ಬಿಎಸ್‌ಎಸ್ಕೆ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಶಾಸಕರ ಮನವಿ

ಬಿಎಸ್‌ಎಸ್ಕೆ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಶಾಸಕರ ಮನವಿ  MLA's request for revival of BSSK sugar factory


ಬೀದರ್, ಆ.19: ರೈತರ ಜೀವನಾಡಿಯಾಗಿರುವ ಬಿಎಸ್‌ಎಸ್ಕೆ ಸಕ್ಕರೆ ಕಾರ್ಖಾನೆಯ ಹರಾಜು ಪ್ರಕ್ರಿಯೆ ತಡೆದು, ಕಾರ್ಖಾನೆಯನ್ನು ಸೂಕ್ತ ಸಂಸ್ಥೆಗೆ ಲೀಸ್ ಆಧಾರದ ಮೇಲೆ ನೀಡಿ ಪುನಶ್ಚೇತನಗೊಳಿಸುವಂತೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಹುಮನಾಬಾದ್ ಕ್ಷೇತ್ರದ ಶಾಸಕ ಡಾ. ಸಿದ್ದು ಪಾಟೀಲ ಅವರು ಸಕ್ಕರೆ ಮತ್ತು ಜವಳಿ ಇಲಾಖೆ ಸಚಿವ ರುದ್ರ​‍್ಪ ಮಾನಪ್ಪ ಲಮಾಣಿ ಅವರಿಗೆ ಮನವಿ ಸಲ್ಲಿಸಿದರು.  

ಬಿಎಸ್‌ಎಸ್ಕೆ ಕಾರ್ಖಾನೆ ಹಲವು ವರ್ಷಗಳಿಂದ ಸ್ಥಗಿತಗೊಂಡಿರುವುದರಿಂದ ಈ ಭಾಗದ ಕಬ್ಬು ಬೆಳೆಗಾರರು ತೊಂದರೆ ಅನುಭವಿಸುತ್ತಿದ್ದಾರೆ. ಕಾರ್ಖಾನೆ ಪುನರಾರಂಭಗೊಂಡರೆ ಬೀದರ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಕಬ್ಬು ಬೆಳೆಗಾರರಿಗೆ ಸ್ಥಳೀಯವಾಗಿ ಮಾರುಕಟ್ಟೆ ದೊರೆಯುವುದರ ಜತೆಗೆ ಸಾಗಣೆ ವೆಚ್ಚವೂ ಕಡಿಮೆಯಾಗಲಿದೆ ಎಂದು ಶಾಸಕರು ತಿಳಿಸಿದರು.  

ಕಾರ್ಖಾನೆಯನ್ನು ಹರಾಜು ಮಾಡುವ ಬದಲು ಸೂಕ್ತ ಸಂಸ್ಥೆಗೆ ಲೀಸ್ ಆಧಾರದ ಮೇಲೆ ನೀಡಿ, ವೈಜ್ಞಾನಿಕ ಹಾಗೂ ಆರ್ಥಿಕವಾಗಿ ಪುನಶ್ಚೇತನಗೊಳಿಸುವುದು ರೈತರು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಸೂಕ್ತ ಕ್ರಮವಾಗಿದೆ. ಕಾರ್ಖಾನೆಯನ್ನು ಅವಲಂಬಿಸಿರುವ ಕಾರ್ಮಿಕರು ಹಾಗೂ ಸಾವಿರಾರು ಕುಟುಂಬಗಳಿಗೆ ಉದ್ಯೋಗ ಮತ್ತು ಜೀವನೋಪಾಯದ ಅವಕಾಶಗಳು ದೊರೆಯಲಿವೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.  

ಬಿಎಸ್‌ಎಸ್ಕೆ ಪುನಶ್ಚೇತನಗೊಂಡರೆ ಕಬ್ಬು ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ದೊರೆಯುವುದರೊಂದಿಗೆ ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶಗಳು ಹೆಚ್ಚಲಿವೆ. ಇದರಿಂದ ಬೀದರ್ ಜಿಲ್ಲೆಯ ವ್ಯಾಪಾರ, ಸಾರಿಗೆ ಮತ್ತು ಸಣ್ಣ ಕೈಗಾರಿಕೆ ಸೇರಿದಂತೆ ಒಟ್ಟಾರೆ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ ಎಂದು ಶಾಸಕರು ಹೇಳಿದರು.  

ರೈತರು, ಕಾರ್ಮಿಕರು ಹಾಗೂ ಈ ಭಾಗದ ಆರ್ಥಿಕ ಹಿತದೃಷ್ಟಿಯಿಂದ ಬಿಎಸ್‌ಎಸ್ಕೆ ಸಕ್ಕರೆ ಕಾರ್ಖಾನೆಯನ್ನು ಶೀಘ್ರ ಪುನರಾರಂಭಿಸುವ ನಿಟ್ಟಿನಲ್ಲಿ ಸರ್ಕಾರ ಸಕಾರಾತ್ಮಕ ನಿರ್ಧಾರ ಕೈಗೊಳ್ಳಬೇಕು ಎಂದು ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಡಾ. ಸಿದ್ದು ಪಾಟೀಲ ಒತ್ತಾಯಿಸಿದರು.  

ಮನವಿಗೆ ಸ್ಪಂದಿಸಿದ ಸಚಿವ ರುದ್ರ​‍್ಪ ಲಮಾಣಿ ಅವರು, ಹರಾಜು ಪ್ರಕ್ರಿಯೆಗೆ ನಾಳೆಯೇ ತಡೆಯಾಜ್ಞೆ ನೀಡಿ, ಸೋಮವಾರ ಅಥವಾ ಮಂಗಳವಾರ ಬೀದರ್ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಸಭೆ ಕರೆದು ಈ ಕುರಿತು ಸಮಗ್ರವಾಗಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.