು ಸೇವಿಸಿದ ಆಹಾರದಿಂದ  ಮತ್ತು ಆಹಾರ ಸೇವನೆ ಕ್ರಮ ಸರಳವಾಗಿದ್ದು, ಕಾಲಮಾನಕ್ಕೆ ತಕ್ಕಂತೆ ಆಹಾರ ಸೇವಿಸುತ್ತಿದ್ದರು. ಆದ್ದರಿಂದ ಮಕ್ಕಳಿಗೂ ಸಮಯೋಚಿತ, ಸರಿಯಾದ ಆಹಾರ ಪದ್ಧತಿ ಬೆಳೆಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಅವರು ಹೇಳಿದರು.  

ಕಾರ್ಯಕ್ರಮದಲ್ಲಿ ಅತಿಥಿಗಳು ಶಿಶುಗಳಿಗೆ ಅನ್ನಪ್ರಾಶನ ಮಾಡಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಇದೇ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮವನ್ನು ಮಾಡಲಾಯಿತು.  

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ. ಎಚ್‌.ಎಚ್‌.ಕುಕನೂರ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಗೂ ಸುನಿತಾ ನಾಡಿಗೇರ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.  

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಡಾ. ಕಮಲಾ ಬೈಲೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀ ಪಾಟೀಲ, ಹಾಗೂ ಎಲ್ಲ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು.  

ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರು, ಸಿಬ್ಬಂದಿ ವರ್ಗ ಹಾಗೂ ಗರ್ಭಿಣಿ ಮಹಿಳೆಯರು ಸೇರಿದಂತೆ, ಸಾರ್ವಜನಿಕರು ಉಪಸ್ಥಿತರಿದ್ದರು.