ಬಿಸಿಯೂಟ ನೌಕರರ ಬೃಹತ್ ಪ್ರತಿಭಟನೆ
Massive protest by mid-day meal workers
ಲೋಕದರ್ಶನ ವರದಿ
ಧಾರವಾಡ 10: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯಂತೆ ಬಿಸಿಯೂಟ ನೌಕರರಿಗೆ ?7 ಸಾವಿರ ವೇತನ ಹೆಚ್ಚಳ ಮಾಡಬೇಕು, 6 ಗಂಟೆಗಳ ಕೆಲಸದ ಅವಧಿಯ ಸುತ್ತೋಲೆ ಹೊರಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳ ಬಿಸಿಯೂಟ ನೌಕರರು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಧಾರವಾಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಬಿಸಿಯೂಟ ನೌಕರರಿಗೆ ?7 ಸಾವಿರ ವೇತನ ಹೆಚ್ಚಳ ಮಾಡಬೇಕು. ಆರೋಗ್ಯ ವಿಮೆ, ಪಿಂಚಣಿ ಸೇರಿದಂತೆ ಸಾಮಾಜಿಕ ಭದ್ರತೆ ಒದಗಿಸಬೇಕು. ನಿವೃತ್ತಿ ಹೊಂದಿದ ನೌಕರರಿಗೆ ಇಡಿಗಂಟು ಹಣವನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಶಾಲೆಗಳಲ್ಲಿ ಗ್ರೂಪ್-ಡಿ ನೌಕರರ ಕೊರತೆ ಇರುವ ಹಿನ್ನೆಲೆಯಲ್ಲಿ ಬಿಸಿಯೂಟ ನೌಕರರ ಮೇಲೆಯೇ ಶಾಲಾ ಸ್ವಚ್ಛತೆ, ಕೈತೋಟ ನಿರ್ವಹಣೆ, ಶಾಲಾ ಸಮಯದ ಗಂಟೆ ಬಾರಿಸುವುದು ಸೇರಿದಂತೆ ಹೆಚ್ಚುವರಿ ಕೆಲಸಗಳನ್ನು ನೀಡಲಾಗುತ್ತಿದೆ. ಹೀಗಾಗಿ ಇವರನ್ನು ಶಾಲಾ ಸಿಬ್ಬಂದಿ ಎಂದು ಪರಿಗಣಿಸಿ ಸೂಕ್ತ ನೇಮಕಾತಿ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ್ ಪತ್ತಾರ, "ಕೇಂದ್ರ ಸರ್ಕಾರದ ಮಧ್ಯಾಹ್ನ ಬಿಸಿಯೂಟ ಯೋಜನೆಗೆ ಕಳೆದ 12 ವರ್ಷಗಳಿಂದ ಯಾವುದೇ ಅನುದಾನ ಹೆಚ್ಚಳ ಮಾಡಿಲ್ಲ. ಬಿಸಿಯೂಟ ನೌಕರರ ವೇತನವನ್ನೂ ಹೆಚ್ಚಿಸಿಲ್ಲ. ಮಹತ್ವದ ಕೆಲಸ ನಿರ್ವಹಿಸುತ್ತಿರುವ ಬಡ ಮಹಿಳೆಯರನ್ನು ಅತ್ಯಂತ ಕಡಿಮೆ ವೇತನದಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಸರ್ಕಾರಗಳು ಇವರ ನ್ಯಾಯಯುತ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಬಿಸಿಯೂಟ ನೌಕರರ ಹೋರಾಟವನ್ನು ತೀವ್ರಗೊಳಿಸಲಾಗುವುದು" ಎಂದು ಎಚ್ಚರಿಸಿದರು.
ಬಿಸಿಯೂಟ ನೌಕರರು ಹಲವು ವರ್ಷಗಳಿಂದ ಕಡಿಮೆ ವೇತನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರ ಸೇವೆಯನ್ನು ಪರಿಗಣಿಸಿ ಕನಿಷ್ಠ ವೇತನ ಹಾಗೂ ಅಗತ್ಯ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ಜಿಲ್ಲಾ ಅಧ್ಯಕ್ಷ ಬಿ.ಎಲ್. ಏಳಿಗೇರ್, ಸಂಘದ ಜಿಲ್ಲಾಧ್ಯಕ್ಷೆ ಚೆನ್ನಮ್ಮ ದೊಡ್ಲಿ, ಪ್ರಧಾನ ಕಾರ್ಯದರ್ಶಿ ಸುನಂದಾ ಚಿಗರಿ, ಖಜಾಂಚಿ ಫಕೀರವ್ವ ತೆಂಬದಮನಿ, ಶೋಭಾ ಮೂಳಿಮನಿ, ಯಮನವ್ವ ಮಾದರ, ಕಲಾವತಿ, ಶೋಭಾ ಸೇರಿದಂತೆ ಹಲವರು ವಹಿಸಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಬಿಸಿಯೂಟ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ 