ಅಕ್ಷರಾಭ್ಯಾಸಂ ಮಗುವಿನ ಹೃದಯದ ಸಂಸ್ಕಾರ : ಪ್ರೊ.ಅಣ್ಣಿಗೇರಿ

ಅಕ್ಷರಾಭ್ಯಾಸಂ ಮಗುವಿನ ಹೃದಯದ ಸಂಸ್ಕಾರ : ಪ್ರೊ.ಅಣ್ಣಿಗೇರಿ Literacy is the rite of a child's heart : Prof. Annigeri

ಹಾರೂಗೇರಿ : ಪ್ರತಿಯೊಬ್ಬ ತಂದೆ-ತಾಯಿಯಲ್ಲಿಯೂ ಕನಸುಗಳಿರುತ್ತವೆ. ಮಕ್ಕಳು ಕುಟುಂಬ ಮಾತ್ರವಲ್ಲ, ದೇಶದ ಗದ್ದೆಗಳು. ಶಿಕ್ಷಕರು ಈ ಗದ್ದೆಗಳನ್ನು ಹದಗೊಳಿಸಿ, ಅಕ್ಷರ, ಸಂಸ್ಕಾರ, ಸಂಸ್ಕೃತಿಯನ್ನು ಬಿತ್ತಬೇಕು. ಶಾಲಾ-ಕಾಲೇಜುಗಳು ಈ ಬೆಳೆಯನ್ನು ಬೆಳೆಯಬೇಕು. ದೇಶ ಭವಿಷ್ಯವನ್ನು ಒಕ್ಕಬೇಕು. ಈ ದೇಶದ ಭವಿಷ್ಯ ನಿರ್ಮಾಣವಾಗುವುದೇ ಶಾಲಾ ಕಾಲೇಜುಗಳಲ್ಲಿ ಎಂದು ಪ್ರೊ.ಶಿವಕುಮಾರ ಅಣ್ಣಿಗೇರಿ ಹೇಳಿದರು. 

ಇಲ್ಲಿನ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಎಸ್‌.ಬಿ.ದರೂರ ಸೆಂಟ್ರಲ್ ಶಾಲೆಯ ಆವರಣದಲ್ಲಿ ಶುಕ್ರವಾರ ನಡೆದ ಮಕ್ಕಳಿಗೆ ಅಕ್ಷರಾಭ್ಯಾಸಂ ಕಾರ್ಯಕ್ರಮ ಮತ್ತು 2025-26ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. 

ಮನೆ, ಶಾಲೆಗಳ ನಡುವೆ ಮಕ್ಕಳ ಮುಗ್ಧ ಮನಸ್ಸುಗಳನ್ನು ಗೆಲ್ಲೋದೇ ಶಿಕ್ಷಕರಿಗೆ ಬಹುದೊಡ್ಡ ಸವಾಲು. ಅಕ್ಷರಾಭ್ಯಾಸಂ ಮಗುವಿನ ಹೃದಯದ ಸಂಸ್ಕಾರದ ಮಜಲು. ಪಠ್ಯ ಹೊಟ್ಟೆಗೆ ಹಿಟ್ಟು ಕೊಟ್ಟರೆ, ಸಂಸ್ಕಾರ, ಸಂಸ್ಕೃತಿ ಬದುಕಿಗೆ ಅಮೂಲ್ಯ ಅನುಭವಗಳನ್ನು ನೀಡಿ, ಅದರಲ್ಲಿ ಮಾನವೀಯ ಗುಣಗಳನ್ನು ತುಂಬುತ್ತದೆ ಎಂದು ಹೇಳಿದರು. 

ಸಂಸ್ಥೆಯ ಹಿರಿಯ ನಿರ್ದೇಶಕ ಆರ್‌.ಎಸ್‌.ಯಲಶೆಟ್ಟಿ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ ಜ್ಞಾನ ಸಂಪಾದನೆಯೊಂದೇ ವಿದ್ಯಾರ್ಥಿಗಳ ಸಾಧನೆಯಾಗಬಾರದು, ನಮ್ಮ ಸಂಸ್ಕೃತಿಯ ಪ್ರತೀತಿಗಳಾಗಬೇಕು. ಮಗುವಿನ ಮನಸ್ಸು ಹೂವಿನಂತೆ. ಬದುಕನ್ನು ಸುಂದರಗೊಳಿಸುವುದು ಶಿಕ್ಷಣದ ಪರಮ ಗುರಿಯಾಗಿದ್ದು, ವಿದ್ಯೆಯೊಂದಿಗೆ ಸಂಸ್ಕೃತಿಯನ್ನು ಕಲಿಸಿ, ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡಿ, ಉತ್ತಮ ಸಮಾಜವನ್ನು ಕಟ್ಟಬೇಕು. ಶಿಕ್ಷಣ ಕೇವಲ ಅಕ್ಷರ ಕಲಿಸುವುದಲ್ಲ, ಅಕ್ಷರಗಳಲ್ಲಿರುವ ಸಂಸ್ಕೃತಿಯನ್ನು ಹೊರತರುವುದು. ಶಾಲೆಗಳು ಎಲ್ಲ ಧರ್ಮಗಳ ಜೀವಂತ ದೇವಾಲಯಗಳು ಎಂದು ಹೇಳಿದರು. 

ಈವೇಳೆ ಸಾಮೂಹಿಕವಾಗಿ ಮಕ್ಕಳಿಗೆ ತಂದೆ-ತಾಯಿಗಳ ಜೊತೆ ಅಕ್ಷರಾಭ್ಯಾಸಂ ನಡೆಸಲಾಯಿತು.  

ಪ್ರಾಚಾರ್ಯ ಶರತ್ ಕೆ.ಎಸ್, ಶ್ರೀ ಚನ್ನವೃಷಭೇಂದ್ರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಆರ್‌.ಎ.ಭಾವಿ, ಜಯಶ್ರೀ ಗದಗ, ಅಧೀನಾ ಬಾಬು, ಎಸ್‌.ಭಾಗ್ಯಶ್ರೀ, ಕೆ.ಭಾಗ್ಯಶ್ರೀ, ಪಲ್ಲವಿ ಉಳಗೊಂಡ, ಪ್ರೀಯಾ ಚೂರಿ, ಕವಿತಾ ಸೊಂಡೂರ, ಶ್ರೀದೇವಿ ಪತ್ತಾರ, ಲಕ್ಷ್ಮೀ ಗೆಜ್ಜಿ, ಕೆ.ಭಾರತಿ, ಪಿ.ರೂಪಾ, ಎಮ್‌.ಜ್ಯೋತಿ, ಎಲ್‌.ಮಂಜುಳಾ, ಶಿವಕುಮಾರ ಬರಗಾಂವೆ, ಸಾರುಪ್ಯ, ಡಾ.ಸತೀಶ ನಾಶಿ, ಅಭಿಷೇಕ ದರೂರ, ಶಿಲ್ಪಾ ಸಣ್ಣಕ್ಕಿನವರ, ಬಿ.ಎಸ್‌.ದುಂಡಗಿ ಹಾಗೂ ಸಂಸ್ಥೆಯ ಎಲ್ಲ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ಪ್ರಮೋದ ಧೀರೆ ಸ್ವಾಗತಿಸಿದರು. ಕುಮಾರಿ ಚಿಂಜಿತಾ ನಿರೂಪಿಸಿದರು. ಶಾಹೂದ ಗೌಂಡಿ ವಂದಿಸಿದರು.