ದೇವದಾಸಿಯರ ಮಕ್ಕಳಿಗೆ ತಾಯಿಯ ಹೆಸರೇ ಸಾಕು: ನ್ಯಾಯಾಧೀಶ ಬಿರಾದಾರ

  ದೇವದಾಸಿಯರ ಮಕ್ಕಳಿಗೆ ತಾಯಿಯ ಹೆಸರೇ ಸಾಕು: ನ್ಯಾಯಾಧೀಶ ಬಿರಾದಾರ  Mother's name is sufficient for children of Devadasis: Judge Biradar

ಲೋಕದರ್ಶನ ವರದಿ 

 ಹಾವೇರಿ, ಸೆ.28: ದೇವದಾಸಿಯರ ಮಕ್ಕಳಿಗೆ ತಂದೆಯ ಹೆಸರನ್ನು ನಮೂದಿಸುವ ಅಗತ್ಯವಿಲ್ಲ. ತಾಯಿಯ ಹೆಸರನ್ನು ನಮೂದಿಸಿದರೆ ಸಾಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿರಾದಾರ ದೇವೇಂದ್ರ​‍್ಪ ಎನ್‌. ಹೇಳಿದರು.  

 ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪಾಲುದಾರರ ಸಮಾಲೋಚನೆ ಹಾಗೂ ವಿವಿಧ ಕಾನೂನು ಅರಿವು ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.  

 ತಂದೆಯ ಹೆಸರನ್ನು ಬರೆಯುವುದು ಹಾಗೂ ಕೇಳುವುದು ಹಿಂದಿನಿಂದಲೂ ರೂಢಿಯಾಗಿ ಬಂದಿದ್ದು, ದೇವದಾಸಿ ಪದ್ಧತಿ ಸಮಾಜದಲ್ಲಿನ ಅನಿಷ್ಟ ಪದ್ಧತಿಯಾಗಿದ್ದು, ಕಾಲಕ್ರಮೇಣ ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು. ಈ ಪದ್ಧತಿಯನ್ನು ಮುಂದಿನ ಪೀಳಿಗೆಗೂ ಮುಂದುವರಿಸಬಾರದು ಎಂದು ಅವರು ಹೇಳಿದರು.  

 ದೇವದಾಸಿಯರು ಸರ್ಕಾರದ ವಿವಿಧ ಸೌಲಭ್ಯಗಳನ್ನು ಸಂಬಂಧಿಸಿದ ಇಲಾಖೆಗೆ ಅರ್ಜಿ ಸಲ್ಲಿಸುವ ಮೂಲಕ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.   ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್‌. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ  ಶ್ರೀಶೈಲಜಾ ಎಚ್‌.ವಿ., ನಿವೃತ್ತ ಪ್ರಾಂಶುಪಾಲ ಡಿ.ಟಿ. ಪಾಟೀಲ,   ಜನಿಫರ್, ಎಸ್‌.ಡಿ. ಬಣಿಗಾರ, ಎಸ್‌.ಎಚ್‌. ಮಜೀದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.