ಬೆಂಗಳೂರು, ಏ.13, ಇಂದು ಬೆಳಗ್ಗೆ ನಿಧನರಾದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಂ.ವಿ.ರಾಜಶೇಖರನ್ ಅವರ ನಿವಾಸಕ್ಕೆ ತೆರಳಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಸಿದರು.ರಾಜಶೇಖರನ್ ಅವರು ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದರು, ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿಯೂ ಭಾಗಿಯಾಗಿದ್ದರು. ಶಾಸಕರಾಗಿ, ರಾಜ್ಯಸಭಾ ಸದಸ್ಯರಾಗಿ, ವಿಧಾನಪರಿಷತ್ ಸದಸ್ಯರಾಗಿ ಅನೇಕ ವಿಭಾಗಗಳಲ್ಲಿ ಸಮಾಜ ಸೇವೆ ಸಲ್ಲಿಸಿದ್ದಾರೆ. ಸಾಮಾಜಿಕ ಕಳಕಳಿ ಹೊಂದಿದ್ದ ಅವರು, ಯುವಕರಿಗೆ ಮಾರ್ಗದರ್ಶಕರಾಗಿದ್ದರು. ಒಬ್ಬ ರಾಜಕಾರಣಿ ಹೇಗಿರಬೇಕು ಎಂಬುದಕ್ಕೆ ಅವರು ಮಾದರಿಯಾಗಿದ್ದರು. ಅವರ ಸಾವು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ವೈಯಕ್ತಿಕವಾಗಿಯೂ ಅವರು ತಮ್ಮೊಂದಿಗೆ ಪ್ರೀತಿಯಿಂದ ಅಭಿಮಾನದಿಂದ ಮಾತನಾಡಿಸುತ್ತಿದ್ದರು. ಅವರ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.ರಾಜಶೇಖರನ್ ಅವರ ನಿಧನದಿಂದ ನಾವು ಒಬ್ಬ ಅನುಭವಿ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷದ ನಾಯಕರಾಗಿ, ಶಾಸಕ-ಸಂಸದರಾಗಿ, ಕೇಂದ್ರ ಸಚಿವರಾಗಿ ಅವರು ಸಲ್ಲಿಸಿರುವ ಸೇವೆ ಸದಾ ಸ್ಮರಣೀಯ. ಅವರ ಅಗಲಿಕೆಯ ದುಃಖದಲ್ಲಿರುವ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು ಎಂದು ಸಿದ್ಧರಾಮಯ್ಯ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.ತಮ್ಮನ್ನು ಆತ್ಮೀಯವಾಗಿ ಪ್ರೀತಿಸುತ್ತಿದ್ದ ಆತ್ಮ ರಾಜಶೇಖರನ್ ಅವರು, ಅವರ ಮನೆಗೆ ಕರೆಮಾಡಿ ಸಾಹೇಬರಿಗೆ ಕೊಡಿ ಎಂದಾಗ ಮುಗ್ಧರಂತೆ ತಾವೇ ಎನ್ನುತ್ತಿದ್ದರು. ಅವರ ಅಗಲಿಕೆ ದುಃಖಿತರಲ್ಲಿ ತಾವು ಒಬ್ಬ ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.