ಅಗ್ನಿ ದುರಂತ ಸಂತ್ರಸ್ತರ ಕುಟುಂಬಗಳಿಗೆ ಶಾಸಕ ಅಪ್ಪಾಜಿ ನಾಡಗೌಡ ಸಾಂತ್ವನ

ಅಗ್ನಿ ದುರಂತ ಸಂತ್ರಸ್ತರ ಕುಟುಂಬಗಳಿಗೆ ಶಾಸಕ ಅಪ್ಪಾಜಿ ನಾಡಗೌಡ ಸಾಂತ್ವನ MLA Appaji Nad Gowda condoles the fire disaster victims' families

ತಾಳಿಕೋಟಿ 13 : ಪಟ್ಟಣದ ಭೂಮಿಕಾ ಹೋಟೆಲ್ದಲ್ಲಿ ಸಿಲಿಂಡರ್ ಗ್ಯಾಸ್ ಸೋರಿಕೆಯಿಂದಾಗಿ ಸಂಭವಿಸಿದ ಅಗ್ನಿ ಅವಘಡದಿಂದ ಮೃತಪಟ್ಟ ಶಕೀಲ ಕುಂಬಾರವಾಡಿ, ಬಸೀರ ಕಡದರಾಳ, ರಾಜಕುಮಾರ ಗೊಟಗುಣಕಿ ಹಾಗೂ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಯುವಕ ಕಿರಣ ಕೋಟೆಮನಿ ಅವರ ನಿವಾಸಕ್ಕೆ ಶಾಸಕ ಅಪ್ಪಾಜಿ ನಾಡಗೌಡರು ಗುರುವಾರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದ ಶಾಸಕ ನಾಡಗೌಡರು ಅವರ ದುಃಖದಲ್ಲಿ ಭಾಗಿಯಾಗಿ ವೈಯಕ್ತಿಕವಾಗಿ ಧನಸಹಾಯವನ್ನು ನೀಡಿ ಧೈರ್ಯ ತುಂಬಿದರು.

ಕುಟುಂಬವು ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯನ್ನು ಆಲಿಸಿದ ಅವರು ಸರ್ಕಾರದಿಂದ ದೊರೆಯ ಬಹುದಾದ ಪರಿಹಾರವನ್ನು ಶೀಘ್ರದಲ್ಲಿ ಮಂಜೂರು ಮಾಡಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಹಾಗೂ ಮೃತ ಶಕೀಲ ಕುಂಬಾರವಾಡಿ ಅವರ ಧರ್ಮಪತ್ನಿಗೆ ಕುಟುಂಬದ ನಿರ್ವಹಣೆಗಾಗಿ ಒಂದು ಸರ್ಕಾರಿ ನೌಕರಿ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.  

ಸಿಲೆಂಡರ್ ಗ್ಯಾಸ್ ಸೋರಿಕೆ ಆಗದಂತೆ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಅದು ಇಲ್ಲದೆ ಹೋದಲ್ಲಿ ಇಂತಹ ಅಪಘಡಗಳು ಸಂಭವಿಸಿ ಅಮೂಲ್ಯ ಜೀವಿಗಳು ಕಳೆದುಕೊಳ್ಳಬೇಕಾಗುತ್ತದೆ ಸಾರ್ವಜನಿಕರು ಈ ಕುರಿತು ಹೆಚ್ಚು ಜಾಗೃತಿ ವಹಿಸಬೇಕು ಎಂದರು. ಮೃತಪಟ್ಟ ವ್ಯಕ್ತಿಗಳ ಸಣ್ಣ ಸಣ್ಣ ಮಕ್ಕಳನ್ನು ನೋಡಿ ದುಖಿತರಾದ ಅವರು ಯಾವುದೇ ಕುಟುಂಬ ಇಂಥಹ ನೋವನ್ನು ಅನುಭವಿಸಬಾರದು. ಜನರ ಸಂಕಷ್ಟದ ಸಮಯದಲ್ಲಿ ಅವರೊಂದಿಗೆ ನಿಲ್ಲುವುದು ನನ್ನ ಕರ್ತವ್ಯವಾಗಿದ್ದು ಮೃತರ ಕುಟುಂಬಕ್ಕೆ ಸಾಧ್ಯವಾದ ಎಲ್ಲ ರೀತಿಯ ನೆರವು ಮತ್ತು ಸಹಕಾರ ನೀಡಲು ಸದಾ ಬದ್ಧನಾಗಿದ್ದೇನೆ ಎಂದು ಅವರು ಹೇಳಿದರು.

ಭಗವಂತ ಅಗಲಿದ ವ್ಯಕ್ತಿಗಳ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿ, ಧೈರ್ಯ ಮತ್ತು ನೆಮ್ಮದಿಯನ್ನು ಕರುಣಿಸಿಲೆಂದು ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಅವರು ತನ್ನ ಜೀವವನ್ನು ಪಣಕ್ಕಿಟ್ಟು ಏಳು ಜನರ ಜೀವವನ್ನು ಉಳಿಸಲು ಪ್ರಯತ್ನಿಸಿದ ಯುವಕ ಕಿರಣ್ ಕೋಟೆಮನಿ ಇವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ಸತ್ಕರಿಸಿ ಅಭಿನಂದಿಸಿದರು. 

ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡ ಸಯ್ಯದ್ ಶಕೀಲ ಅಹ್ಮದ್ ಕಾಜಿ, ಪುರಸಭೆ ಮುಖ್ಯಾ ಧಿಕಾರಿ ವಸಂತ ಪವಾರ, ಮುಖಂಡರಾದ ಸುರೇಶಧಣಿ ನಾಡಗೌಡ (ಬಿಂಜಲಭಾವಿ) ಸಿದ್ದನಗೌಡ ಪಾಟೀಲ(ನಾವದಗಿ), ಪ್ರಭುಗೌಡ ಮದರಕಲ್ಲ,ಇಬ್ರಾಹಿಂ ಮನ್ಸೂರ್, ನೀಲಮ್ಮಗೌಡ್ತಿ ಪಾಟೀಲ, ಮೆಹಬೂಬ ಕೆಂಭಾವಿ, ಮೋದಿನಸಾ ನಗಾರ್ಚಿ,ಫಯಾಜ ಉತ್ನಾಳ,ಸಿಕಂದರ ಡೋಣಿ, ಸದ್ದಾಂ ಹೊನ್ನಳ್ಳಿ, ಆಸೀಫ ಕೆಂಭಾವಿ, ಗೋಪಾಲ ಕಟ್ಟಿಮನಿ, ಕಾರ್ಯಕರ್ತರು ಹಾಗೂ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.