ಕಲೆಗಳ ಪ್ರದರ್ಶನ ಪ್ರೋತ್ಸಾಹಿಸಿ, ನಮ್ಮ ಸಂಸ್ಕೃತಿಯನ್ನು ಉಳಿಸೋಣ: ಡಾ. ರಾಜು ಜಡಾರ್

ಕಲೆಗಳ ಪ್ರದರ್ಶನ ಪ್ರೋತ್ಸಾಹಿಸಿ, ನಮ್ಮ ಸಂಸ್ಕೃತಿಯನ್ನು ಉಳಿಸೋಣ: ಡಾ. ರಾಜು ಜಡಾರ್ Let's promote the performance of arts and preserve our culture: Dr. Raju Jadar

ಬಳ್ಳಾರಿ 26:  ನಗರದಲ್ಲಿ ಕಲೆಗಳ ಪ್ರದರ್ಶನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದಾಗ ಮಾತ್ರ ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಕಿಷ್ಕಿಂದ ವಿಶ್ವವಿದ್ಯಾಲಯದ ಕುಲಸಚಿವ ಡಾ. ರಾಜು ಜಡಾರ್ ಅಭಿಪ್ರಾಯಪಟ್ಟರು.ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್‌ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಕಾರದೊಂದಿಗೆ ಸೋಮವಾರ ರಾತ್ರಿ ನಗರದ ಹೊಂಗಿರಣ ರಂಗಮಂದಿರದಲ್ಲಿ ಆಯೋಜಿಸಿದ್ದ “ತುಂಗಾ ಅಧಿಕಮಾಸ ಸಾಂಸ್ಕೃತಿಕ ್ಝ್ಬ್ಝೌಹಿ2026'' ಕಾರ್ಯಕ್ರಮವನ್ನು ವಾದ್ಯ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ದೇಶ ಹಾಗೂ ನಾಡಿನ ಸಾಂಪ್ರದಾಯಿಕ ಕಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅವರು ತಿಳಿಸಿದರು.ಹಿರಿಯ ರಂಗ ಕಲಾವಿದ ಎಂ. ರಾಮಾಂಜಿನೆಯುಲು ಮಾತನಾಡಿ, ಕಲೆಗಳ ಉಳಿವಿಗಾಗಿ ಉದಯೋನ್ಮುಖ ಕಲಾವಿದರನ್ನು ಬೆಳೆಸುವ ಕಾರ್ಯವನ್ನು ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್‌ ನಿರಂತರವಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದರು.ಕರ್ನಾಟಕ ಕ್ರಿಯಾಶೀಲ ಶಿಕ್ಷಕರ ವೇದಿಕೆ ಜಿಲ್ಲಾ ಅಧ್ಯಕ್ಷ ರವಿ ಚೆಳಗುರ್ಕಿ ಮಾತನಾಡಿ, ಕಳೆದ 12 ವರ್ಷಗಳಿಂದ ಟ್ರಸ್ಟ್‌ ಕಲೆ ಹಾಗೂ ಕಲಾವಿದರಿಗೆ ನೀಡುತ್ತಿರುವ ಪ್ರೋತ್ಸಾಹ ಅಭಿನಂದನೀಯವಾಗಿದೆ ಎಂದು ಹೇಳಿದರು.

ಹವ್ಯಾಸಿ ಕಲಾವಿದರ ಒಕ್ಕೂಟದ ಜಿಲ್ಲಾ ಸಂಚಾಲಕ ಜಿ.ಎಂ. ಚಂದ್ರಶೇಖರಯ್ಯ ಸ್ವಾಮಿ ಮಾತನಾಡಿ, ಕಲೆಗಳ ಬೆಳವಣಿಗೆಗೆ ಪ್ರೇಕ್ಷಕರ ಪ್ರೋತ್ಸಾಹವೂ ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಟ್ರಸ್ಟ್‌ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ಶ್ರೀಜೆ ತಂಡದಿಂದ ಸಮೂಹ ನೃತ್ಯ ಹಾಗೂ ನಾಗರಾಜು ಅಮರಪುರ ತಂಡದಿಂದ ಪ್ರದರ್ಶಿಸಲಾದ “ಯಾರಿಗೆ ಬೇಕು ನಿನ್ನ ಕವಿತೆ” ಹಾಸ್ಯ ನಾಟಕ ಪ್ರೇಕ್ಷಕರ ಮನರಂಜಿಸಿತು.

ಈ ಸಂದರ್ಭದಲ್ಲಿ ವಾಣಿಜ್ಯ ಕೈಗಾರಿಕೆ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ದೊಡ್ಡನಗೌಡ, ಜಂಟಿ ಕಾರ್ಯದರ್ಶಿ ವಿ. ರಾಮಚಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ನೇತ್ರಾವತಿ, ರವಿ, ಟಿ. ಶ್ರೀನಿವಾಸ್, ಕನೆಕಲ್ ಶ್ರೀಧರ, ಶಿವರುದ್ರಯ್ಯ ಸ್ವಾಮಿ, ನಿವೃತ್ತ ಪ್ರಾಂಶುಪಾಲ ಕುಪ್ಪಗಲ್ ವೀರೇಶ್, ಉಪನ್ಯಾಸಕ ಮಂಜುನಾಥ್, ಕಲಾವಿದ ಸುಬ್ಬಣ್ಣ, ಆದೋನಿ ವೀಣ, ಶೇಷರೆಡ್ಡಿ, ವೀರೇಶ್, ಗುರುಸ್ವಾಮಿ, ಪಂಪಾಪತಿ, ಹುಸೇನಸಾಬ್, ಬಸವರಾಜ್ ಸ್ವಾಮಿ, ವೆಂಕಟೇಶಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.ರಂಗ ಕಲಾವಿದ ನಾಗಭೂಷಣ್ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ್ ಗೌಡ ವಂದಿಸಿದರು.