ಎಪಿಎಂಸಿ ಆವರಣದಲ್ಲಿ ಮೂಲಸೌಕರ್ಯ ಕೊರತೆ, ತಕ್ಷಣ ಪರಿಹಾರಕ್ಕೆ ಆಗ್ರಹ

ಎಪಿಎಂಸಿ  ಆವರಣದಲ್ಲಿ ಮೂಲಸೌಕರ್ಯ ಕೊರತೆ, ತಕ್ಷಣ ಪರಿಹಾರಕ್ಕೆ ಆಗ್ರಹ Lack of infrastructure in APMC premises, demand for immediate solution

ಲೋಕದರ್ಶನ ವರದಿ 

 ಮಹಾಲಿಂಗಪುರ  29: ಉತ್ತರ ಕರ್ನಾಟಕದ ಪ್ರಮುಖ ಕೃಷಿ ಮತ್ತು ವಾಣಿಜ್ಯ ಕೇಂದ್ರವಾಗಿರುವ ಮಹಾಲಿಂಗಪುರ ಎಪಿಎಂಸಿ ಯಾರ್ಡ್‌ನ ಮೊದಲನೇ ಗೇಟ್ ಬಳಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ರಸ್ತೆ ಸಂಪೂರ್ಣ ಕೆಸರುಮಯವಾಗಿ, ನೀರು ನಿಂತು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಪ್ರಮುಖ ಪ್ರವೇಶ ದ್ವಾರವೇ ಅವ್ಯವಸ್ಥೆಯಿಂದ ಕೂಡಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. 

ಸ್ವಲ್ಪ ಮಳೆಯಾದರೂ ರಸ್ತೆಯ ಮೇಲೆ ನೀರು ನಿಂತು ಕೆಸರು ತುಂಬಿಕೊಳ್ಳುವುದರಿಂದ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಹಾಗೂ ನಾಲ್ಕು ಚಕ್ರ ವಾಹನ ಚಾಲಕರು ಸಂಚರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಈ ರಸ್ತೆ ಅಪಾಯಕಾರಿಯಾಗಿದ್ದು, ಅಪಘಾತ ಸಂಭವಿಸುವ ಆತಂಕವೂ ವ್ಯಕ್ತವಾಗುತ್ತಿದೆ. 

ಈ ಮಾರ್ಗದಲ್ಲಿಯೇ ಅಂಚೆ ಕಚೇರಿ ಸೇರಿದಂತೆ ಹಲವು ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಿದ್ದು, ಪ್ರತಿನಿತ್ಯ ಸಾವಿರಾರು ಜನರು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಆದರೆ ಸಮರ​‍್ಕ ಚರಂಡಿ ವ್ಯವಸ್ಥೆಯ ಕೊರತೆಯಿಂದ ಮಳೆನೀರು ರಸ್ತೆಯಲ್ಲೇ ನಿಂತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. 

ಪ್ರತಿದಿನ ಮುಂಜಾನೆ ಆರೋಗ್ಯದ ದೃಷ್ಟಿಯಿಂದ ನೂರಾರು ಮಂದಿ ವಾಯುವಿಹಾರಕ್ಕಾಗಿ ಈ ರಸ್ತೆಯನ್ನು ಬಳಸುತ್ತಾರೆ. ಆದರೆ ರಸ್ತೆ ಕೆಸರುಮಯವಾಗಿರುವುದರಿಂದ ವಾಯುವಿಹಾರಿಗಳಿಗೂ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ರಸ್ತೆಯ ದುಸ್ಥಿತಿಯನ್ನು ಯುವ ಮಿತ್ರ ಬಳಗದ ನಂದೇಶ ಲಾತೂರ ಸಮಸ್ಯೆಗೆ ಸಂಬಂಧಿಸಿದ ಅಧಿಕಾರಿಗಳು ಶೀಘ್ರದಲ್ಲೇ ಶಾಶ್ವತ ಪರಿಹಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಬೆಲ್ಲದ ವ್ಯಾಪಾರ ಹಾಗೂ ಬಟ್ಟೆ ವ್ಯಾಪಾರಕ್ಕೆ ಪ್ರಸಿದ್ಧಿ ಪಡೆದಿರುವ ಮಹಾಲಿಂಗಪುರ ಎಪಿಎಂಸಿ ಯಾರ್ಡ್‌ಗೆ ಪ್ರತಿನಿತ್ಯ ವಿವಿಧ ಜಿಲ್ಲೆಗಳಿಂದ ರೈತರು, ವ್ಯಾಪಾರಿಗಳು ಮತ್ತು ಸಾರ್ವಜನಿಕರು ಆಗಮಿಸುತ್ತಾರೆ. ಇಂತಹ ಪ್ರಮುಖ ಪ್ರವೇಶ ದ್ವಾರದಲ್ಲೇ ಮೂಲಸೌಕರ್ಯದ ಕೊರತೆ ಕಂಡುಬರುತ್ತಿರುವುದು ನಗರದ ಅಭಿವೃದ್ಧಿಗೆ ಕಪ್ಪುಚುಕ್ಕೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. 

ಸಂಬಂಧಪಟ್ಟ ಎಪಿಎಂಸಿ ಆಡಳಿತ ಮಂಡಳಿ ಹಾಗೂ ಸ್ಥಳೀಯ ಆಡಳಿತದ ಅಧಿಕಾರಿಗಳು ಕೂಡಲೇ ಸ್ಥಳ ಪರೀಶೀಲನೆ ನಡೆಸಿ, ಶಾಶ್ವತ ಚರಂಡಿ ನಿರ್ಮಾಣ, ರಸ್ತೆ ದುರಸ್ತಿ ಹಾಗೂ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.