ಸ್ವಾತಂತ್ರ್ಯ, ಸಮಾನತೆ ಹಾಗೂ ಭಾತೃತ್ವ - ಬಾಬಾಸಾಹೇಬರ ಮೂಲ ಸಂದೇಶ

ಸ್ವಾತಂತ್ರ್ಯ, ಸಮಾನತೆ ಹಾಗೂ ಭಾತೃತ್ವ - ಬಾಬಾಸಾಹೇಬರ ಮೂಲ ಸಂದೇಶ Liberty, Equality and Fraternity - Babasaheb's Original Message

 ಬೆಳಗಾವಿ 06: “ಭಾರತದ ಸಾಂಸ್ಕೃತಿಕ ಚರಿತ್ರೆಯ ಕುರಿತು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ತಮ್ಮ ಅಗಾಧವಾದ ಸಂಶೋಧನೆಯಿಂದ ಸ್ಪಷ್ಟತೆ ಇದ್ದ ಕಾರಣ ಅವರು ಸ್ವಾತಂತ್ರ್ಯ, ಸಮಾನತೆ ಹಾಗೂ ಭಾತೃತ್ವದ ಆದರ್ಶಗಳನ್ನು ಭಾರತೀಯ ಸಂವಿಧಾನದಲ್ಲಿ ಸೇರಿಸಿ, ನಮ್ಮ ದೇಶವು ಒಂದು ಚೈತನ್ಯಶೀಲ ಪ್ರಜಾಪ್ರಭುತ್ವವಾಗಲು ಭದ್ರ ಬುನಾದಿಯನ್ನು ಹಾಕಿಕೊಟ್ಟರು. ಇವುಗಳನ್ನು ಅವರು ಗೌತಮ ಬುದ್ಧನ ಬೋಧನೆಯಿಂದ ಹಾಗೂ ಸ್ವಂತ ಚಿಂತನೆಗಳಿಂದ ಕಂಡುಕೊಂಡಿದ್ದರು. ಭಾರತದ ನೈಜ ಇತಿಹಾಸವನ್ನು ಅರಿತುಕೊಳ್ಳುವುದು ಹಾಗೂ ಸಂವಿಧಾನವನ್ನು ಓದಿ, ಅದರ ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಜವಾಬ್ದಾರಿಯಾಗಿದೆ.

” ಎಂದು ಅಂಬೇಡ್ಕರ್‌ವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಆಯುಷ್ಮಾನ್ ಬಿ. ಎಸ್, ನಾಡಕರ್ಣಿ ಇವರು ಅಭಿಪ್ರಾಯಪಟ್ಟರು. “ಇತಿಹಾಸವು ನಮಗೆ ಸ್ಪೂರ್ತಿ ನೀಡುತ್ತದೆ.” ಎಂದು ಹೇಳಿದ ಅವರು, ಪ್ರಗತಿಪರ ಸಮಾಜವನ್ನು ನಿರ್ಮಿಸಲು ಡಾ. ಅಂಬೇಡ್ಕರ್ ಅವರಂತಹ ನಾಯಕರ ಹೋರಾಟಗಳು ಮತ್ತು ಕೊಡುಗೆಗಳಿಂದ ಕಲಿಯುವುದು ಅತ್ಯಗತ್ಯ ಎಂದು ಒತ್ತಿ ಹೇಳಿದರು. ಅವರು ಮಹಾಪರಿನಿರ್ವಾಣ ದಿನದ ಅಂಗವಾಗಿ ಡಾ. ಬಿ. ಆರ್‌. ಅಂಬೇಡ್ಕರ್ ಅಧ್ಯಯನ ಪೀಠ, ಡಾ. ಬಿ. ಆರ್‌. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ ಇವರ ಸಹಯೋಗದಲ್ಲಿ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ “ಇಂದಿನ ಸಂದರ್ಭದಲ್ಲಿ ಡಾ. ಬಿ. ಆರ್‌. ಅಂಬೇಡ್ಕರ್ ಅವರ ವಿಚಾರಗಳ ಪ್ರಸ್ತುತತೆ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.  

ಅಧ್ಯಕ್ಷತೆ ವಹಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ  ಮಾನ್ಯ ಕುಲಪತಿಗಳಾದ ಪ್ರೊ. ಸಿ. ಎಮ್‌. ತ್ಯಾಗರಾಜ ರವರು ಮಾತನಾಡಿ “ಓದು ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ ಪ್ರತಿಯೊಬ್ಬರೂ ಓದುವ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು” ಎಂದು ತಿಳಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು “ನಾವು ನಮ್ಮ ಕಾಯಕ ಮತ್ತು ಜ್ಞಾನವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು” ಎಂದರು. “ಡಾ. ಅಂಬೇಡ್ಕರ್ ಅವರ ದಾರ್ಶನಿಕತೆಯು ಇಂದಿಗೂ ಭಾರತಕ್ಕೆ ಮಾರ್ಗದರ್ಶನ ನೀಡುತ್ತಿದೆ. ವಿಶೇಷವಾಗಿ ಸಾಂವಿಧಾನಿಕ ಮೌಲ್ಯಗಳನ್ನು ಬಲಪಡಿಸುವಲ್ಲಿ ಮತ್ತು ಪ್ರಬುದ್ಧ ನಾಗರಿಕರನ್ನು ರೂಪಿಸುವಲ್ಲಿ ಅವರ ಪಾತ್ರ ಮಹತ್ವದ್ದು” ಎಂದು ಅವರು ಪ್ರತಿಪಾದಿಸಿದರು. 

ಗೌರವ ಅತಿಥಿಯಾಗಿ ಭಾಗವಹಿಸಿದ್ದ ಕುಲಸಚಿವರಾದ ಶ್ರೀ. ಸಂತೋಷ್ ಕಾಮಗೌಡ ಮಾತನಾಡಿ, “ಡಾ. ಅಂಬೇಡ್ಕರ್ ಅವರ ವಿಚಾರಗಳು ಸದಾ ಪ್ರಸ್ತುತ. ವಿದ್ಯಾರ್ಥಿಗಳು ಅಂಬೇಡ್ಕರ್ ಅವರನ್ನು ಮಾದರಿಯಾಗಿಟ್ಟುಕೊಂಡು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು” ಎಂದರು. ಅಂಬೇಡ್ಕರ್ ಅವರ ಜೀವನವೇ ಶಿಸ್ತು, ಪಾಂಡಿತ್ಯ ಮತ್ತು ಸಾಮಾಜಿಕ ನ್ಯಾಯದ ಬದ್ದತೆಗೆ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಾಪಟ್ಟರು. 

ಸಿಂಡಿಕೇಟ್ ಸದಸ್ಯೆ ಹಾಗೂ ಸಲಹಾ ಸಮಿತಿ ಸದಸ್ಯೆಯಾದ ಡಾ. ಕಾವೇರಿ ಎಚ್‌. ಎಮ್ ಅವರು ಇದೇ ಸಂದರ್ಭದಲ್ಲಿ ಮಾತನಾಡಿ, ಸಮಕಾಲೀನ ಸಾಮಾಜಿಕ-ರಾಜಕೀಯ ಸಂದರ್ಭದಲ್ಲಿ ಅಂಬೇಡ್ಕರ್‌ರವರ ವಿಚಾರಗಳ ಮಹತ್ವವನ್ನು ಎತ್ತಿ ಹಿಡಿದರು. ಹಾಗೂ, ಬಾಬಾಸಾಹೇಬರು ಎಲ್ಲಾ ಜಾತಿ ಹಾಗೂ ವರ್ಗಗಳ ಮಹಿಳೆಯರ ಜೀವನವನ್ನು ಹಸನುಗೊಳಿಸಲು ಮಾಡಿದ ಪ್ರಯತ್ನಗಳನ್ನು ನೆನೆದರು. ವಿದ್ಯಾರ್ಥಿಗಳು ವಿಮರ್ಶಾತ್ಮಕ ಚಿಂತನೆಯ ಕೌಶಲ್ಯವನ್ನು ಬೆಳೆಸಲು ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ಪ್ರೊ. ಡಿ. ಎನ್‌. ಪಾಟೀಲ, ಕುಲಸಚಿವರು (ಮೌಲ್ಯಮಾಪನ), ಹಾಗೂ ಶ್ರೀಮತಿ. ಎಂ. ಎ. ಸಪ್ನಾ, ಹಣಕಾಸು ಅಧಿಕಾರಿಗಳು ಸಹ ಉಪಸ್ಥಿತರಿದ್ದರು. ಡಾ. ಬಿ. ಆರ್‌. ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕರಾದ ಪ್ರೊ. ಅಶೋಕ ಡಿ’ಸೋಜಾ ಸ್ವಾಗತಿಸಿದರು. ಸಂಯೋಜಕರಾದ   ಡಾ. ಮಹೇಶಕುಮಾರ ಎನ್ ಅತಿಥಿಗಳನ್ನು ಪರಿಚಯಿಸಿದರು. ಸಹ-ಸಂಯೋಜಕಿಯಾದ ಡಾ. ಅಶ್ವಿನಿ ಜಾಮೂನಿ ವಂದಿಸಿದರು. ವಿವಿಧ ವಿಭಾಗಗಳ ಡೀನರುಗಳು, ಮುಖ್ಯಸ್ಥರು, ಬೋಧಕರು, ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.