ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ

ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ Leopard spotted in Madigunji village; villagers alarmed, Forest Department installs trap to capture

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಮಾಡಿಗುಂಜಿ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಚಿರತೆ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಚಿರತೆ ಯಾವಾಗ, ಎಲ್ಲಿ ಪ್ರತ್ಯಕ್ಷವಾಗಿ ದಾಳಿ ನಡೆಸಬಹುದು ಎಂಬ ಭೀತಿಯಲ್ಲಿ ಗ್ರಾಮಸ್ಥರು ದಿನ ಕಳೆಯುವಂತಾಗಿದೆ.

   ಗ್ರಾಮಸ್ಥರ ಮಾಹಿತಿಯಂತೆ, ಕಳೆದ ಕೆಲವು ದಿನಗಳಿಂದ ಚಿರತೆ ಗ್ರಾಮದ ವಿವಿಧ ಭಾಗಗಳಲ್ಲಿ ಕಾಣಿಸಿಕೊಂಡಿದ್ದು, ಪ್ರಸಾದ್ ಗಾಡಿ ಅವರ ಮನೆಯ ಬಾತ್‌ರೂಮ್‌ನಲ್ಲಿ ಒಂದು ರಾತ್ರಿ ಪೂರ್ತಿ ಅಡಗಿಕೊಂಡಿತ್ತು ಎನ್ನಲಾಗಿದೆ. ಇದನ್ನು ಗಮನಿಸಿದ ಕೆಲವರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಚಿರತೆ ಸಮೀಪದ ಅರಣ್ಯದತ್ತ ತೆರಳಿದೆ ಎಂದು ಹೇಳಲಾಗಿದೆ.

   ಗ್ರಾಮದ ಮಾವುಲಿ ದೇವಸ್ಥಾನದ ಸುತ್ತಮುತ್ತ ಚಿರತೆಯ ಓಡಾಟ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಗ್ರಾಮದ ಸಮೀಪ ಬೋನ್ (ಕೇಜ್ ಟ್ರ್ಯಾಪ್) ಅಳವಡಿಸಿದ್ದರೂ ಇದುವರೆಗೆ ಅದು ಬಲೆಗೆ ಬಿದ್ದಿಲ್ಲ.

    ಇದೇ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿ ಗಸ್ತು ತಿರುಗುವುದನ್ನು ಹೆಚ್ಚಿಸಿದ್ದು, ಚಿರತೆಯ ಚಲನವಲನದ ಮೇಲೆ ನಿಗಾ ವಹಿಸಿದ್ದಾರೆ. ಆದಾಗ್ಯೂ, ಚಿರತೆಯ ನಿಖರ ಸುಳಿವು ಇನ್ನೂ ಲಭ್ಯವಾಗಿಲ್ಲ.

  ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು, ರಾತ್ರಿ ವೇಳೆಯಲ್ಲಿ ಅನಗತ್ಯವಾಗಿ ಹೊರಗಡೆ ಸಂಚರಿಸಬಾರದು ಹಾಗೂ ಯಾರಿಗಾದರೂ ಚಿರತೆ ಕಂಡುಬಂದಲ್ಲಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಇಲಾಖೆ ಮನವಿ ಮಾಡಿದೆ.