ಡಿ.ದೇವರಾಜ ಅರಸುರವರ ಜನ್ಮ ದಿನಾಚರಣೆ ಅರ್ಥಪೂರ್ಣ ಆಚರಣೆ

ಡಿ.ದೇವರಾಜ ಅರಸುರವರ ಜನ್ಮ ದಿನಾಚರಣೆ ಅರ್ಥಪೂರ್ಣ ಆಚರಣೆ Meaningful celebration of D. Devaraj Urs's birth anniversary

             ಹಾವೇರಿ 12:  ಡಿ.ದೇವರಾಜ ಅರಸು ಅವರು ರಾಜ್ಯ ಕಂಡ ಧೀಮಂತ ನಾಯಕರಾಗಿದ್ದು, ಅವರ ಜನ್ಮ ದಿನಾಚರಣೆಯನ್ನು ಆಗಸ್ಟ್‌ 20 ರಂದು ಅರ್ಥಪೂರ್ಣ ಆಚರಣೆಗೆ  ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್‌. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಡಿ.ದೇವರಾಜ ಅರಸುರವರ 111ನೇ ಜನ್ಮ ದಿನಾಚರಣೆ ಆಚರಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಗಸ್ಟ್‌ 20 ರಂದು ಹಾವೇರಿ ನಗರದ ಶ್ರೀ ಪುರಸಿದ್ದೇಶ್ವರ ದೇವಸ್ಥಾನದಿಂದ ಡಿ.ದೇವರಾಜ ಅರಸು ಅವರ ಭಾವಚಿತ್ರ ಮೆರವಣೆಗೆ ಹಾಗೂ ಜಿಲ್ಲಾ ಗುರುಭವನದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲು ನಿರ್ಣಯಿಸಲಾಯಿತು. 

ಡಿ.ದೇವರಾಜ ಅರಸು ಅವರ ಕುರಿತು  ಶಾಲಾ-ಕಾಲೇಜು ಹಾಗೂ ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಭಾಷಣ, ಪ್ರಬಂಧ ಸ್ಪರ್ಧೆ ಆಯೋಜಿಸಲು,  ಎಸ್‌.ಎಸ್‌.ಎಲ್‌.ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲು ತೀರ್ಮಾನಿಸಲಾಯಿತು. 

ಶಾಲಾ-ಕಾಲೇಜು,  ಸರ್ಕಾರಿ ಕಚೇರಿಗಳು ಹಾಗೂ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಡಿ.ದೇವರಾಜ ಅರಸುರವರ ಜನ್ಮ ದಿನಾಚರಣೆ  ಆಚರಣೆ ಮಾಡಲು  ಆದೇಶ ಹೊರಡಿಸುವಂತೆ ಆಯಾ ಇಲಾಖೆ ಮುಖಸ್ಥರಿಗೆ ನಿರ್ದೇಶನ ನೀಡಿದರು.  

ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಡಿ.ದೇವರಾಜ ಅರಸು ಅವರ ಜನ್ಮದಿನಾಚರಣೆಯನ್ನು ಯಶಸ್ವಿಯಾಗಿ ಆಚರಣೆ ಮಾಡಬೇಕು. ಮೆರವಣಿಗೆ ಉತ್ತಮ ಕಲಾಂತಡಗಳ ನಿಯೋಜನೆಗೆ,  ಉಪನ್ಯಾಸಕರ ಆಯ್ಕೆ ಹಾಗೂ ಶಿಷ್ಟಾಚಾರ ಪ್ರಕಾರ ಆಮಂತ್ರಣ ಪತ್ರಿಕೆ ತಯಾರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆರ್‌.ಸುಬ್ರಾನಾಯ್ಕ ಅವರು ಕಾರ್ಯಕ್ರಮದ ರೂಪ-ರೇಷೆಗಳನ್ನು ವಿವರಿಸಿದರು. 

ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಫ್‌.ಎನ್‌.ಗಾಜಿಗೌಡ್ರ, ಹಾವೇರಿ ಶಹರ ಪೊಲೀಸ್ ಠಾಣೆ ಸಿಪಿಐ ಮೋತಿಲಾಲ್ ಪವಾರ, ಪೌರಾಯುಕ್ತ ಕಾಂತರಾಜು, ಮಹಿಳಾ ಮತ್ತು ಮಕ್ಕಳ  ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು.