‘ಪ್ರತಿಯೊಬ್ಬ ಭಾರತೀಯನೂ ಕೂಡಾ ಇಡೀ ಜಗತ್ತನ್ನೇ ಆಳಬಲ್ಲನು, ಅಂತಹ ಸಾಮರ್ಥ್ಯ ಭಾರತೀಯ ಪ್ರತಿಯೊಂದೂ ಮಕ್ಕಳಲ್ಲಿದೆ’. ಹೀಗಂತ ಈ ದೇಶದ ಮಕ್ಕಳ ಸಾಮರ್ಥ್ಯದ ಬಗ್ಗೆ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಅದು ಅಕ್ಷರಶಃ ಸತ್ಯವಾದ ಮಾತು. ಆ ಮಕ್ಕಳಲ್ಲಿ ಇರುವಂತಹ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹ ನೀಡುವಂತಹ ಕೆಲಸ ಪ್ರತಿಯೊಬ್ಬ ತಂದೆ-ತಾಯಿ ಹಾಗೂ ಶಿಕ್ಷಕರು ಮಾಡಬೇಕಿದೆ. ಜೊತೆಗೆ ಮಕ್ಕಳ ಬೆಳವಣಿಗೆ ಕೂಡ ಬಹಳ ಮುಖ್ಯವಾಗುತ್ತದೆ. ಮಕ್ಕಳು ಅತ್ಯಂತ ಸಹಜವಾಗಿ ಬೆಳೆಯಬೇಕು. ಅವರು ತುಂಟರಾಗಬೇಕು, ಹತ್ತಾರು ಪ್ರಶ್ನೆಗಳನ್ನು ಕೇಳಬೇಕು, ಅವರು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರ ಹೇಳುವಂತಹ ತಾಳ್ಮೆ ಪ್ರತಿಯೊಬ್ಬ ತಂದೆ ತಾಯಿಯಲ್ಲಿರಬೇಕು. ಮಗು ತನಗೆ ಗೊತ್ತಿಲ್ಲದೆ ಯಾವುದೇ ಪ್ರಶ್ನೆಗಳನ್ನು ಕೇಳಿದರೆ, ಆ ಮಗುವನ್ನು ನಾವು ಡಿಸ್ಕರೇಜ್ ಮಾಡದೇ, ಅದರ ಪ್ರಶ್ನೆಗಳಿಗೆಲ್ಲ ಸಾಧ್ಯವಾದಷ್ಟು ಉತ್ತರಿಸುವ ಪ್ರಯತ್ನವನ್ನೇ ಮಾಡಬೇಕು. ಕೆಲ ಮಕ್ಕಳು ಬಹಳಷ್ಟು ತುಂಟರಾಗಿರುತ್ತಾರೆ. ಬಸ್ಸೊಂದರ ಮುಂದಿನ ಸೀಟಿನಲ್ಲಿ ಕುಳಿತ ಅಜ್ಜ, ಹಿಂದಿನ ಸೀಟಿನಲ್ಲಿ ಕುಳಿತಂತಹ ಪುಟ್ಟ ಮಗುವೊಂದು ಆ ಅಜ್ಜನ ಜುಟ್ಟು ಹಿಡಿದು ಜಗ್ಗುವುದಾಗಲಿ, ಮತ್ತಿನ್ಯಾರೋ ಹೋಗುತ್ತಿರುವಾಗ ಹಿಂದೆ ಬಂದು ಅವರ ಬಟ್ಟೆಗೆ ದಾರ ಕಟ್ಟಿ ಅದನ್ನು ಬಾಲದ ಹಾಗೆ ತುಂಟತನ ಮಾಡುವ ಮಕ್ಕಳ ಮೇಲೆ ಸಿಟ್ಟನ್ನು ಪ್ರಯೋಗಿಸಬಾರದು. ಯಾಕಂದ್ರೆ, ತುಂಟತನಕ್ಕೂ ಮತ್ತು ದುಷ್ಟತನಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಬಾವಿಯ ಮುಂದೆ ಯಾರೂ ನಿಂತಾಗ ಹಿಂದಿನಿಂದ ಬಂದು ಅವರನ್ನು ತಳ್ಳುವುದು ಹಾಗೂ ಮತ್ತೊಬ್ಬರ ಮನೆಯ ವಸ್ತುಗಳನ್ನು ಕದ್ದುಕೊಂಡು ಬರುವುದು ಇದು ದುಷ್ಟತನ. ಮಕ್ಕಳು ತುಂಟರಾಗಿ ಬೆಳೆಯಬೇಕೆ ವಿನಹ: ಅವರು ದುಷ್ಟರಾಗಬಾರದು.
ಸಾಮಾನ್ಯವಾಗಿ ಎಲ್ಲಾ ಮಕ್ಕಳಲ್ಲಿ ಒಂದು ವಿಶೇಷವಾದಂತಹ ಸೈಕಾಲಜಿ ಇದ್ದೇ ಇರುತ್ತದೆ. ಅದು, ಮನೆಯಲ್ಲಿ ಹಸುವಿನ ಒಂದು ಸಣ್ಣ ಕರು ಇದ್ದರೆ ಆ ಕರುವಿಗೆ ಮಗು ಹೊಡೆಯುತ್ತದೆ, ಒದೆಯುತ್ತದೆ, ಅದರ ಬಾಲ ಜಗ್ಗುತ್ತ ಅದರೊಂದಿಗೆ ಸಾಕಷ್ಟು ಚೇಷ್ಟಗಳನ್ನ ಮಾಡುತ್ತಲೇ ಇರುತ್ತದೆ. ಹೀಗೆ, ಆ ಕರುವಿಗೆ ಮಗು ತಾನು ಏನನ್ನೂ ಮಾಡಿದರು ಅದು ಮಾಡಿಸಿಕೊಂಡೂ ಸುಮ್ಮನಿರುತ್ತದೆಯಲ್ಲ, ಆ ಭಾವದಿಂದ ಕರುವಿನ ಮೇಲೆ ಆ ಮಗುವಿಗೆ ಬಹಳಷ್ಟು ಪ್ರೀತಿ. ಪುಸ್ತಕದ ಮೇಲೆ ಸಾಕಷ್ಟು ಗೀಚು ಹಾಕುತ್ತದೆ, ಅದನ್ನು ಹರಿಯುತ್ತದೆ, ಒಗಿಯುತ್ತದೆ. ಕೊನೆಗೊಮ್ಮೆ ಆ ಪುಸ್ತಕದ ಮೇಲೆ ಅದಕ್ಕೆ ಪ್ರೀತಿ ಬರುತ್ತದೆ. ಹೀಗೆ ಯಾವ ವಸ್ತುವಿಗೆ ತಾನು ಏನೇ ಮಾಡಿದರೂ ಅದನ್ನು ಮಾಡಿಸಿಕೊಳ್ಳುವದನ್ನ ಕಂಡರೆ ಅವುಗಳ ಮೇಲೆ ಮಗುವಿಗೆ ಬಹಳಷ್ಟು ಪ್ರೀತಿ. ಅದನ್ನು ನಾವು ಅರ್ಥಮಾಡಿಕೊಳ್ಳಬೇಕು.
ಮಕ್ಕಳನ್ನು ಬೆಳೆಸುವುದು; ಮಕ್ಕಳು ಸಹಜವಾಗಿ ಓಡಾಡಬೇಕು, ಬಗೆ ಬಗೆಯ ಆಟಗಳನ್ನು ಆಡುತ್ತಾ ಬೀಳಬೇಕು, ಬಿದ್ದು ಗಾಯ ಮಾಡಿಕೊಳ್ಳಬೇಕು, ಮರ ಹತ್ತಬೇಕು, ಬಾವಿಗೆ ಜಿಗಿದು ಈಜಬೇಕು. ಯಾವ ಮಗು ಹೀಗೆಲ್ಲ ಬಾಲ್ಯಾವಸ್ಥೆಯನ್ನು ಕಳೆಯುತ್ತದೆಯೋ ಮುಂದಿನ ದಿನಗಳಲ್ಲಿ ಆ ಮಗುವಿನ ಶರೀರ ಹಾಗೂ ಮನಸ್ಸು ಬಹಳಷ್ಟು ಆರೋಗ್ಯಕರವಾಗುತ್ತದೆ ಮತ್ತು ಮಕ್ಕಳಲ್ಲಿ ಸಾಹಸ ಪ್ರವೃತ್ತಿ ಬೆಳೆಯುತ್ತದೆ. ಹೀಗೆ ಬೆಳೆದ ಮಗು ತನ್ನ ಏರಿಯಾದವರಿಗೆಲ್ಲ ಅತ್ಯಂತ ಪ್ರೀತಿಯ ಮಗುವಾಗುತ್ತದೆ. ಜನರ ಮಧ್ಯೆ ಧೈರ್ಯವಾಗಿ ಮಾತನಾಡಬಲ್ಲ ಸಾಮಥ್ಯ9 ಬರುತ್ತದೆ. ಅದರಿಂದ ನಾಯಕತ್ವ ಗುಣಗಳು ಬೆಳೆಯುತ್ತವೆ. ಬದಲಿಗೆ ಅತ್ಯಂತ ಕಟ್ಟುನಿಟ್ಟಿನ ರಿಸ್ಟ್ರಿಕ್ಷನ್ ಹಾಕಿ ಬೆಳೆಸಿದ ಮಗು ಬಹಳಷ್ಟು ಆಲಸಿ ಆಗುತ್ತದೆ. ಯಾರನ್ನು ಎದುರಿಸುವುದಿಲ್ಲ ಮತ್ತು ತಂದೆ ತಾಯಿಯನ್ನು ಆತ ಬಿಟ್ಟಿರಲಾರದು. ಯಾವುದೇ ಸಮಸ್ಯೆ ಬಂದರೂ ಅದನ್ನು ಫೇಸ್ ಮಾಡಲು ಆ ಮಗುವಿಂದ ಸಾಧ್ಯವಾಗುವುದಿಲ್ಲ. ತಕ್ಕಮಟ್ಟಿಗೆ ಓದಿ, ಮುಂದೆ ಯಾವುದೋ ಒಂದು ನೌಕರಿಗೆ ಸೀಮಿತವಾಗಿ ಆಫೀಸ್ ಎಂಬ ಕಂಫರ್ಟ್ ಜೋನ್ ನಲ್ಲಿ ಕುಳಿತುಬಿಡುತ್ತಾನಷ್ಟೆ. ಮತ್ತಿನ್ನೇನು ಸಾಧ್ಯ ಆಗೋದಿಲ್ಲ.
ಮಕ್ಕಳನ್ನು ಯಾವಾಗಲೂ ಹುರಿದುಂಬಿಸುತ್ತಲೇ ಇರಬೇಕು. ಯಾವುದೋ ಒಂದು ಮಗು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಾಗ ಅದರ ಮೇಲ ರೇಗಾಡಬಾರದು. ಆ ಮಗುವಿಗೆ ಹೇಳಿ, ’ಮಗು ವಾಸ್ತವದಲ್ಲಿ ನೀನು ಸಾಕಷ್ಟು ಬುದ್ದಿವಂತನೇ ಆದರೆ ನೀನು ಸರಿಯಾಗಿ ಪ್ರಯತ್ನಿಸಿಲ್ಲ’ ’ನೀನು ಏನೋ ಸಾಧಿಸಬಲ್ಲೆ ಆದರೆ ಯಾಕೋ ಮನಸ್ಸು ಮಾಡುತ್ತಿಲ್ಲ’, ಮುಂದಿನ ಬಾರಿ ಚೆನ್ನಾಗಿ ಪ್ರಯತ್ನಿಸು, ನಿನ್ನಿಂದ ಎಲ್ಲವೂ ಸಾಧ್ಯ ಅಂತಲೇ ಹೇಳಿ. ಆಗಲೂ ಪಾಸ್ ಆಗದಿದ್ದರೆ ಮತ್ತೆ ಮತ್ತೆ ಹಾಗೆ ಹೇಳಿ. ಅದು ಎಲ್ಲಿಯವರೆಗೆ ಅಂದ್ರೆ ನೀವು ಹೇಳಿದ ಆ ಮಾತು ಮಗುವಿನ ಮನಸ್ಸಿನಲ್ಲಿ ತಾನು ಬುದ್ದಿವಂತ ಅನ್ನೋದು ಖಾತ್ರಿಯಾಗುವವರೆಗೂ ಹೇಳಬೇಕು. ಮನೆಯಲ್ಲಿ ತಂಗಿ ಬುದ್ಧಿವಂತಳು, ಅಣ್ಣ ದಡ್ಡ. ಅವಳು ನಿನಗಿಂತ ಚಿಕ್ಕವಳು ಆಕೆ ಪರೀಕ್ಷೆಯಲ್ಲಿ ಎಷ್ಟೊಂದು ಚೆನ್ನಾಗಿ ಅಂಕ ಪಡೆದಿದ್ದಾಳೆ, ನಿನಗೇನಾಗಿದೆ ದಾಡಿ ಅಂತ ಒಬ್ಬರನ್ನೊಬ್ಬರಿಗೆ ಹೋಲಿಸಿ ಮಾತನಾಡಬೇಡಿ. ಅದರಿಂದ ಅವರಿಬ್ಬರ ಮನಸ್ಸುಗಳಲ್ಲಿ ದ್ವೇಷದ ಮನೋಭಾವನೆ ಉಂಟಾಗಿ, ಇಬ್ಬರೂ ಜಗಳಾಡುತ್ತಾ ಕೊನೆಗೊಮ್ಮೆ ಅವರಿಬ್ಬರೂ ಸೇರಿಯೇ ಈ ಅಪ್ಪ-ಅಮ್ಮಂದಿರನ್ನೇ ವಿರೋಧಿಸುತ್ತಾರೆ. ಹೀಗೆ ತಂದೆ ತಾಯಿಯ ಕೆಟ್ಟ ವಿಚಾರದಿಂದ ಸಾಕಷ್ಟು ಮಕ್ಕಳು ಹಾಳಾಗಿರುವುದನ್ನು ನಾನು ನೋಡಿದ್ದೇನೆ. ಮುಖ್ಯವಾಗಿ ಮನೆಯಲ್ಲಿ ಅದೆಷ್ಟೇ ಸಮಸ್ಯೆ ಕಷ್ಟಗಳಿರಲಿ ಅವುಗಳನ್ನು ಮಕ್ಕಳ ಮುಂದೆ ಚರ್ಚಿಸುತ್ತಾ ಅವರ ಮುಂದೆ ದುಃಖಿಸಬೇಡಿ. ಅದರಿಂದ ಮಕ್ಕಳ ಮಾನಸಿಕತೆಯ ಮೇಲೆ ನೆಗೆಟಿವ್ ಪರಿಣಾಮ ಬೀರಿ ಅವರ ವಿದ್ಯಾಭ್ಯಾಸ ಹಾಳಾಗುತ್ತದೆ. ಯಾವಾಗಲೂ ಮನೆಯಲ್ಲಿ ಮಕ್ಕಳ ಮುಂದೆ ಗಂಡ ಹೆಂಡತಿಯ ಹಾಗೆ ವರ್ತಿಸದೇ, ಅಪ್ಪ ಅಮ್ಮನ ಹಾಗೆ ವರ್ತಿಸಬೇಕು, ಇದು ನಮ್ಮ ಸಂಸ್ಕೃತಿ.
ವಿಶೇಷವಾಗಿ ಮಕ್ಕಳ ಮುಂದೆ ಮಹಾನ್ ವ್ಯಕ್ತಿಗಳ, ಸಾಧಕರ ಆದರ್ಶವನ್ನೇ ಇಡಬೇಕು. ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷ್ ಚಂದ್ರ ಬೋಸ್, ರವೀಂದ್ರನಾಥ್ ಟ್ಯಾಗೋರ್, ಅಲ್ಬರ್ಟ್ ಐನ್ಸ್ಟೈನ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಥಾಮಸ್ ಅಲ್ವಾ ಎಡಿಸನ್, ಹೀಗೆ ಶ್ರೇಷ್ಠ ಸಾಧಕರ ಬಗ್ಗೆ ಮಾತನಾಡಿ, ಅವರ ಫೋಟೋಗಳನ್ನು ಮನೆಯಲ್ಲಿ ಹಾಕಿ. ಯಾಕಂದ್ರೆ ಮಕ್ಕಳಿಗೆ ಯಾವಾಗಲೂ ರೋಲ್ ಮಾಡೆಲ್ ವಿದ್ಯಾವಂತರು, ಕವಿ, ವಿಜ್ಞಾನಿ, ತತ್ವಶಾಸ್ತ್ರಜ್ಞರೇ ಆಗಿರಬೇಕು. ಅಂತಹ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಮುಂದಿವೆ. ಉದಾ: ಆಕ್ಸಿಡೆಂಟ್ ಆಗಿ ಅವಳ ಎರಡೂ ಕಾಲುಗಳು ಕಟ್ಟಾಗಿವೆ. ಪರಿಣಾಮ, ಅವಳಿಗೆ ಎದ್ದು ನಡೆದಾಡೋಕೆ ಸಾಧ್ಯವೇ ಇಲ್ಲ ಅಂತ ಡಾಕ್ಟರ್ ಹೇಳಿರುತ್ತಾರೆ. ಆದರೆ ಅವಳ ನಿಶ್ಚಲವಾದ ಆತ್ಮವಿಶ್ವಾಸ ಹೇಗಿತ್ತೆಂದರೆ, ಡಾಕ್ಟರ್ ಹೇಳಿದ ಆ ಮಾತನ್ನೇ ಹುಷಿಯಾಗಿಸಿ ತನ್ನ ಕೈಯಲ್ಲಿ ಇದ್ದ ಎರಡೂ ಸ್ಟಿಕ್ಗಳನ್ನು ಬಿಸಾಕಿ, ನಡೆದಾಡುವುದನ್ನು ಮತ್ತು ವೇಗವಾಗಿ ಓಡುವುದನ್ನು ಪ್ರ್ಯಾಕ್ಟೀಸ್ ಮಾಡುತ್ತಾಳೆ. ಆ ಛಲದಿಂದ ಮೌಂಟ್ ಎವರೆಸ್ಟ್ ಹತ್ತಿ ಮಹಾನ್ ಸಾಧನೆ ಮಾಡಿದಂತಹ ’ಅರುಣಿಮಾ ಸಿನ್ಹಾ’ ನಮ್ಮ ಮಕ್ಕಳಿಗೆಲ್ಲ ಆದರ್ಶವಾಗಬೇಕು. ಶ್ರೀಮಂತರ ಮನೆ ಮನೆಗಳಲ್ಲಿ ಪಾತ್ರೆ ತಿಕ್ಕುತ್ತ ತನ್ನ ಆತ್ಮ ಚರಿತ್ರೆಯನ್ನು ಬರೆದ ’ಬೇಬಿ ಹಾಲ್ದೇರ್’ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತ ಲೇಖಕಿಯಾಗುತ್ತಾಳೆ.
ಹೀಗೆ ಅಸಾಧ್ಯವಾದುದನ್ನು ಸಾಧಿಸಬಲ್ಲಂತಹ ವ್ಯಕ್ತಿಗಳ ಆದರ್ಶವನ್ನು ಮಕ್ಕಳ ಮುಂದಿಟ್ಟರೆ ಅವರು ಉನ್ನತ ಸಾಧನೆ ಮಾಡಬಲ್ಲರು. ಅಪ್ಪಿ ತಪ್ಪಿಯೂ ಚಿತ್ರ ನಟರು, ಶ್ರೀಮಂತ ವ್ಯಕ್ತಿಗಳು, ರಾಜಕಾರಣಿಗಳ ಬಗ್ಗೆ ಮಕ್ಕಳ ಮುಂದೆ ಚರ್ಚಿಸಬೇಡಿ.
ಮಕ್ಕಳ ಮುಂದೆ ಶಿಕ್ಷಕರನ್ನು ಚಿಕ್ಕವರಾಗಿ ಮಾಡಬಾರದು; ಇದಕ್ಕೆ ಸಂಭವಿಸಿದ ಹಾಗೂ ಬಹಳಷ್ಟು ತಂದೆ ತಾಯಿಗಳಿಗೆ ಸ್ಪೂರ್ತಿಯಾಗಬಲ್ಲಂತಹ ಉದಾಹರಣೆಯೊಂದನ್ನು ನಾನಿಲ್ಲಿ ಉಲ್ಲೇಖಿಸುತ್ತೇನೆ. ಆದರೆ ಆ ಘಟನೆಗೆ ಸಂಬಂಧಿಸಿದವರ ಹೆಸರುಗಳನ್ನು ಹೇಳದೆ ಕೇವಲ ಘಟನೆಯೊಂದನ್ನ ಮಾತ್ರ ಹಂಚಿಕೊಂಡಿದ್ದೇನೆ. ಅದು ಹಳೆ ಮೈಸೂರು ಭಾಗದಲ್ಲಿ ಬರುವಂತಹ ಒಂದು ಊರು. ಅವರು ಆ ನಗರದ ಶಾಸಕರು ಹಾಗೂ ಅಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ಮುಖ್ಯಸ್ಥರಾಗಿದ್ದರು. ಅವರ ಮಗ ಅವರದ್ದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಒಮ್ಮೆ ಆ ಹುಡುಗ ಕ್ಲಾಸ್ ರೂಮ್ ಒಳಗಡೆ ತನ್ನ ಸಹಪಾಠಿ ಹುಡುಗಿಗೆ ಚುಡಾಯಿಸುತ್ತಾ ಅವಳ ಬಟ್ಟೆಗಳನ್ನು ಜಗ್ಗಾಡುತ್ತ ಬಹಳ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ಅದನ್ನು ಗಮನಿಸಿದ ಇಂಗ್ಲಿಷ್ ಶಿಕ್ಷಕರು ತಕ್ಷಣ ಆತನ ಕೆನ್ನೆಗೆ ಸರಿಯಾಗಿ ಬಾರಿಸುತ್ತಾರೆ. ಆ ಶಿಕ್ಷಕರು ಹೇಳಿ ಕೇಳಿ ಕಾಲೇಜಿನಲ್ಲಿ ಬಹಳಷ್ಟು ಸ್ಟ್ರಿಕ್ಟ್ ಆಗಿದ್ದರು. ಅವರನ್ನು ಕಂಡರೆ ಇಡೀ ಕಾಲೇಜಿನ ವಿಧ್ಯಾರ್ಥಿಗಳೆಲ್ಲ ಹೆದರುತ್ತಿದ್ದರು ಮತ್ತು ಅಷ್ಟೇ ಅವರನ್ನು ಗೌರವಿಸುತ್ತಿದ್ದರು. ಆ ಶಿಕ್ಷಕರಿಂದ ಏಟು ತಿಂದು ಕುಪಿತಗೊಂಡ ಆ ಹುಡುಗ ಶಿಕ್ಷಕರ ಮೇಲೆ ಎಗರಾಡುತ್ತಾ, ನಾನು ಈ ಕಾಲೇಜಿನ ಮುಖ್ಯಸ್ಥರ ಮಗ, ನೀವು ನನ್ನ ಮೇಲೆ ಕೈ ಮಾಡಿ ಬಹಳ ದೊಡ್ಡ ತಪ್ಪು ಮಾಡಿದ್ದಿರಿ. ನಾನೀಗಲೇ ಮನೆಗೆ ಹೋಗಿ ನಮ್ಮ ತಂದೆಗೆ ಹೇಳಿ ಈ ಕ್ಷಣದಿಂದಲೇ ನಿಮ್ಮನ್ನು ಕೆಲಸದಿಂದ ವಜಾ ಗೊಳಿಸುವ ಹಾಗೆ ಮಾಡುತ್ತೇನೆ ಎನ್ನುತ್ತ ಮನೆಗೆ ಹೋಗಿ ತಂದೆಯ ಮುಂದೆ ನಡೆದ ಘಟನೆಯನ್ನು ತಿರುಚಿ ಹೇಳುತ್ತಾನೆ. ಇತ್ತ ಆ ಶಿಕ್ಷಕರು, ಇನ್ನೇನು ನನ್ನ ಕೆಲಸ ಹೊಗುತ್ತದೆ ಯಾವುದಾದರೂಂದು ಸಣ್ಣ ಪುಟ್ಟ ಅಂಗಡಿ ಇಟ್ಟುಕೊಂಡು ಉಪಜೀವನ ಸಾಗಿಸಿದರೆ ಆಯ್ತು ಅಂತ ಯೋಚಿಸುತ್ತ ಸ್ಟಾಫ್ ರೂಂನಲ್ಲಿ ಕುಳಿತಿರುತ್ತಾರೆ. ತನ್ನ ಮಗನೊಟ್ಟಿಗೆ ಕಾಲೇಜಿಗೆ ಬಂದ ಸಂಸ್ಥೆಯ ಚೇರ್ಮನ್ ಆ ಶಿಕ್ಷಕರನ್ನ ಕರೆಸಿ ಎಲ್ಲರ ಎದುರೇ ನನ್ನ ಮಗನ ಮೇಲೆ ನೀವು ಕೈ ಮಾಡಿದ್ದಿರಾ? ಶಿಕ್ಷಕರು, ಹೌದು ಎನ್ನುತ್ತಾ ನಡೆದ ಘಟನೆಯನ್ನು ವಿವರಿಸುತ್ತಾರೆ. ಆಗ ಆ ಮುಖ್ಯಸ್ಥರು ನನ್ನ ಮಗ ಹೀಗೆ ಮಾಡಿದ್ದು ನಿಜವೇ ಎಂದು ಎಲ್ಲರನ್ನು ಕೇಳುತ್ತಾರೆ! ಅದಕ್ಕೆ ಎಲ್ಲರೂ ಹೌದು. ಮುಖ್ಯಸ್ಥರು, ಹಾಗಾದರೆ ನೀವು ಇನ್ನೂ ಸರಿಯಾಗಿ ಕೆಲಸ ಮಾಡಬೇಕಿತ್ತು ಎನ್ನುತ್ತಾರೆ. ಹಾಗೆ ಹೇಳಿದ ತಕ್ಷಣ ಆ ಶಿಕ್ಷಕರು ಇನ್ನಷ್ಟು ಗಲಿಬಿಲಿಗೊಳ್ಳುತ್ತ, ನನ್ನಿಂದ ತಪ್ಪಾಯ್ತಾ ಸರ್? ಕ್ಷಮಿಸಿ ಎಂದು ಕೈಮುಗಿದು ಮನೆ ಕಡೆಗೆ ಹೊರಡಲು ಸಜ್ಜಾಗುತ್ತಾರೆ. ಆ ತಕ್ಷಣವೇ ಚೇರ್ಮನ್, ಸರ್ ನಿಲ್ಲಿ ಒಂದು ನಿಮಿಷ, ’ನನ್ನ ಮಗ ಮಾಡಿದ ಆ ತಪ್ಪಿಗೆ ನೀವು ಹೇಗೆ ಶಿಕ್ಷೆ ಕೊಡಬೇಕಿತ್ತು ಗೊತ್ತಾ? ಎನ್ನುತ್ತಲೇ ಎಲ್ಲರೆದುರು ತಮ್ಮ ಶೂಗಳನ್ನು ತೆಗೆದು ತಮ್ಮ ಮಗನ ಕೆನ್ನೆಗೆ ಸರಿಯಾಗಿ ಬಾರಿಸುತ್ತ...’ಮೇಷ್ಟ್ರೇ ನನ್ನ ಮಗ ಮಾಡಿದ ತಪ್ಪಿಗೆ ನೀವು ಹೀಗೆ ಶಿಕ್ಷೆ ಕೊಟ್ಟಿದ್ದರೆ ಸರಿಯಾಗಿತ್ತು ಎನ್ನುತ್ತಾರೆ. ಒಂದು ಕ್ಷಣ ಅಲ್ಲಿದ್ದ ಎಲ್ಲರೂ ಆಶ್ಚರ್ಯ ಚಕಿತರಾಗುತ್ತಾರೆ. ಅಷ್ಟೋತ್ತು ಅಹಂನಿಂದ ಬಿಗುತ್ತಿದ್ದ ಆ ವಿದ್ಯಾರ್ಥಿ ತನ್ನ ತಪ್ಪಿನ ಅರಿವಾಗಿ ಶಿಕ್ಷಕರ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾನೆ. ಮುಂದೆ ಆತ ತನ್ನ ತಪ್ಪನ್ನೆಲ್ಲಾ ತಿದ್ದಿಕೊಂಡು ಚೆನ್ನಾಗಿ ವಿದ್ಯಾಭ್ಯಾಸ ಮಾಡುತ್ತಾನೆ, ಮುಂದೆ ಉನ್ನತ ಶ್ರೇಣಿಯಲ್ಲಿ ಪಾಸಾಗಿ ವಿದೇಶಿಯ ದೊಡ್ಡ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಒಮ್ಮೆ ಟಿವಿ ಸಂದರ್ಶನ ಒಂದರಲ್ಲಿ ಆತ ಹೇಳುತ್ತಾನೆ, ’ಅವತ್ತು ನಾನು ಮಾಡಿದ ತಪ್ಪನ್ನು ನನ್ನ ತಂದೆ ಸಮರ್ಥನೆ ಮಾಡಿಕೊಂಡು ಆ ಶಿಕ್ಷಕರ ಮೇಲೆ ನನ್ನ ಪರವಾಗಿ ಕ್ರಮ ಕೈಗೊಂಡಿದ್ದರೆ ನಾನಿಂದು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ’ ಎನ್ನುತ್ತಾ ಆ ಶಿಕ್ಷಕರಿಗೆ ಧನ್ಯವಾದ ಹೇಳುತ್ತಾನೆ. ಅವತ್ತು ಆ ಹುಡುಗನ ತಂದೆ ನನ್ನ ಮಗನ ವಿಷಯದಲ್ಲಿ ನಡೆದುಕೊಂಡಿದ್ದ ರೀತಿ, ತನ್ನ ಮಗ ಸಂಪೂರ್ಣವಾಗಿ ಬದಲಾಗೊದಕ್ಕೆ ಕಾರಣವಾಯಿತು. ಹೀಗಾಗಿ ತಮ್ಮ ಮಕ್ಕಳ ಮುಂದೆ ಯಾವತ್ತೂ ಶಿಕ್ಷಕರನ್ನು ಸಣ್ಣವರನ್ನಾಗಿಸಬೇಡಿ. ಮಕ್ಕಳು ತಪ್ಪು ಮಾಡಿದಾಗ ಅವರ ತಪ್ಪಿನ ಅರಿವು ಮೂಡಿಸಿ ಅವರಿಗೆ ಕಷ್ಟದ ಜೀವನ ಕಲಿಸಿದರೆ ಮಕ್ಕಳು ಉನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯವಾಗುತ್ತದೆ.
ವಿಜ್ಞಾನ ಹೇಳುತ್ತದೆ! ತಂದೆ ತಾಯಿಯರನ್ನೇ ಮಕ್ಕಳು ಹೊಲುತ್ತವೆ ಅಂತ. ಆದರೆ ಭಾರತೀಯ ಚಿಂತನೆ ಹೇಳುತ್ತದೆ, ತಂದೆ ತಾಯಿಯರನ್ನು ಮಕ್ಕಳು ಹೊಲುವುದಿಲ್ಲ ಅಂತ! ವಾಸ್ತವದಲ್ಲಿ ತಾಯಿ ಗರ್ಭಿಣಿಯಾದಾಗ ಆಕೆ ಒಂಬತ್ತು ತಿಂಗಳು ಯಾವ ರೀತಿ ಜೀವನವನ್ನು ನಡೆಸುತ್ತಾಳೋ, ಏನನ್ನ ಮಾಡುತ್ತಾಳೋ, ಏನನ್ನ ಆಲೋಚಿಸುತ್ತಾಳೋ, ಏನನ್ನು ಆರಾಧಿಸುತ್ತಾಳೋ, ಏನನ್ನು ಓದುತ್ತಾಳೋ ಮಗು ಕೂಡಾ ಹಾಗೆಯೇ ಹುಟ್ಟುತ್ತದೆ. ಹಾಗಾಗಿ ಅದು ತಂದೆ ತಾಯಿಯರನ್ನು ಬಹಳಷ್ಟು ಹೋಲುವುದಿಲ್ಲ. ಉದಾ: ಪುರಾಣದಲ್ಲಿ ಪ್ರಹ್ಲಾದನ ಕಥೆಯನ್ನು ನಾವು ನೀವೆಲ್ಲ ಕೇಳಿದ್ದೇವೆ. ಪ್ರಹ್ಲಾದನ ತಂದೆ ಹಿರಣ್ಯ ಕಶ್ಯಪ ದೊಡ್ಡ ರಾಕ್ಷಸ, ವಿಷ್ಣುವಿನ ಪರಮ ದ್ವೇಷಿ. ಆದರೆ ಮಗ ಪ್ರಹ್ಲಾದ ವಿಷ್ಣುವಿನ ಪರಮ ಭಕ್ತ. ಯಾಕೆ ಹೀಗೆ? ಕಾರಣ ತಾಯಿ ಗರ್ಭ ಧರಿಸಿದಂತಹ ಸಂದರ್ಭದಲ್ಲಿ ಒಂದು ದಿನವೂ ಬಿಡದೆ ಪ್ರತಿನಿತ್ಯ ವಿಷ್ಣುವಿನ ಜಪ ಮಾಡುತ್ತಿದ್ದಳು. ಹಾಗಾಗಿ ಆ ಮಗುವಿನಲ್ಲಿ ಒಂದೇ ಒಂದು ತಂದೆಯ ರಾಕ್ಷಸ ಗುಣ ಬರಲಿಲ್ಲ. ಒಂಭತ್ತು ತಿಂಗಳು ಆ ತಾಯಿ ನಡೆಸಿದ ಜೀವನದ ಪ್ರತಿಫಲದ ಗುಣಗಳೇ ಆ ಮಗುವಿನಲ್ಲಿ ಬಂದಿದ್ದವು. ಇನ್ನು, ಶ್ರೀ ಕೃಷ್ಣನ ತಂಗಿ ಸುಭದ್ರೆ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಶ್ರೀ ಕೃಷ್ಣ ಪ್ರತಿನಿತ್ಯ ಆಕೆಗೆ ಯುದ್ಧದ ತಂತ್ರ-ಪ್ರತಿತಂತ್ರ ಅದರ ವಿವರಗಳನ್ನು ಕೊಡುತ್ತಿದ್ದ. ಆಕೆ ನಿತ್ಯ ಅದನ್ನು ಕೇಳಿಸಿಕೊಳ್ಳುತ್ತಲೇ ಇದ್ದಳು. ಅದರ ಪರಿಣಾಮವಾಗಿ ಯಾವುದೇ ಗುರುವಿನ ವಿದ್ಯೆಯನ್ನು ಪಡೆಯದೆ ಹುಟ್ಟುತ್ತಲೇ ಧೀರನಾಗಿ ಹುಟ್ಟಿದ ಅಭಿಮನ್ಯುವಿನ ಪರಾಕ್ರಮ ನಮಗೆಲ್ಲ ಗೊತ್ತಿದೆ. ಹೀಗೆ ಮಕ್ಕಳಿಗೆ ನಾವು ಏನನ್ನು ಕೊಡುತ್ತೇವೋ ಮಕ್ಕಳು ಹಾಗೆ ಬೆಳೆಯುತ್ತಾರೆ. ಹಾಗಾಗಿ ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಕರ್ತವ್ಯ ಕೂಡಾ ಬಹಳಷ್ಟು ಪ್ರಮುಖವಾಗುತ್ತದೆ.
ತಾಯಿಯ ಸಂಸ್ಕಾರ:- ಒಬ್ಬ ಬಾಲಕ ಶಾಲೆಗೆ ಹೋಗಿದ್ದು ಕೇವಲ ಮೂರು ತಿಂಗಳು ಮಾತ್ರ. ಆತ ಶತ ದಡ್ಡ, ಇವನಿಗೆ ಎಷ್ಟು ಹೇಳಿದರೂ ಒಂದು ಅಕ್ಷರ ಕೂಡಾ ತಲೆಗೆ ಹೋಗುವುದಿಲ್ಲ ಅನ್ನೊ ಕಾರಣಕ್ಕಾಗಿ ಶಿಕ್ಷಕರು ಆತನ ತಾಯಿಗೆ ಹೇಳಿ, ಆತನನ್ನು ಶಾಲೆಯಿಂದ ಹೊರ ಹಾಕುತ್ತಾರೆ. ಆದರೆ ತಾಯಿಗೆ ತನ್ನ ಮಗನ ಸಾಮರ್ಥ್ಯದ ಅರಿವು ಚೆನ್ನಾಗಿತ್ತು. ಒಂದು ದಿನ ಅವರ ಮನೆ ಹಿತ್ತಲಲ್ಲಿ ಹೆಣ್ಣು ಕೋಳಿಯೊಂದು ಮೊಟ್ಟೆಯ ಮೇಲೆ ಕುಳಿತು ಮರಿ ಮಾಡುತ್ತಿತ್ತು. ಅದನ್ನು ಗಮನಿಸಿದ ಆ ಹುಡುಗ ಏನಿದು ಅಂತ ಕೇಳುತ್ತಾನೆ. ತಾಯಿ ವಿವರಿಸಿದಳು. ಮಾರನೇ ದಿನ ಈತ ಕೂಡಾ ಕೋಳಿಯ ಹಾಗೆ ಮೊಟ್ಟೆಗಳನ್ನು ಕೆಳಗಿಟ್ಟುಕೊಂಡು ಅದರ ಮೇಲೆ ಕುಳಿತಿದ್ದ. ತಾಯಿ ಆ ಸನ್ನಿವೇಶವನ್ನು ಗಮನಿಸುತ್ತಾಳೆ. ಆಕೆಗೆ ಅನಿಸಿದ್ದು, ತನ್ನ ಮಗ ಒಬ್ಬ ಶ್ರೇಷ್ಠ ವಿಜ್ಞಾನಿ ಆಗುತ್ತಾನೆ ಅಂತ. ಆ ತುಂಟ ಬಾಲಕ ಮಾಡುವ ಪ್ರತಿಯೊಂದನ್ನೂ ಆ ತಾಯಿ ಗಮನಿಸುತ್ತಾ ಅದಕ್ಕೆ ಸಹಕಾರ ನೀಡುತ್ತಿದ್ದಳು. ಅದರ ಪರಿಣಾಮ ಆತ ಮಹಾನ್ ದೊಡ್ಡ ವಿಜ್ಞಾನಿಯಾಗಿ ನೊಬೆಲ್ ಪ್ರಶಸ್ತಿ ಪಡೆದುಕೊಂಡ. ಆತನೇ ನಮಗೆಲ್ಲ ಚಿರಪರಿಚಿತವಿರುವ ’ಥಾಮಸ್ ಅಲ್ವಾ ಎಡಿಸನ್’.
ಅದು ಭಾನುವಾರ ಆಗಿದ್ದರಿಂದ ಶಾಲೆಗೆ ರಜಾ ದಿನ. ಆ ದಿನ ಪುಟ್ಟ ಬಾಲಕನೋರ್ವ ಮಧ್ಯಾಹ್ನದ ಸಮಯದ ಹೊತ್ತಿಗೆ ತನ್ನ ಶಿಕ್ಷಕಿಯ ಮನೆಗೆ ಹೋಗುತ್ತಾನೆ. ಆತನಿಗೆ ಬಹಳಷ್ಟು ಹಸಿವಾಗಿತ್ತು. ಆ ಶಿಕ್ಷಕಿ ಹಾಲು ಮತ್ತು ಸಿಹಿ ಬೆರಿಸಿದ ರಾಗಿ ಹಿಟ್ಟಿನ ಉಂಡೆ ಒಂದನ್ನು ಮಗುವಿಗೆ ತಿನ್ನಲು ಕೊಡುತ್ತಾಳೆ. ಬಹಳಷ್ಟು ಹಸಿದಿದ್ದ ಬಾಲಕ ವೇಗವಾಗಿ ತಿನ್ನುವ ಭರದಲ್ಲಿ ಅದು ಗಂಟಲಲ್ಲಿ ಸಿಕ್ಕಿಬಿಡುತ್ತದೆ. ಕೆಳಗೂ ಇಳಿಯದೇ ಮೇಲಕ್ಕೂ ಬರದೆ ಜೋರಾಗಿ ಕೆಮ್ಮುತ್ತಿದ್ದ. ಆಗ ಕುಡಿಯಲು ನೀರು ತರಲು ಅಡುಗೆ ಕೋಣೆಯತ್ತ ಸಾಗುತ್ತಾಳೆ. ಮಡಕೆಯಲ್ಲಿ ನೋಡಿದರೆ ನೀರೆಲ್ಲ ಖಾಲಿ ಆಗಿತ್ತು. ಕೊನೆಗೆ ಆ ಮಗು ಸಾಯೋ ಸ್ಥಿತಿಗೆ ಬರುತ್ತದೆ. ಆಗ ಆಕೆಯ ತೆಲೆಗೆ ಹೊಳೆಯುತ್ತದೆ, ಅಡುಗೆ ರೂಮಿನ ಪಾತ್ರೆಯಲ್ಲಿ ಉಳಿದಿದ್ದ ಒಂದು ಲೋಟ ಹಾಲನ್ನೇ ಮಗುವಿಗೆ ಕುಡಿಸುತ್ತಾಳೆ. ಆಗ ಗಂಟಲಲ್ಲಿ ಸಿಕ್ಕ ಆಹಾರ ಅತ್ಯಂತ ಸರಾಗವಾಗಿ ಕೆಳಗಿಳಿಯುತ್ತದೆ. ಅದೃಷ್ಟ ಚೆನ್ನಾಗಿದ್ದರಿಂದ ಮಗುವಿಗೆ ಏನು ಆಗುವುದಿಲ್ಲ. ಆ ಶಿಕ್ಷಕಿಗೆ ಹೋದ ಪ್ರಾಣ ಮರಳಿ ಬಂದಂತಾಗುತ್ತದೆ. ಆ ಮಗುವನ್ನು ಬಾಚಿ ತಪ್ಪಿಕೊಂಡು ಕಣ್ಣೀರು ಸುರಿಸುತ್ತಾ, ’ಲೋ ಮಗು ಸ್ವಲ್ಪ ಸಮಯ ಹೋಗಿದ್ದರೆ ನಿನ್ನನ್ನು ಕಳೆದುಕೊಂಡು ಬಿಡುತ್ತಿದ್ನಲ್ಲೋ, ಆ ದೇವರು ಬಹಳ ದೊಡ್ಡವನು ಕಣೋ’. ಎನ್ನುತ್ತ ಸ್ವಲ್ಪ ಸಮಯ ಕಳೆದ ನಂತರ ಆಕೆ ಮಗುವಿಗೆ ಹೇಳುತ್ತಾಳೆ, ’ಮಗು ನಮ್ಮ ಊರಲ್ಲಿ ಕುಡಿಯುವ ನೀರಿಗೆ ಬಹಳಷ್ಟು ಸಮಸ್ಯೆ ಇದೆ. ಅದು ಅಪರೂಪಕ್ಕೆ ತಿಂಗಳುಗೊಮ್ಮೇ ನೀರು ಬರುತ್ತದೆ. ಈ ನೀರಿನ ಸಮಸ್ಯೆಯಿಂದಾಗಿಯೇ ಸ್ವಲ್ಪ ಸಮಯದಲ್ಲಿ ನಾನು ನಿನ್ನನ್ನೇ ಕಳೆದುಕೊಳ್ಳುತ್ತಿದ್ದೆ. ’ನೀನು ಬಹಳಷ್ಟು ಬುದ್ಧಿವಂತ ಹುಡುಗ, ಬೆಳೆದು ದೊಡ್ಡವನಾದ ಮೇಲೆ ನೀನಾದರೂ ಈ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುತ್ತೀಯಾ? ಅಂತ ಬಹಳಷ್ಟು ಆತ್ಮವಿಶ್ವಾಸದಿಂದ ಕೇಳುತ್ತಾಳೆ. ಅದಕ್ಕೆ ಆ ಮಗು, ನಾನು ಬೆಳೆದು ದೊಡ್ಡವನಾದ ಮೇಲೆ ಖಂಡಿತ ಈ ನೀರಿನ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ಹುಡುಕುತ್ತೇನೆ ಅಂತ ಹೇಳುತ್ತದೆ. ಪರಿಣಾಮ, ಮುಂದೆ ಆ ಭಾಗದ ಪ್ರತಿಯೊಂದು ನಗರ, ಹಳ್ಳಿಗಳಿಗೆಲ್ಲ ಕುಡಿಯುವ ನೀರಿನ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡುತ್ತಾನೆ. ಆತನನ್ನು ನಾವಿಂದು ಸರ್. ಎಂ. ವಿಶ್ವೇಶ್ವರಯ್ಯ ಅಂತ ಕರೆಯುತ್ತೇವೆ.
ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ಕೌರವರೆಲ್ಲರೂ ಸಾವನ್ನಪ್ಪುತ್ತಾರೆ, ಬಳಿಕ ಅರಮನೆಯಲ್ಲಿ ದೃತರಾಷ್ಟ್ರ, ಗಾಂಧಾರಿ ಹಾಗೂ ಪಾಂಡವರೆಲ್ಲ ಒಟ್ಟಾಗಿ ಸೇರಿದ್ದರು. ಜೊತೆಗೆ ಕೃಷ್ಣ ಕೂಡಾ ಪಾಂಡವರೊಟ್ಟಿಗೆ ಅರಮನೆಗೆ ಬಂದಿದ್ದ. ಗಾಂಧಾರಿ ಗಂತೂ ಪುತ್ರಶೋಕದಿಂದ ಅತ್ತು ಅತ್ತು ಅವಳ ಒಡಲೇ ಬರೆದಾಗಿತ್ತು. ಯಾಕಂದ್ರೆ, ತಂದೆ ತಾಯಿ ಏನನ್ನು ಬೇಕಾದರೆ ಸಹಿಸಿಕೊಳ್ಳುತ್ತಾರೆ, ಆದರೆ ಈ ಪುತ್ರ ಶೋಕವೊಂದನ್ನು ಮಾತ್ರ ಸಹಿಸಿಕೊಳ್ಳುವುದಿಲ್ಲ. ಈಗ ಗಾಂಧಾರಿ ದೃತರಾಷ್ಟ್ರನ ಪರಿಸ್ಥಿತಿ ಕೂಡಾ ಹಾಗೆ ಆಗಿತ್ತು. ಆ ಕ್ಷಣ ಗಾಂಧಾರಿಯ ಸಿಟ್ಟೆಲ್ಲವೂ ಕೃಷ್ಣನ ಕಡೆಗೇ ತಿರುಗುತ್ತದೆ. ಇದಕ್ಕೆಲ್ಲ ನೀನೇ ಕಾರಣ ಅಂತ ಕೃಷ್ಣನಿಗೆ ನೇರವಾಗಿ ಹೇಳುತ್ತಾಳೆ. ಕೃಷ್ಣ, ನಾನು ಹೇಗೆ ಕಾರಣ ಗಾಂಧಾರಿ? ಆಗ ಗಾಂಧಾರಿ, ಕೆಲವರು ನಿನ್ನನ್ನು ಸುಳ್ಳುಗಾರ, ಕಳ್ಳ, ಮಾಂತ್ರಿಕ, ಕಪಟಿ, ಮೋಸಗಾರ ಅಂತ ಏನೆಲ್ಲ ಹೆಸರಿನಿಂದ ಕರೆಯುತ್ತಾರೆ, ಅದೇನೇ ಇರಲಿ. ಆದರೆ ನನಗಂತೂ ಬಹಳ ಸ್ಪಷ್ಟವಾಗಿ ಗೊತ್ತಿದೆ, ನೀನು ಸಾಮಾನ್ಯ ಮನುಷ್ಯ ಆಗಲಿಕ್ಕೆ ಸಾಧ್ಯವೇ ಇಲ್ಲ, ನೀನೇ ಪರಮಾತ್ಮ. :ಹೇಳು ಕೃಷ್ಣ, ನಿನಗೆ ನಾನೇನು ಪಾಪ ಮಾಡಿದ್ದೆ? ನನಗ್ಯಾಕೆ ಇಂಥಹ ಕೆಟ್ಟ ಮಕ್ಕಳನ್ನೇ ಕೊಟ್ಟೆ ನೀನು? ಕುಂತಿಗ್ಯಾಕೆ ಅಷ್ಟೊಂದು ಒಳ್ಳೆಯ ಮಕ್ಕಳನ್ನ ಕೊಟ್ಟೆ! ಅವಳೇನು ನಿನಗೆ ಬಿಲ್ವಪತ್ರೆ, ತುಳಸಿ ದಳದಲ್ಲಿ ಪೂಜೆ ಮಾಡುತ್ತಿದ್ದಳೇ? ನಾನೇನು ನಿನಗೆ ಕಲ್ಲು ಮುಳ್ಳಿನಿಂದ ಪೂಜೆ ಸಲ್ಲಿಸಿದೆನಾ? ನಿನಗೆ ನಾನು ಮಾಡಿದ ದ್ರೋಹವಾದರೂ ಏನು? ಅವಳು ನಿನಗೆ ಮಾಡಿದ ಪೂಜೆಯಾದರೂ ಎಂತಹದ್ದು? ಆಗ ಕೃಷ್ಣ ಎಷ್ಟೊಂದು ಅದ್ಭುತವಾಗಿ ಹೇಳುತ್ತಾನೆ ನೋಡಿ! ’ಗಾಂಧಾರಿ ನಿನ್ನ ಮಕ್ಕಳು ಹಾಗೆ ಆಗುವುದಕ್ಕೆಲ್ಲ ನೀನೇ ಕಾರಣ! ಕುಂತಿಯ ಮಕ್ಕಳು ಹೀಗಾಗುವುದಕ್ಕೆ ಹೆತ್ತ ತಾಯಿಯಾದ ಕುಂತಿಯೇ ಕಾರಣ’. ಬದಲಾಗಿ ಇದ್ಯಾವುದಕ್ಕೂ ನಾನು ಕಾರಣನಲ್ಲ ಎನ್ನುತ್ತ, ಗಾಂಧಾರಿ ಸ್ವಲ್ಪ ಯೋಚನೆ ಮಾಡಿ ನೋಡು. ಮದುವೆಯಾದ ಹೊಸ್ತಿಲಲ್ಲಿ ಅತ್ತೆ ಮನೆಗೆ ಬಂದ ನೀನು ಗಂಡನಿಗೆ ಇಲ್ಲದ ಸೌಭಾಗ್ಯ ನನಗ್ಯಾಕೆ ಬೇಕು ಅಂತ ಭಾಬಿಸಿದ ನೀನು ನಿನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಿಟ್ಟೆ. ಆಗಲೇ ನಿನ್ನ ಮಕ್ಕಳೆಲ್ಲರೂ ಹಾಳಾಗೊದಕ್ಕೆ ಶುರು ಮಾಡಿದರು. ಅವರೆಲ್ಲರೂ ಮಾಡಬಾರದನ್ನೆಲ್ಲ ಮಾಡಿದರು. ಕಲಿಯಬಾರದನ್ನೆಲ್ಲವನ್ನೂ ಕಲಿತರು. ಉದ್ದಾರವಾಗುವ ಯಾವುದೇ ಮಾರ್ಗ ಹಿಡಿಯಲಿಲ್ಲ, ಹಾಳಾಗುವ ಮಾರ್ಗ ಒಂದನ್ನೂ ಬಿಡಲಿಲ್ಲ. ಆದರೆ ಕುಂತಿಗೆ ಗಂಡ ಇರಲಿಲ್ಲ, ಗಂಡನ ಜಾಗದಲ್ಲಿ ತಾನೇ ನಿಂತು ಕಣ್ಣಿಗೆ ಎಣ್ಣೆ ಹಾಕಿಕೊಂಡು ಮಕ್ಕಳನ್ನು ಬೆಳೆಸಿದಳು. ಅದರಲ್ಲೂ ದೊಡ್ಡ ಮಗನನ್ನು ಧರ್ಮ ನಿಷ್ಠೂರನಾಗಿ ಬೆಳೆಸಿದಳು, ಮುಂದೆ ಆತ ಧರ್ಮಕ್ಕೆ ರಾಜನಾದ. ಉಳಿದ ಮಕ್ಕಳಿಗೆಲ್ಲ ಹಿರಿಯ ಅಣ್ಣನನ್ನು ಅನುಸರಿಸುವಂತೆ ಹೇಳುತ್ತಾಳೆ. ಪರಿಣಾಮ ಪಾಂಡವರೆಲ್ಲರೂ ಧರ್ಮ ನಿಷ್ಠರಾದರು. ನಿನ್ನ ಮಕ್ಕಳು ಅವರ ತದ್ವಿರುದ್ಧವಾದರು. ವಾಸ್ತವವಾಗಿ ಪಾಂಡವ-ಕೌರವ ಇರ್ವರಲ್ಲೂ ಹರಿಯುತ್ತಿದ್ದುದು ಒಂದೇ ರಕ್ತ, ಕುಲವೊಂದೆ, ಗೋತ್ರ ಒಂದೆ, ಮುಖ್ಯವಾಗಿ ಇಬ್ಬರಿಗೂ ವಿದ್ಯೆ ಕಲಿಸಿದ ಗುರು ಕೂಡಾ ಒಬ್ಬರೇ, ಆದರೆ ಯಾಕೆ ಹೀಗೆ? ಇತ್ತ ಕುಂತಿ ಕಣ್ಣು ತೆರೆದುಕೊಂಡು ಮಕ್ಕಳನ್ನು ಬೆಳೆಸಿದರೆ. ನೀನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಕ್ಕಳನ್ನ ಫ್ರೀಯಾಗಿ ಬಿಟ್ಟೆ. ಇಲ್ಲಿ ತಾಯಿ ಒಬ್ಬಳು ಬದಲಾಗಿದ್ದಕ್ಕೆ ಕುಂತಿ ಮಕ್ಕಳಲ್ಲರೂ ದೇವತೆಗಳಂತಾದರು. ನಿನ್ನ ಮಕ್ಕಳೆಲ್ಲರೂ ಸಂಪೂರ್ಣವಾಗಿ ಹಾಳಾದರು. ಹಾಗಾಗಿ ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಬಹಳ ಮುಖ್ಯ.
ತಾಯಿ ಒಬ್ಬಳು ಜಾಗೃತಳಾಗಿದ್ದಕ್ಕೆ, ಶಾಲೆಯಲ್ಲಿ ಬುದ್ಧಿಹೀನ ಅಂತ ಪಟ್ಟ ಕಟ್ಟಿಕೊಂಡು ಆ ಶಾಲೆಯಿಂದ ಉಚ್ಚಾಟಿಸಲ್ಪಟ್ಟ ಥಾಮಸ್ ಅಲ್ವಾ ಎಡಿಸನ್ ಜಗತ್ತಿನ ಶ್ರೇಷ್ಠ ವಿಜ್ಞಾನಿಯಾದ. ತಾಯಿಯ ಜಾಗೃತೆಯಿಂದ ಆ ತುಂಟ ಬಾಲಕ ನರೇಂದ್ರನಾಗಿದ್ದವ ವಿವೇಕಾನಂದರಾಗಿ ವಿಶ್ವ ವಿಖ್ಯಾತಿಯಾದ. ಆ ಶಿಕ್ಷಕಿಯ ಮಾತನ್ನೇ ಸಾಧನೆಯ ಕನಸನ್ನಾಗಿಸಿಕೊಂಡ ಆ ಹುಡುಗ ಆ ಭಾಗದಲ್ಲೆಲ್ಲ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಿದ ಸರ್. ಎಂ. ವಿಶ್ವೇಶ್ವರಯ್ಯ ನಮಗೆಲ್ಲ ಅಚ್ಚು ಮೆಚ್ಚು. ತಾಯಿ ಒಬ್ಬಳು ಜಾಗೃತಳಾಗಿದ್ದಕ್ಕೆ ಪಾಂಡವರೆಲ್ಲ ಸತ್ಯವಂತರಾದರು. ಈ ಎಲ್ಲಾ ತಾಯಂದಿರಲ್ಲಿ ಆ ಸಾಮಥ್ಯ9 ಎಲ್ಲಿಂದ ಬಂದಿತ್ತು? ಅವರೇನು ಕೇಂಬ್ರಿಡ್ಜ್, ಆಕ್ಸ್ಫರ್ಡ, ಹಾರ್ವರ್ಡ್ ನಂತಹ ವಿಶ್ವವಿದ್ಯಾಲಯಗಳಲ್ಲಿ ಓದಿದವರೇ? ಇಲ್ಲ. ಆದರೂ ಈ ತಾಯಂದಿರಿಗೆಲ್ಲ ಈ ಸಾಮರ್ಥ್ಯ ಹೇಗೆ ಬಂತು ಗೊತ್ತಾ? ಈ ಎಲ್ಲಾ ಸಾಮರ್ಥ್ಯಗಳನ್ನು ಒಳಗೊಂಡ ಆ ಸಾಮರ್ಥ್ಯ ಅದುವೆ ’ಪಾವಿತ್ರತೆ’ ಅದು ನಮ್ಮ ತಾಯಂದಿರಲ್ಲಿದೆ. ಭಾರತದ ಮಣ್ಣಿನ ಗುಣವದು.
ಲೇಖಕರು: ಯುವ ಚಿಂತಕರು ಹಾಗೂ ಅಂಕಣಕಾರರು
- * * * -