ಸಂಘದ ಅಭಿವೃದ್ಧಿಗೆ ಸದಸ್ಯರ ನಂಬಿಕೆಯೇ ಬಂಡವಾಳ: ಮಡು ಸಾಹುಕಾರ ಬಿರಾದಾರ

ಸಂಘದ ಅಭಿವೃದ್ಧಿಗೆ ಸದಸ್ಯರ ನಂಬಿಕೆಯೇ ಬಂಡವಾಳ: ಮಡು ಸಾಹುಕಾರ ಬಿರಾದಾರ  Members' trust is the capital for the association's development: Madu Sahukara Biradar


ತಾಳಿಕೋಟೆ, 23: ಸಂಘದ ಸದಸ್ಯರ ನಂಬಿಕೆಯೇ ಸಂಘದ ನಿಜವಾದ ಬಂಡವಾಳ. ಸದಸ್ಯರ ವಿಶ್ವಾಸವಿದ್ದರೆ ಸಂಘವು ನಿರಂತರವಾಗಿ ಬೆಳೆಯಲು ಸಾಧ್ಯ. ಎಲ್ಲರೂ ಒಗ್ಗಟ್ಟಿನಿಂದ ಸಂಘದ ಅಭಿವೃದ್ಧಿಗೆ ಇನ್ನಷ್ಟು ಹೆಚ್ಚಿನ ಕೆಲಸ ಮಾಡಬೇಕಿದೆ ಎಂದು ಸಂಘದ ಅಧ್ಯಕ್ಷ ಮಡು ಸಾಹುಕಾರ ಬಿರಾದಾರ ಹೇಳಿದರು.  

ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ 50ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಅವರು ಮಾತನಾಡಿದರು.  

ಗ್ರಾಮೀಣ ಭಾಗದ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸಹಕಾರಿ ಸಂಘದಲ್ಲಿ ಹಲವಾರು ಯೋಜನೆಗಳಿವೆ. ರೈತರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಅಲ್ಲದೆ, ರೈತರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಇದು ಸಂಘದ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿದೆ ಎಂದು ಅವರು ಹೇಳಿದರು.  

ಸಂಘದ ಮುಖ್ಯ ಕಾರ್ಯನಿರ್ವಾಹಕ ಎಸ್‌.ಬಿ. ಬಿರಾದಾರ ಅವರು ವಾರ್ಷಿಕ ವರದಿ ಮಂಡಿಸಿ, ಪ್ರಸಕ್ತ ವರ್ಷದಲ್ಲಿ ಸಂಘವು 1,335 ಸದಸ್ಯರನ್ನು ಹೊಂದಿದ್ದು, ಶೇ.71.72ರಷ್ಟು ಷೇರು ಬಂಡವಾಳ, ?6.72 ಕೋಟಿ ದುಡಿಯುವ ಬಂಡವಾಳ, ?19.15 ಲಕ್ಷ ಠೇವಣಿ ಹಾಗೂ ?5.25 ಕೋಟಿ ಸಾಲವನ್ನು ರೈತರಿಗೆ ವಿತರಿಸಿದೆ. ಸಂಘವು ?4.14 ಲಕ್ಷ ಲಾಭ ಗಳಿಸಿದೆ ಎಂದು ತಿಳಿಸಿದರು.  

ಸಭೆಯಲ್ಲಿ ಸದಸ್ಯರು ಸಂಘದ ಅಭಿವೃದ್ಧಿ ದೃಷ್ಟಿಯಿಂದ ನೀಡಿದ ಸಲಹೆ-ಸೂಚನೆಗಳನ್ನು ಆಡಳಿತ ಮಂಡಳಿ ಸಭೆಯ ಮುಂದಿಡಲಾಗುವುದು. ಅವುಗಳನ್ನು ಕಾರ್ಯರೂಪಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.  ಸಂಘದ ಪಿಕೆಪಿಎಸ್ ಕಾರ್ಯನಿರ್ವಾಹಕ ಗುರುಪಾದಗೌಡ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.  

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಮಹಾದೇವಿ ಪಾಟೀಲ, ನಿರ್ದೇಶಕರಾದ ಮಾಳಪ್ಪ ಅಮಲ್ಯಾಳ, ಸಂಗನಗೌಡ ಪಾಟೀಲ, ತಿಪ್ಪಣ್ಣ ಆದವಾನಿ, ಚಿದಾನಂದ ಬಿರಾದಾರ, ಶಿವಮ್ಮ ಕನೊಳ್ಳಿ, ಸಿದ್ದಪ್ಪ ಕಟ್ಟಿಮನಿ, ಬಾಬುಗೌಡ ಪಾಟೀಲ, ಬಸನಗೌಡ ಬಿರಾದಾರ, ಈರಸಂಗಪ್ಪ ಧೂಳೆಕರ, ಯಮನಪ್ಪ ಹರಿಜನ, ಗ್ರಾಮದ ಗಣ್ಯರು, ಹಿರಿಯರು ಹಾಗೂ ಸಂಘದ ಸಿಬ್ಬಂದಿಗಳಾದ ಎಸ್‌.ಜಿ. ಗುಂಡಲಗೇರಿ, ಬಿ.ಟಿ. ಸದಬ ಉಪಸ್ಥಿತರಿದ್ದರು.