ನನ್ನ ಬೆಳೆ-ನನ್ನ ಹಕ್ಕು: ಬೆಳೆ ಸಮೀಕ್ಷೆಗೆ ಆ್ಯಪ್ ಬಿಡುಗಡೆ

ನನ್ನ ಬೆಳೆ-ನನ್ನ ಹಕ್ಕು: ಬೆಳೆ ಸಮೀಕ್ಷೆಗೆ ಆ್ಯಪ್ ಬಿಡುಗಡೆ My Crop, My Right: App launched for crop survey

ಲೋಕದರ್ಶನ ವರದಿ 

          ವಿಜಯಪುರ 03:  2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ನಲ್ಲಿ ದಾಖಲಿಸಬೇಕೆಂದು ಜಿಲ್ಲಾಧಿಕಾರಿಗಳಾದ ಡಾ.ಆನಂದ ಕೆ ಅವರು ರೈತರಲ್ಲಿ ಮನವಿ ಮಾಡಿದ್ದಾರೆ. 

ರೈತರು ಗೂಗಲ್ ಪ್ಲೇ ಸ್ಟೋರ್ ಅಥವಾ ಕ್ಯೂ ಆರ್ ಕೋಡ್ ನಿಂದ ಮುಂಗಾರು ಬೆಳೆ ಸಮೀಕ್ಷೆ ಆ್ಯಪ್ ಡೌನಲೋಡ್ ಮಾಡಿಕೊಂಡು, ಸ್ವತ ತಾವೇ ಬೆಳೆ ಸಮೀಕ್ಷೆ ಮಾಡಿ ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆ ವಿವರಗಳನ್ನು ದಾಖಲಿಸಬಹುದು. 

ಬೆಳೆ ಸಮೀಕ್ಷೆ ತಂತ್ರಾಂಶ ಆಪ್ ತಂತ್ರಾಂಶನಲ್ಲಿ ದಾಖಲಾಗುವ ಮಾಹಿತಿಯನ್ನು ಬೆಳೆ ಸಾಲ, ಬೆಳೆ ವಿಮೆ,ಬೆಂಬಲ ಬೆಲೆ, ಖರೀದಿ,ಬೆಳೆ ಪರಿಹಾರ, ಪಹಣಿಯಲ್ಲಿ ಬೆಳೆ ವಿವರಗಳನ್ನು ದಾಖಲಿಸಲು ಮತ್ತು ವಿವಿಧ ಇಲಾಖೆಗಳ ಸವಲತ್ತುಗಳನ್ನು ಪಡೆಯಲು ಉಪಯೋಗಿಸಲಾಗುವುದು. 

ಈ ನಿಟ್ಟಿನಲ್ಲಿ ಸ್ವತ: ರೈತರೇ ತಮ್ಮ ಮೊಬೈಲ್ ತಂತ್ರಾಂಶ ಆ್ಯಪ್ ಮೂಲಕ ಸಕಾಲಕ್ಕೆ ಬೆಳೆ ವಿವಿರಗಳನ್ನು ತಂತ್ರಾಂಶದಲ್ಲಿ ಅಪಲೋಡ್ ಮಾಡುವದರಿಂದ ನ್ಯೂನ್ಯತೆಗಳನ್ನು ಕಡಿಮೆ ಮಾಡಬಹುದು ಹಾಗೂ ಸೌಲಭ್ಯಗಳಿಂದ ವಂಚಿತರಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. 

ಬರುವ ಆಗಸ್ಟ್‌ 31ರೊಳಗಾಗಿ ರೈತರು ಸ್ವತ: ತಮ್ಮ ಜಮೀನಿನ ಬೆಳೆ ಸಮೀಕ್ಷೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ರೈತರು ತಮ್ಮ ಜಮೀನಿನ ಬೆಳೆ ಸಮೀಕ್ಷೆಯನ್ನು ತಾವೇ ಕೈಗೊಳ್ಳಲು ಸಾಧ್ಯವಾಗದಿದ್ದಲ್ಲಿ ತಮ್ಮ ಜಮೀನಿನಲ್ಲಿ ಬೆಳೆದ ವಿವಿಧ ಬೆಳೆಗಳ ಮಾಹಿತಿಯನ್ನು ಖಾಸಗಿ ನಿವಾಸಿಗಳ ಮುಖಾಂತರ ಖುದ್ದಾಗಿ ಕ್ಷೇತ್ರದಲ್ಲಿದ್ದು ದಿನಾಂಕ ಆಗಸ್ಟ್‌ 15 ರಿಂದ ಸೆಪ್ಟೆಂಬರ್ 30 ರೊಳಗಾಗಿ ನಿಖರವಾಗಿ ದಾಖಲಿಸಬಹುದಾಗಿದೆ ಎಂದವರು ತಿಳಿಸಿದ್ದಾರೆ. 

ಜಿಲ್ಲೆಯ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಂಡು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ನಿಗದಿತ ಸಮಯದೊಳಗೆ ದಾಖಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ತಮ್ಮ ಗ್ರಾಮಕ್ಕೆ ನಿಯೋಜಿಸಲಾದ ಖಾಸಗಿ ನಿವಾಸಿ (ಪಿಆರ್)ಗಳನ್ನು ಅಥವಾ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಯ ಅಧಿಕಾರಿಗಳನ್ನು ಅಥವಾ ಸಹಾಯವಾಣಿ ಸಂಖ್ಯೆಗೆ 18004253553 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.