ಪ್ರಕೃತಿಯಂತೆ ಪರೋಪಕಾರಿಗಳಾಗಿ ಬಾಳಿ: ಡಾ. ಚಂದ್ರಶೇಖರ ಶಿವಾಚಾರ್ಯ

ಪ್ರಕೃತಿಯಂತೆ ಪರೋಪಕಾರಿಗಳಾಗಿ ಬಾಳಿ: ಡಾ. ಚಂದ್ರಶೇಖರ ಶಿವಾಚಾರ್ಯ  Live a life of benevolence, like nature: Dr. Chandrashekhara Shivacharya

ಲೋಕದರ್ಶನ ವರದಿ 

ಧಾರವಾಡ 27 : ಪ್ರಕೃತಿ ಮನುಷ್ಯನಿಗೆ ಪರೋಪಕಾರದ ಸಂದೇಶ ನೀಡುತ್ತಿದೆ. ಅದನ್ನು ಅರ್ಥಮಾಡಿಕೊಂಡು ಪರೋಪಕಾರಿ ಬದುಕು ನಡೆಸಿದಾಗ ಮನುಷ್ಯನ ಜೀವನ ಸಾರ್ಥಕವಾಗುತ್ತದೆ ಎಂದು ಕಾಶಿ ಜ್ಞಾನಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.  

ಉತ್ತರ ಪ್ರದೇಶದ ವಾರಾಣಸಿಯ ಜ್ಞಾನಪೀಠದಲ್ಲಿ ನಡೆದ 80ನೇ ವರ್ಧಂತಿ ಮಹೋತ್ಸವದ ಸಂದರ್ಭದಲ್ಲಿ ಕಾಶಿ ವಿಶ್ವನಾಥ ದೇವಾಲಯದ ಭದ್ರತಾ ಮುಖ್ಯಸ್ಥ ಸಿಆರ​‍್ಿಎಫ್ ಕಮಾಂಡರ್ ರಾಜಶೇಖರ ಶಿವಲಿಂಗಯ್ಯ ಅವರಿಗೆ ‘ರಾಷ್ಟ್ರಧರ್ಮ ಸೇವಾ ಶಿರೋಮಣಿ’ ಪ್ರಶಸ್ತಿ ನೀಡಿ ಆಶೀರ್ವಚನ ನೀಡಿದರು.  

ಮರಗಳು ಹಣ್ಣು-ನೆರಳು, ನದಿಗಳು ನೀರು ಹಾಗೂ ಮೋಡಗಳು ಮಳೆಯನ್ನು ನೀಡುತ್ತವೆ. ಪ್ರಾಣಿಗಳೂ ಮನುಷ್ಯನಿಗೆ ಉಪಕಾರ ಮಾಡುತ್ತವೆ. ಅದೇ ರೀತಿ ಮನುಷ್ಯನು ಸ್ವಾರ್ಥ ತೊರೆದು ಪರೋಪಕಾರಿಯಾಗಬೇಕು. ಪ್ರತಿಯೊಬ್ಬರೂ ಪ್ರಕೃತಿಯ ಸಮಷ್ಟಿ ಆಶಯವನ್ನು ಅರಿತು ಮುನ್ನಡೆದಾಗ ಮಾತ್ರ ವರ್ಧಂತಿ ಮಹೋತ್ಸವದ ಆಚರಣೆಗೆ ಅರ್ಥ ಬರುತ್ತದೆ ಎಂದರು.  ಜನ್ಮದಿನೋತ್ಸವದಂದು ಎಲ್ಲರೂ ಸಮಾಜಮುಖಿಯಾಗಿ ಕೆಲಸ ಮಾಡುವ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.  

ಈ ಸಂದರ್ಭದಲ್ಲಿ ಪ್ರಾತಃಕಾಲ ಜಗದ್ಗುರು ವಿಶ್ವಾರಾಧ್ಯರಿಗೆ ಮಹಾರುದ್ರಾಭಿಷೇಕ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯಿತು. ಸಂಜೆ ವೀರಶೈವ ಪಂಚಸೂತ್ರೀಯ ಮಹಾಕಾವ್ಯದ ಕುರಿತು ಪ್ರವಚನ ನಡೆಯಿತು. ಶ್ರಾವಣ ಮಾಸದ ಅಂಗವಾಗಿ ವಿವಿಧ ಮಠಗಳ ಶ್ರೀದಿಗಂಬರ ಶಿವಾಚಾರ್ಯ ಸ್ವಾಮೀಜಿ, ಶ್ರೀಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಶ್ರೀಮಹಾದೇವ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಹತ್ತು ದಿನಗಳ ಅನುಷ್ಠಾನವೂ ಮಂಗಲಗೊಂಡಿತು.  

ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ದೆಹಲಿ, ಹರಿಯಾಣ, ರಾಜಸ್ಥಾನ, ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ಜಗದ್ಗುರುಗಳಿಗೆ ಗುರು ವಂದನೆ ಸಲ್ಲಿಸಿದರು. ವಾರಾಣಸಿಯ ವಿವಿಧ ವಿಶ್ವವಿದ್ಯಾಲಯಗಳ ಸಂಸ್ಕೃತ ವಿದ್ವಾಂಸರಾದ ಡಾ. ಕಮಲೇಶ್ ಜಾ, ಡಾ. ವಿನೋದ ಪಾಠಕ್, ಕಾಶೀಪೀಠದ ವ್ಯವಸ್ಥಾಪಕ ಆರ್‌.ಕೆ. ಸ್ವಾಮಿ, ನಳಿನಿ ಚರವಿಮೆ, ಶಿವಾನಂದ ಹಿರೇಮಠ, ಸುಭಾಷ್ ಮಮಾಣಿ ಮತ್ತಿತರರು ಪಾಲ್ಗೊಂಡಿದ್ದರು.