ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಾಹಿತ್ಯ ಪೂರಕ: ಡಾ. ಬಸು ಬೇವಿನಗಿಡದ

ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಾಹಿತ್ಯ ಪೂರಕ: ಡಾ. ಬಸು ಬೇವಿನಗಿಡದ Literature is a supplement to children's personality development: Dr. Basu Bevinagidada

ಧಾರವಾಡ 28:  ಪ್ರಸ್ತುತ ಸಮಾಜದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ನೇರವಾಗಿ ಬುದ್ದಿಮಾತು ಹೇಳುವ ಬದಲು ಸಾಹಿತ್ಯದ ಮೂಲಕ ಮಾರ್ಗದರ್ಶನ ಮಾಡುವುದರಿಂದ ಹೇಳಬೇಕಾದ ವಿಚಾರವು ಮಕ್ಕಳ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುತ್ತದೆ.  ಸಾಹಿತ್ಯದ ಸ್ವಾರಸ್ಯಕರ ಸಂಗತಿಗಳು, ಮನರಂಜನೆಯ ಅಂಶಗಳು, ಭಾಷೆಯ ಲಯ, ಸೌಂದರ್ಯ, ಆಕರ್ಷಣೆಗಳ ಮುಖಾಂತರ ಸಂದೇಶಗಳನ್ನು ಕಳಿಸಿದರೆ, ಬೆಳೆಯುತ್ತಿರುವ ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ ಹೆಚ್ಚಾಗುತ್ತದೆ ಎಂದು ಕಥೆಗಾರ, ನಿವೃತ್ತ ಆಕಾಶವಾಣಿ ಕಾರ್ಯಕ್ರಮ ಅಧಿಕಾರಿ ಡಾ. ಬಸು ಬೇವಿನಗಿಡದ ಹೇಳಿದರು.   

ದಿನಾಂಕ: 28.06.2025ರಂದು ನಗರದ ಮಾಳಮಡ್ಡಿಯ ಕೆ.ಇ.ಬೋರ್ಡ ಸಂಸ್ಥೆಯ ಸಭಾಂಗಣದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಕೆ.ಇ.ಬೋರ್ಡ ಸಂಸ್ಥೆಯ ಸಹಯೋಗದಲ್ಲಿ ಏರಿ​‍್ಡಸಿದ್ದ ‘ಬಾಲ ಸಾಹಿತಿ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಬೇವಿನಗಿಡದ ಅವರು ಮಕ್ಕಳು ಉತ್ತಮ ಸಾಹಿತ್ಯ ಕೃತಿಗಳನ್ನು ಓದುತ್ತ ಸಂಸ್ಕೃತಿಯ ಅರಿವನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ.  ಸಮಕಾಲೀನ ಬದುಕಿನಲ್ಲಿ ಇರುವಂತ ಒಳ್ಳೆಯ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ಮಕ್ಕಳ ಸಣ್ಣಪುಟ್ಟ ಸಾಧನೆಗಳನ್ನೂ ಕೂಡ ಪ್ರೋತ್ಸಾಹಿಸುವರ ಮುಖಾಂತರ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಬಹುದಾಗಿದೆ ಎಂದು ತಿಳಿಸಿದರು.   

ಇನ್ನೊರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕಥೆಗಾರ್ತಿ ಸುನಂದಾ ಕಡಮೆ ಮಕ್ಕಳ ಸಾಹಿತ್ಯದಲ್ಲಿ ಅಡಕವಾಗಿರುವ ಶೈಕ್ಷಣಿಕ ವಿಚಾರಗಳ ಕುರಿತಾಗಿ ಮಾತನಾಡುತ್ತ ಮಕ್ಕಳು ತಮ್ಮ ಹಕ್ಕುಗಳು, ಸುರಕ್ಷತೆ, ಸವಲತ್ತುಗಳು, ಕಾನೂನುಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಿದೆ ಎಂದರು.  ಶಿಕ್ಷಕರು ಸಾಹಿತ್ಯದ ಕೃತಿಗಳನ್ನು ಓದಲು ಮಕ್ಕಳಲ್ಲಿ ಪ್ರೇರಣೆ ತುಂಬಿ ಭವಿಷ್ಯದ ಬಗೆಗೆ ಮಕ್ಕಳು ಸಕಾರಾತ್ಮಕವಾಗಿ ಯೋಚಿಸುವಂತೆ ಮಾಡಬೇಕೆಂದರು.   ಯಾವುದೇ ಸಾಹಿತ್ಯವು ಮನುಷ್ಯನ ತಿಳುವಳಿಕೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿರುವುದರಿಂದ ಶೈಕ್ಷಣಿಕವಾಗಿ ಕಲಿಯುವ ಅಂಶಗಳು ಇದ್ದೇ ಇರುತ್ತವೆ.  ಆದ್ದರಿಂದ ಬಾಲ್ಯದಿಂದಲೇ ಸಾಹಿತ್ಯ ಕೃತಿಗಳ ಬಗ್ಗೆ ಮಕ್ಕಳಲ್ಲಿ ಒಲವು ಮೂಡಿಸುವುದು ಅವಶ್ಯಕವಾಗಿದೆ ಎಂದರು.   

ಬಾಲ ಸಾಹಿತಿಗಳಾದ ನೇಹಾ ರಾಮಾಪೂರ ಮತ್ತು ವಿದ್ಯಾ ಭಗವತಿ, ತಮ್ಮ ಸಾಹಿತ್ಯದ ಬರವಣಿಗೆ ಹಿಂದಿನ ಪ್ರೇರಣೆ, ಬೆಂಬಲ ಕುರಿತಾಗಿ ಲವಲವಿಕೆಯಿಂದ ಅನಿಸಿಕೆಗಳನ್ನು ಹಂಚಿಕೊಂಡದ್ದು, ಸಭಿಕರ ಗಮನ ಸೆಳೆಯಿತು.  ತಮ್ಮ ಬರವಣಿಗೆ ಸಾಗಿಬಂದ ದಾರಿ, ಸಮಾಜದಿಂದ ದೊರೆತ ಸ್ಪಂದನೆ ಮತ್ತು ಭವಿಷ್ಯದ ಬರವಣಿಗೆ ಮೇಲಿನ ತಮ್ಮ ಅಭಿಲಾಷೆಗಳ ಕುರಿತಂತೆ ಅಭಿಪ್ರಾಯವನ್ನು ಹಂಚಿಕೊಂಡರು.   

ಕೆ.ಇ.ಬೋರ್ಡ ಸಂಸ್ಥೆಯ ಕಾರ್ಯದರ್ಶಿಗಳಾದ ಡಿ.ಎಸ್‌.ರಾಜಪುರೋಹಿತ ಮಕ್ಕಳ ಮೇಲೆ ಕೇವಲ ಅಂಕಗಳನ್ನು ಸಂಪಾದಿಸುವ ಒತ್ತಡವನ್ನು ಹೇರದೇ, ವಿದ್ಯುನ್ಮಾನ ಯಂತ್ರಗಳ ಗುಲಾಮರನ್ನಾಗಿ ಮಾಡದೇ ಸುತ್ತಲ ಪರಿಸರದ ಕುರಿತಾಗಿ ಆಸಕ್ತಿಯನ್ನು ಮೂಡಿಸುವ ಕೆಲಸವಾಗಬೇಕಾಗಿದೆ ಎಂದು ಹೇಳಿದರು.   

ಕೆ.ಇ.ಬೋರ್ಡನ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾದ ಸುನೀತ ಪುರೋಹಿತರು ಸಂಸ್ಥೆಯ ಸಾಧನೆ, ಕಾರ್ಯಚಟುವಟಿಕೆಗಳು ಹಾಗೂ ಮುಂದಿನ ಗುರಿಗಳ ಕುರಿತಾಗಿ ಮಾಹಿತಿಯನ್ನು ನೀಡಿದರು.   

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಖಚಾಂಚಿಗಳಾದ ನಿವೃತ್ತ ಜಿಲ್ಲಾನ್ಯಾಯಾಧೀಶ ಎನ್‌.ಎಸ್‌.ಕುಲಕರ್ಣಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯು ಮಕ್ಕಳ ಸಾಹಿತ್ಯಕ್ಕೆ ಮಹತ್ವ ನೀಡಿ, ಪ್ರಸ್ತುತ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯವಾದುದು.  ಇಂತಹ ಕಾರ್ಯಕ್ರಮದ ಮುಖಾಂತರ ಮಕ್ಕಳಲ್ಲಿ ಶೈಕ್ಷಣಿಕ ಪ್ರಗತಿಯೊಂದಿಗೆ ಒಟ್ಟಾರೆ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.    

ಮಕ್ಕಳ ಸಾಹಿತಿ ಡಾ.ಆನಂದ ಪಾಟೀಲ ಹಾಗೂ ಡಾ.ಶರಣಮ್ಮ ಗೋರೆಬಾಳ ಕಾರ್ಯಕ್ರಮದ ಬಗ್ಗೆ ಅನಿಸಿಕೆ ಹಂಚಿಕೊಂಡು ಸಾಹಿತ್ಯ ಅಕಾಡೆಮಿಯ ಕಾರ್ಯಚಟುವಟಿಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.   

ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾದ ಚನ್ನಪ್ಪ ಅಂಗಡಿ ಅವರು ಅಕಾಡೆಮಿಯ ಕಾರ್ಯಚಟುವಟಿಕೆಗಳು, ಯೋಜನೆಗಳು ಮತ್ತು ಸಾಧನೆಗಳ ಕುರಿತಂತೆ ಮಾತನಾಡುವುದರೊಂದಿಗೆ ಬಾಲ ಸಾಹಿತಿ ಕಾರ್ಯಕ್ರಮದ ಮಹತ್ವವನ್ನು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು.   

ಹರ್ಷಾಚಾರ್ಯ ಮತ್ತು ವಿಜಯಲಕ್ಷ್ಮೀ ನಿರೂಪಿಸಿದರು. ಎನ್‌.ಎಸ್‌.ಗೋವಿಂದರೆಡ್ಡಿ ಸ್ವಾಗತಿಸಿದರು, ಸಂಗಮೇಶ ಹಡಪದ ವಂದಿಸಿದರು. 

ಕಾರ್ಯಕ್ರಮದಲ್ಲಿ ಎಮ್‌.ಎ.ಅಳವಂಡಿ, ಪ್ರಕಾಶ ಕಡಮೆ, ಶ್ರೀಧರ ಉದಗಟ್ಟಿ, ವೈ.ಜಿ.ಭಗವತಿ, ಡಾ.ಲಿಂಗರಾಜ ರಾಮಾಪೂರ, ಶ್ರೀಧರ ಗಸ್ತಿ, ಸ್ಮೀತಾ ಕುಲಕರ್ಣಿ ಮುಂತಾದವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಮತ್ತು ಸಾಹಿತ್ಯಾಸಕ್ತರು ನೆರೆದಿದ್ದರು.