ವಿದ್ಯಾರ್ಥಿಗಳ ಜೀವನದಲ್ಲಿ ಅಂಕಗಳಿಕೆಯೇ ಅಂತಿಮವಲ್ಲ-ಡಾ. ಅಜಿತ ಪ್ರಸಾದ

ವಿದ್ಯಾರ್ಥಿಗಳ ಜೀವನದಲ್ಲಿ ಅಂಕಗಳಿಕೆಯೇ ಅಂತಿಮವಲ್ಲ-ಡಾ. ಅಜಿತ ಪ್ರಸಾದ Marks are not the end in students' lives: Dr. Ajit Prasad

ಧಾರವಾಡ 11: ವಿದ್ಯಾರ್ಥಿಗಳ ಪ್ರತಿಭೆಗೆ ಮನ್ನಣೆ ಸಿಗಬೇಕು ಆಗ ಮಾತ್ರ ವಿದ್ಯಾರ್ಥಿಗಳು ಪಟ್ಟ ಪರಿಶ್ರಮ ಸಾರ್ಥಕವಾಗುತ್ತದೆ. ಜೀವನದಲ್ಲಿ ಕೇವಲ ಅಂಕಗಳಿಕೆ ಮಾತ್ರ ಅಂತಿಮವಲ್ಲ. ಪಠ್ಯವನ್ನು ಹೊರತು ಪಡಿಸಿ ವಿದ್ಯಾರ್ಥಿಗಳಲ್ಲಿನ ಕೌಶಲ್ಯವನ್ನು ಹೊರತರುವ ಪ್ರಯತ್ನವಾಗಬೇಕಾಗಿದೆ. ಕೇವಲ ಓದಿನಿಂದ ಸಾಧನೆ ಅಲ್ಲಾ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಹಾಡುಗಾರಿಕೆ, ನೃತ್ಯದಂತಹ ಹವ್ಯಾಸಗಳು ಸಹ ಮಕ್ಕಳ ಭವಿಷ್ಯವನ್ನು ರೂಪಿಸಬಲ್ಲದು ಎಂದು ಧಾರವಾಡದ ವಿದ್ಯಾಗಿರಿಯ ಜೆ.ಎಸ್‌.ಎಸ್ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಧಾರವಾಡ ಜೈನ ಮಿಲನದ ನೂತನ ಪಧಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ವಿತರಣಾ ಕಾಯಕ್ರಮವನ್ನು ಉದ್ಘಾಟಿಸಿ ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡುತ್ತಿದ್ದರು. 

ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಸರಿಯಾದ ವೇಳಾಪಟ್ಟಿಯನ್ನು ಹಾಕಿಕೊಳ್ಳಬೇಕು. ಹಿರಿಯರಿಗೆ ಗೌರವ ಕೊಡುವುದನ್ನು, ಜೀವನದಲ್ಲಿ ಶಿಸ್ತು, ಸಂಯಮವನ್ನು ರೂಢಿಸಿಕೊಳ್ಳಬೇಕು. ಇದು ವಿದ್ಯಾರ್ಥಿಗಳನ್ನು ಸಾಧನೆಯ ಉತ್ತುಂಗಕ್ಕೆ ಏರಿಸಬಲ್ಲದು. ಯಾವುದೇ ವಿದ್ಯಾರ್ಥಿಯ ಆರ್ಥಿಕ ಪರಿಸ್ಥಿತಿಯಿಂದ ಆತನ ಪ್ರತಿಭೆ ಕಮರಬಾರದು. ಸಮಾಜಕ್ಕೆ ವಿದ್ಯಾವಂತ, ಸಂಸ್ಕಾರವಂತ ವಿದ್ಯಾರ್ಥಿಗಳ ಅವಶ್ಯಕತೆ ಇದೆ. ಧಾರವಾಡ ಜೈನ ಮಿಲನದ ಅಡಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗಾಗಿ ಪ್ರತಿ ವರ್ಷ ಶಿಷ್ಯವೇತನ ವಿತರಣೆಯ ಮೂಲಕ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಇಂದು ಸಹ ಪ್ರತಿಭಾವಂತ ಕನ್ನಡ ಮಾಧ್ಯಮ ಶಾಲೆಯ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಅವರ ಶಿಕ್ಷಣಕ್ಕೆ ಸಹಾಯ ಹಸ್ತ ಚಾಚಿದೆ. ಈ ರೀತಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಾಗ ಯಾವುದೇ ಜಾತಿ ಮತ ಪಂತವನ್ನು ನೊಡದೇ ಕೇವಲ ಪ್ರತಿಭೆೆಯ ಮೇಲೆ ಆಯ್ಕೆ ಮಾಡಿರುವುದು ಅಭಿನಂದನಾರ್ಹ. ನೂತನವಾಗಿ ಪದಗ್ರಹಣ ಪಡೆದ ಜೈನ ಮಿಲನದ ಪದಾಧಿಕಾರಿಗಳು ಇನ್ನು ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಕರೆ ನೀಡಿದರು. 

ಶಾಂತರಾಜ ಮಲ್ಲಸಮುದ್ರ ಅಧ್ಯಕ್ಷೀಯಪರ ನುಡಿಗಳನ್ನಾಡಿ ಜೈನ ಸಾಹಿತ್ಯ ಸಂಸ್ಕೃತಿಯನ್ನು ಉಳಿಸುವ ಕೆಲಸ ಯುವಕರಿಂದ ಆಗಬೇಕಾಗಿದೆ. ವಿದ್ಯಾರ್ಥಿಗಳು ನಯ, ವಿನಯದೊಂದಿಗೆ ಸಂಸ್ಕಾರ ಭರಿತ ಶಿಕ್ಷಣ ಪಡೆಯಬೇಕು. ಆಗ ಮಾತ್ರ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ ಎಂದು ಹೇಳಿದರು. 

ಡಾ. ಸೂರಜ್ ಜೈನ್ ಗಣ್ಯರನ್ನು ಸ್ವಾಗತಿಸಿದರು,   ರಾಜೇಶ್ವರಿ ಶೆಟ್ಟಿ ಸ್ವಾಗತ ಗೀತೆ ಹಾಡಿದರು. ಸುಜಾತಾ ಹಡಗಲಿ, ಸಂಗೀತಾ ಉಪಾದ್ಯೆ, ಮಹಾವೀರ ಉಪಾದ್ಯೆ, ಜಿನದತ್ತ ಹಡಗಲಿ, ಜಿನ್ನಪ್ಪ ಕುಂದಗೊಳ, ರತ್ನಾಕರ ಹೊಳಗಿ, ಮೊಹನಕುಮಾರ ಗೋಗಿ ಉಪಸ್ಥಿತರಿದ್ದರು. ವೈಶಾಲಿ ಹೊನ್ನಪ್ಪನವರ ವಂದಿಸಿದರು. ಸುನಂದಾ ವರೂರು ಕಾರ್ಯಕ್ರಮ ನಿರೂಪಿಸಿದರು. 

ಇದೇ ಸಂದರ್ಭದಲ್ಲಿ ಶ್ರೀಮತಿ. ವಾಣಿ ಪ್ರಸಾದ ಮತ್ತು ಡಾ. ಅಜಿತ ಪ್ರಸಾದರವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.