ಬೀದಿ ನಾಯಿಗಳ ಹಾವಳಿ ಹೆಚ್ಚಳ; ಕ್ರಮಕ್ಕೆ ನಿವಾಸಿಗಳ ಒತ್ತಾಯ
Menace of stray dogs on the rise; residents demand action
ಲಕ್ಷ್ಮೇಶ್ವರ, ಆ.4: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಒಂದೇ ವಾರದಲ್ಲಿ ಇಬ್ಬರು ಮಕ್ಕಳ ಮೇಲೆ ದಾಳಿ ನಡೆದಿರುವ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಪಟ್ಟಣದ 5ನೇ ವಾರ್ಡ್ ನಿವಾಸಿ ವಸೀಂ ಮಕಾದರ್ ಅವರ ಎರಡು ವರ್ಷದ ಪುತ್ರಿ ರಸ್ತೆ ಮೂಲಕ ತೆರಳುತ್ತಿದ್ದ ವೇಳೆ ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿದ್ದು, ಮಗುವಿನ ತಲೆಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಮಗುವಿಗೆ ಮೊದಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇದೇ ಪ್ರದೇಶದಲ್ಲಿ ನಾಲ್ಕು ದಿನಗಳ ಹಿಂದೆ ಮತ್ತೊಬ್ಬ ಮಗುವಿನ ಮೇಲೆಯೂ ಬೀದಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿದ್ದವು. ಪದೇ ಪದೇ ಇಂತಹ ಘಟನೆಗಳು ಸಂಭವಿಸುತ್ತಿದ್ದರೂ ಪುರಸಭೆ ಅಧಿಕಾರಿಗಳು ಸಮರ್ಕ ಕ್ರಮ ಕೈಗೊಂಡಿಲ್ಲ ಎಂದು ಗಾಯಾಳುಗಳ ಕುಟುಂಬಸ್ಥರು ಹಾಗೂ ವಾರ್ಡ್ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾದ ಸಂದರ್ಭದಲ್ಲಿ ಪುರಸಭೆ ವತಿಯಿಂದ ನಾಯಿಗಳನ್ನು ಹಿಡಿದು ಸ್ಥಳಾಂತರಿಸುವ ಕ್ರಮ ಕೈಗೊಂಡಿದ್ದರಿಂದ ಸಮಸ್ಯೆ ನಿಯಂತ್ರಣಕ್ಕೆ ಬಂದಿತ್ತು. ಆದರೆ ಇತ್ತೀಚೆಗೆ ಮತ್ತೆ ಎಲ್ಲಾ ವಾರ್ಡ್ಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಸಾರ್ವಜನಿಕರು, ವಿಶೇಷವಾಗಿ ಮಕ್ಕಳು ಹಾಗೂ ವೃದ್ಧರು ಭಯದಲ್ಲಿ ಸಂಚರಿಸುವಂತಾಗಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.
ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಂಡು ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ನಿವಾಸಿಗಳು ಪುರಸಭೆಗೆ ಆಗ್ರಹಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ, ಸಮಸ್ಯೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬೀದಿ ನಾಯಿಗಳನ್ನು ಹಿಡಿದು ಪ್ರಾಣಿ ಕಲ್ಯಾಣ ನಿಯಮಾವಳಿಗಳ ಅನುಸಾರ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯವನ್ನು ಶೀಘ್ರ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 