ಗವಿಮಠದ ಶ್ರೀಗಳ ಕಣ್ಣೀರಿಗೆ ಕಾರಣರಾದವರಿಗೆ ತಕ್ಕ ಶಾಸ್ತಿ : ನಾರಾಯಣರಡ್ಡಿ

ಗವಿಮಠದ ಶ್ರೀಗಳ ಕಣ್ಣೀರಿಗೆ ಕಾರಣರಾದವರಿಗೆ ತಕ್ಕ ಶಾಸ್ತಿ : ನಾರಾಯಣರಡ್ಡಿ March by the State Farmers' Association on the 36th day of the anti-factory protest

ಲೋಕದರ್ಶನ ವರದಿ

36ನೇ ದಿನದ ಕಾರ್ಖಾನೆ ವಿರೋಧಿ ಹೋರಾಟ ರಾಜ್ಯ ರೈತ ಸಂಘದಿಂದ ಮೆರವಣಿಗೆ 

ಕೊಪ್ಪಳ 05: ನಗರದಲ್ಲಿ ಬಲ್ಡೋಟ (ಬಿಎಸ್ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸಿಂಡಿಯಾ ಇತರೆ ಮಾರಕ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ನಡೆದಿರುವ ಅನಿರ್ದಿಷ್ಟಾವಧಿ ಧರಣಿ 36ನೇ ದಿನದಲ್ಲಿ ಮುಂದುವರಿದಿದ್ದು ಕರ್ನಾಟಕ ರಾಜ್ಯ ರೈತ ಸಂಘ ಬೆಂಬಲಿಸಿತು.  

ವಿಷಾನೀಲ, ದೂಳು ಬಾಧಿತ ಮುದ್ದಾಬಳ್ಳಿ ಹಾಗೂ ಸುತ್ತಲಿನ ಗ್ರಾಮಗಳ ನೂರಾರು ರೈತರು, ರೈತ ಮಹಿಳೆಯರು ಕ.ರಾ.ರೈ.ಸಂ. ಹಸಿರು ಸೇನೆ ರಾಜ್ಯಾಧ್ಯಕ್ಷ ವಿ.ಆರ್‌.ನಾರಾಯಣರೆಡ್ಡಿ ನೇತೃತ್ವದಲ್ಲಿ ಕೇಂದ್ರೀಯ ಬಸ್ ನಿಲ್ದಾಣ ಮುಂದಿರುವ ಸಂತಶ್ರೇಷ್ಠ ಕನಕದಾಸರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಕಾರ್ಖಾನೆ ವಿರೋಧಿ ಮತ್ತು ಸರ್ಕಾರದ ವಿರುದ್ಧ ಆಕ್ರೋಶಭರಿತ ಧಿಕ್ಕಾರದ ಘೋಷಣೆ ಕೂಗುತ್ತಾ ಅಶೋಕ ವೃತ್ತದಲ್ಲಿ ತಹಶೀಲ್ದಾರ್ ವಿಠ್ಠಲ್ ಚೌಗಲಾ ಅವರ ಮೂಲಕ ಬಲ್ಡೋಟ ವಿಸ್ತರಣೆಗೆ ಅನುಮತಿ ಕೊಡಬಾರದು ಎಂದು ಮುಖ್ಯಮಂತ್ರಿಗೆ ಆಗ್ರಹ ಪತ್ರ ನೀಡಿದರು.  

ನಗರಸಭೆ ಆಯುಕ್ತರಿಗೂ ಹಕ್ಕೊತ್ತಾಯ ಪತ್ರ ಸಲ್ಲಿಸಿದರು. ನಂತರ ಧರಣಿ ಸ್ಥಳಕ್ಕೆ ಬಂದು ಸೇರಿದ ರೈತರನ್ನು ಉದ್ದೇಶಿಸಿ ರಾಜ್ಯಾಧ್ಯಕ್ಷ ನಾರಾಯಣರೆಡ್ಡಿ ಮಾತನಾಡಿ "ಇಲ್ಲಿನ ರೈತರ ಭೂಮಿ ಕಸಿದುಕೊಂಡ ಕಾರ್ಖಾನೆಗಳಿಗೆ ಬೆಂಬಲವಾಗಿ, ಬಲ್ಡೋಟ ವಿಸ್ತರಣೆಗೆ ಟೊಂಕ ಕಟ್ಟಿ ನಿಂತವರು ಯಾರು ಎಂದು ಜನರಿಗೆ ಗೊತ್ತಿದೆ. ಕೃಷಿ, ಆರೋಗ್ಯ, ಕೊನೆಯದಾಗಿ ಜೀವನ ಕಳೆದುಕೊಳ್ಳುತ್ತಿರುವ ಕಾರ್ಖಾನೆ ಸುತ್ತುವರಿದ ಹಳ್ಳಿಗಳ ಜನರು ಸಿಡಿದೇಳಬೇಕು. ಇಲ್ಲಿನ ಗವಿಮಠದ ಸ್ವಾಮೀಜಿ ಕಣ್ಣೀರಾಕಿದ್ದು ರಾಜ್ಯದ ಜವಾಬ್ದಾರಿಯುತ ಜನರು ಗಮನಿಸಿದ್ದಾರೆ. ದೂಳು, ಹೊಗೆ ಕುಡಿಸಿ ಚೆಲ್ಲಾಟವಾಡುತ್ತೇವೆ ಎಂದರೆ ಬಿಡಲು ಸಾಧ್ಯವಿಲ್ಲ. ಬೆಳಗಾವಿ ಅಧಿವೇಶನದ ಮುಂದೆ ಈ ಬೇಡಿಕೆಯನ್ನು ಇಟ್ಟು ಡಿಸೆಂಬರ್ 11 ಅಥವಾ 12 ರಂದು ಹೋರಾಟ ಮಾಡುತ್ತೇವೆ. ರೈತರು ದೊಡ್ಡ ಸಂಖ್ಯೆಯಲ್ಲಿ ಹೋರಾಟಕ್ಕೆ ಬನ್ನಿ ಎಂದ ಅವರು, ಮುಂದೆ ಕೊಪ್ಪಳದಲ್ಲಿ ಬೃಹತ್ ಹೋರಾಟಕ್ಕೆ ರಾಜ್ಯದ ಮೂಲೆ ಮೂಲೆಯಿಂದ ರೈತರು ಬರುತ್ತೇವೆ ಎಂದರು. 

ಕರ್ನಾಟಕ ರಾಷ್ಟ್ರ ಸಮಿತಿ ಸೈನಿಕ ಎಲ್‌.ಜೀವನ್ ಮಾತನಾಡಿ, ಇಲ್ಲಿ ಬದುಕಲು ಸಾಧ್ಯವಿಲ್ಲದ ವಾತಾವರಣ ಸೃಷ್ಟಿಯಾಗಿದೆ. 20ಕ್ಕೂ ಹೆಚ್ಚಿನ ಹಳ್ಳಿಗಳ ಮತ್ತು ಜಿಲ್ಲಾ ಕೇಂದ್ರದ ರಕ್ಷಣೆ ಮಾಡಲು ಸಾದ್ಯವಾಗದ ರಾಜಕಾರಣಿಗಳು ಇದ್ದು ಫಲವೇನು? ಈ ಜನರ ರಕ್ಷಣೆ ಮಾಡಲು ನಮ್ಮ ಸೈನಿಕರು ಎಂತಹ ತ್ಯಾಗಕ್ಕೂ ಸಿದ್ಧರಾಗಿದ್ದಾರೆ. ನಾಡಿನ ಜನರ ಹಕ್ಕುಗಳನ್ನು ಕಾಪಾಡಲು ಸೈನಿಕರು ಸದಾ ಸಿದ್ಧ ಎಂದರು.  

ಹೋರಾಟ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಗೋನಾಳ (ಕೆ.ಬಿ.ಗೋನಾಳ), ಮಂಜುನಾಥ ಜಿ. ಗೊಂಡಬಾಳ, ಡಿ.ಎಚ್‌.ಪೂಜಾರ್ ಮಾತನಾಡದರು. ಧರಣಿಯಲ್ಲಿ ಹಸಿರು ಸೇನೆ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಎಚ್‌.ಎನ್‌. ಗೋವಿಂದರೆಡ್ಡಿ, ಗದಗ ಹಸಿರು ಸೇನೆ ಜಿಲ್ಲಾಧ್ಯಕ್ಷ ಯಲ್ಲಪ್ಪ ಬಾಬರಿ, ರಾಜ್ಯ ಹಸಿರು ಸೇನೆ ಉಪಾಧ್ಯಕ್ಷ ಅಂದಪ್ಪ ಹುರಳಿ, ಕೊಪ್ಪಳ ಹಸಿರು ಸೇನೆ ಜಿಲ್ಲಾಧ್ಯಕ್ಷ ವೆಂಕರೆಡ್ಡಿ ಚುಕನಕಲ್, ರೈತ ಮಹಿಳೆ ಸಾವಿತ್ರಿ ತೆಗ್ಗಿನಮನಿ, ರೇಣುಕಾ ಬಿನ್ನಾಳ, ಶರಣಮ್ಮ ಮೇಟಿ, ಹನುಮಂತಪ್ಪ ಮುರಡಿ, ಶಂಕ್ರ​‍್ಪ ವಕ್ಕಳದ, ವಜೀರಸಾಬ ತಳಕಲ್, ಕೆ.ಆರ್‌.ಎಸ್ ಸೈನಿಕರಾಧ ನಾಗರಾಜ ಕವಲೂರು, ಬಸವರಾಜ ಯಂಬಲದ, ಶ್ಯಾಮೀದ ಅಲಿ, ವೆಂಕಟೇಶ ಉಪ್ಪಲದಿನ್ನಿ, ಶರಣಪ್ಪ ಗುರಿಕಾರ, ವೀರೇಶ ಎಂ, ಬಸವರಾಜ ಬಿ, ಮೈನುದ್ದೀನ್ ಗಂಗಾವತಿ, ಎಫ್‌.ಎಸ್‌.ಜಾಲಿಹಾಳ, ಡಿ. ಎಂ. ಬಡಿಗೇರ ಇದ್ದರು.