ಜ್ಞಾನೋಬಾ ತುಕಾರಾಮ ಪಾಯಿ ದಿಂಡಿ ಸೋಹಳಾಗೆ ಲಕ್ಷ್ಮೀ ಹೆಬ್ಬಾಳಕರ ಚಾಲನೆ

ಜ್ಞಾನೋಬಾ ತುಕಾರಾಮ ಪಾಯಿ ದಿಂಡಿ ಸೋಹಳಾಗೆ ಲಕ್ಷ್ಮೀ ಹೆಬ್ಬಾಳಕರ ಚಾಲನೆ Lakshmi Hebbalkar flags off the Dnyanoba-Tukaram Palkhi Dindi procession

ಬೆಳಗಾವಿ 11: ಆಷಾಢ ಏಕಾದಶಿ ಅಂಗವಾಗಿ ಶ್ರೀಕ್ಷೇತ್ರ ಪಂಢರಪುರಕ್ಕೆ ತೆರಳುವ ವಾರಕರಿ ಭಕ್ತರ ಸಾಂಪ್ರದಾಯಿಕ ಪಾದಯಾತ್ರೆಯ ಅಂಗವಾಗಿ ಬೆಳಗಾವಿ ಗ್ರಾಮೀಣ ಭಾಗದ ವಾಘವಾಡೆ-ಸಾಂವಗಾಂವ ವ್ಯಾಪ್ತಿಯ ಜಯ ರಾಮಕೃಷ್ಣ ಹರಿ ಸಾಂಪ್ರದಾಯಿಕ ವಾರಕರಿ ಸೇವಾ ಸಂಘ ವತಿಯಿಂದ ಆಯೋಜಿಸಲಾಗಿರುವ ಜ್ಞಾನೋಬಾ ತುಕಾರಾಮ ಪಾಯಿ ದಿಂಡಿ ಸೋಹಳಾ ಹಾಗೂ ಭವ್ಯ ಪಾಲ್ಕಿ ಉತ್ಸವಕ್ಕೆ ನಿಕಟಪೂರ್ವ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಶನಿವಾರ ಚಾಲನೆ ನೀಡಿದರು. 

ಭುಜಂಗ ಮಹಾರಾಜ ಪಾಟೀಲ ಅವರ ದಿವ್ಯ ಸಾನ್ನಿಧ್ಯದಲ್ಲಿ, ನೂರಾರು ವಾರಕರಿ ಭಕ್ತರು, ಕೀರ್ತನಕಾರರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ನೆರವೇರಿತು. ವಿಠಲ-ರುಕ್ಮಿಣಿ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಭಜನೆ, ಕೀರ್ತನೆ ಹಾಗೂ ನಾಮಸಂಕೀರ್ತನೆಯೊಂದಿಗೆ ಪಾಲ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು.  

ಬಳಿಕ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್, ವಾರಕರಿ ಸಂಪ್ರದಾಯವು ಭಕ್ತಿ, ಶಿಸ್ತು, ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವ ಶ್ರೇಷ್ಠ ಪರಂಪರೆಯಾಗಿದೆ. ಜ್ಞಾನೇಶ್ವರ ಮಹಾರಾಜರು ಮತ್ತು ಸಂತ ತುಕಾರಾಂ ಮಹಾರಾಜರ ಸಂದೇಶಗಳು ಇಂದಿಗೂ ಸಮಾಜಕ್ಕೆ ದಾರೀದೀಪವಾಗಿವೆ. ಇಂತಹ ಆಧ್ಯಾತ್ಮಿಕ ಪಾದಯಾತ್ರೆಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಭಕ್ತಿಭಾವವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಹೇಳಿದರು. 

ಇಂದಿನಿಂದ ಶ್ರೀಕ್ಷೇತ್ರ ಪಂಢರಪುರದತ್ತ ಹೊರಟಿರುವ ಎಲ್ಲ ಭಕ್ತರ ಪಾದಯಾತ್ರೆ ಯಾವುದೇ ಅಡೆತಡೆಯಿಲ್ಲದೆ ಸುಖಕರವಾಗಿ ಹಾಗೂ ಮಂಗಳಕರವಾಗಿ ಪೂರ್ಣಗೊಳ್ಳಲಿ. ವಿಠ್ಠಲನ ಕೃಪೆ ಎಲ್ಲರ ಮೇಲೂ ಸದಾ ಇರಲಿ ಎಂದು ಅವರು ಶುಭ ಹಾರೈಸಿದರು. ವಾರಕರಿ ಸಂತರು, ಭಕ್ತಾದಿಗಳು, ವಾಘವಾಡೆ, ಸಾವಗಾಂವ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು. ಭಜನೆ, ಕೀರ್ತನೆ ಮತ್ತು ವಿಠ್ಠಲ ನಾಮಸ್ಮರಣೆಯ ನಡುವೆ ನಡೆದ ಈ ಕಾರ್ಯಕ್ರಮ ಭಕ್ತಿಭಾವದಿಂದ ಕೂಡಿದ ಆಧ್ಯಾತ್ಮಿಕ ವಾತಾವರಣಕ್ಕೆ ಸಾಕ್ಷಿಯಾಯಿತು.