ಮಳೆಯ ಕೊರತೆ: ರೈತರಿಗೆ ಬೆಳೆ ನಷ್ಟ, ಸರ್ಕಾರದಿಂದ ಎಚ್ಚರಿಕೆ

ಮಳೆಯ ಕೊರತೆ: ರೈತರಿಗೆ ಬೆಳೆ ನಷ್ಟ, ಸರ್ಕಾರದಿಂದ ಎಚ್ಚರಿಕೆ  Lack of rain: Crop losses for farmers, government warns

ಮುಂಡಗೋಡ್ 28 :  ತಾಲೂಕಿನಲ್ಲಿ ಈ ಬಾರಿ ಮುಂಗಾರು ಮಳೆಯ ಪ್ರಮಾಣ ನೀರೀಕ್ಷಿತ ಮಟ್ಟಕ್ಕೆ ತಲುಪದೆ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸತತವಾಗಿ ಮಳೆ ಕೊರತೆಯಿಂದ ಹೊಲಗಳಲ್ಲಿ ಬೆಳೆಗಳು ಬಣ್ಣ ಕಳೆದುಕೊಂಡು ಒಣಗುವ ಸ್ಥಿತಿಗೆ ತಲುಪಿವೆ. ಕಳೆದ ನಾಲ್ಕು ದಿನಗಳಿಂದ ಮಳೆ ಮತ್ತೆ ಕಾಣಿಸದಿರುವುದರಿಂದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ.  

ವಾರ್ಷಿಕ ಸರಾಸರಿ 1,401 ಮಿ.ಮೀ. ಮಳೆಯಾಗಬೇಕಾಗಿದ್ದರೂ, ಈ ವರ್ಷ ಜನವರಿ 1ರಿಂದ ಜೂನ್ 23ರವರೆಗೆ ಕೇವಲ 247.7 ಮಿ.ಮೀ. ಮಳೆಯಾಗಿದೆ. ಇದು ಸರಾಸರಿಗಿಂತ 96 ಮಿ.ಮೀ. ಕಡಿಮೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 448.9 ಮಿ.ಮೀ. ಮಳೆಯಾಗಿತ್ತು ಎಂದು ಕೃಷಿ ಇಲಾಖೆ ತಿಳಿಸಿದೆ.  

ಮಳೆಯ ಕೊರತೆಯಿಂದಾಗಿ ಪ್ರಮುಖ ಬೆಳೆಗಳಾದ ಭತ್ತ, ಗೋವಿನ ಜೋಳ, ಕಬ್ಬು ಹಾಗೂ ಸೋಯಾಬೀನ್ ಬೆಳೆಗಳಿಗೆ ಹಾನಿಯಾಗಿದೆ. ಭತ್ತದ ಬೆಳೆ ಹೆಚ್ಚಾಗಿ ಪರಿಣಾಮಕ್ಕೊಳಗಾಗಿದ್ದು, ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.  ಈ ನಡುವೆ, ಬೆಳೆಗಳಿಗೆ ಸೂಕ್ತ ಬೆಂಬಲ ನೀಡಲು ಕೃಷಿ ಇಲಾಖೆ ಸಲಹೆಗಳನ್ನು ನೀಡಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.