ಕನ್ನಡೇತರರನ್ನು ಗುರುತಿಸಿ ಕನ್ನಡ ಕಲಿಸುವ ಸರ್ಕಾರದ ಪ್ರಯತ್ನ ಯಶಸ್ವಿಗೊಳಿಸಿ: ಹೊನಕೇರಿ

ಕನ್ನಡೇತರರನ್ನು ಗುರುತಿಸಿ ಕನ್ನಡ ಕಲಿಸುವ ಸರ್ಕಾರದ ಪ್ರಯತ್ನ ಯಶಸ್ವಿಗೊಳಿಸಿ: ಹೊನಕೇರಿ Make the government's efforts to identify non-Kannada speakers and teach them Kannada a success: Hon

ಬೆಳಗಾವಿ 04: ಜಿಲ್ಲೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಕೃತ, ಖಾಸಗಿ ವಲಯದ ಬ್ಯಾಂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡೇತರ ಅಧಿಕಾರಿ ನೌಕರರಿಗೆ, ವಸತಿ ಸಮುಚ್ಛಯ ಪ್ರದೇಶಗಳಲ್ಲಿ ವಾಸಿಸುವ ಕನ್ನಡೇತರರನ್ನು ಗುರುತಿಸಿ ಅವರಿಗೆ ಕನ್ನಡ ಕಲಿಸುವ ಸರ್ಕಾರದ ಪ್ರಯತ್ನವನ್ನು ಯಶಸ್ವಿಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ತಿಳಿಸಿದರು. 

ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಶುಕ್ರವಾರ (ಜು.4) ಜರುಗಿದ ಕನ್ನಡೇತರರಿಗೆ ಕನ್ನಡ ಕಲಿಸುವ ತರಬೇತಿ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಜಿಲ್ಲೆಯಲ್ಲಿನ ಕನ್ನಡೇತರರನ್ನು ಗುರುತಿಸಿ ಅವರಿಗೆ ಕನ್ನಡ ಕಲಿಸಲು ಮನವೊಲಿಸಬೇಕು. ಈ ಕಾರ್ಯಕ್ಕೆ ನೋಡೆಲ್ ಅಧಿಕಾರಿಯನ್ನು ನೇಮಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ಪಡೆದುಕೊಳ್ಳಬೇಕು ಎಂದರು. 

ಕನ್ನಡೇತರರಿಗೆ ಕನ್ನಡ ಕಲಿಸಲು ಸೂಕ್ತವಾದ ಸ್ಥಳವನ್ನು ಗುರುತಿಸಿ ತರಗತಿಗಳನ್ನು ನಡೆಸಲು ಕ್ರಮ ಕೈಗೊಳ್ಳಬೇಕು. ಆಯಾ ಕಚೇರಿಗಳಲ್ಲಿ ಕನ್ನಡೇತರರನ್ನು ಗುರುತಿಸಿ 30 ಜನರ ಗುಂಪನ್ನು ಮಾಡಿ 1 ಗಂಟೆಯ ತರಬೇತಿ ನೀಡಬೇಕು. ಜಿಲ್ಲಾ ವ್ಯಾಪ್ತಿಯಲ್ಲಿನ ಸ್ಥಳೀಯ ನುರಿತ ಕನ್ನಡ ಭಾಷಾ ಬೋಧನೆಯ ಅನುಭವವುಳ್ಳ ಶಿಕ್ಷಕರನ್ನು ಗುರುತಿಸಿ ಆಯ್ಕೆ ಮಾಡಲು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ತಿಳಿಸಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾದ ವಿದ್ಯಾವತಿ ಭಜಂತರಿ ಅವರು ಮಾತನಾಡಿ ವಾರಕ್ಕೆ 3 ದಿನದಂತೆ ಪ್ರತಿ ದಿನ 1 ಗಂಟೆಯಂತೆ 3 ತಿಂಗಳ ಅವಧಿಗೆ ತರಗತಿಗಳನ್ನು ನಡೆಸಲಾಗುವುದು ಎಂದು ತಿಳಿಸಿದರು. 

ಸಭೆಯಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ್ ತಳವಾರ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.