ಖಾಸ್ಗತೇಶ್ವರ ಜಾತ್ರೆ: ಗೋಪಾಲಕಾವಲಿ ಕಾರ್ಯಕ್ರಮ

ಖಾಸ್ಗತೇಶ್ವರ ಜಾತ್ರೆ: ಗೋಪಾಲಕಾವಲಿ ಕಾರ್ಯಕ್ರಮ Khasgateshwara Fair: Gopalakavali Programme

  ತಾಳಿಕೋಟಿ 27 : ಪಟ್ಟಣದ ಐತಿಹಾಸಿಕ  ಖಾಸ್ಗತ ಮಹಾಶಿವಯೋಗಿಗಳ ಜಾತ್ರೋತ್ಸವದ ಪ್ರಯುಕ್ತ ಭಾನುವಾರ ಬೆಳಗಿನ ಜಾವ 5.45ಕ್ಕೆ ಅಪಾರ ಭಕ್ತರ ಸಮ್ಮುಖದಲ್ಲಿ ಗೋಪಾಲಕಾವಲಿ (ಮೊಸರು ಗಡಿಗೆ) ಒಡೆಯುವ ವಿಶೇಷ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ಜರುಗಿತು. ಇದರೊಂದಿಗೆ ಕಳೆದ ಒಂದು ವಾರದಿಂದ ನಡೆಯುತ್ತಿದ್ದ "ಓಂ ನಮಃ ಶಿವಾಯ" ಉದ್ಘೋಷದ ಭಜನಾ ಕಾರ್ಯಕ್ರಮ ಮಂಗಲವಾಯಿತು. ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಮುನ್ನ  ಖಾಸ್ಗತೇಶ್ವರ ಮಠದ ಪರಮಪೂಜ್ಯ ಸಿದ್ದಲಿಂಗ ದೇವರ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಗೋಪಾಲ ಕಾವಲಿ ಐತಿಹಾಸಿಕ ಹಿನ್ನೆಲೆ: ಲಿಂಗೈಕ್ಯ ಖಾಸ್ಗತ ಶಿವಯೋಗಿಗಳು ಪಂಡರಾಪುರದ ವಿಠ್ಠಲ ಜಾತ್ರೋತ್ಸವಕ್ಕೆ ಹೋದ ಸಂದರ್ಭದಲ್ಲಿ ಆಶಾಡ ಏಕಾದಶಿ ದಿನದಂದು ವಿಠ್ಠಲ ದೇವಸ್ಥಾನದಲ್ಲಿ ಗೋಪಾಲಕಾವಲಿ ಕಾರ್ಯಕ್ರಮ ನೆರವೇರಿಸಲಾಗಿತ್ತು.

ಈ ಕಾರ್ಯಕ್ರಮವನ್ನು ನಮ್ಮ ಮಠದಲ್ಲಿಯೂ ನಡೆಸಿದರೆ ಭಕ್ತರಿಗೆ ಇನ್ನೂ ಅನುಕೂಲವಾಗಿ ಅವರು ಬದುಕು ಹಸನಾಗುತ್ತದೆ ಎಂದು ಖಾಸ್ಗತರು ಮಠದ ಜಾತ್ರೆ ಸಂದರ್ಭದಲ್ಲಿ ಗೋಪಾಲಕಾವಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಎಂದು ಹೇಳಲಾಗುತ್ತದೆ. ಅದರಂತೆ ಈ ಸಂಪ್ರದಾಯವನ್ನು ಜಾತ್ರೆಯ ಸಂದರ್ಭದಲ್ಲಿ ಮುಂದುವರಿಸಿಕೊಂಡು ಬರಲಾಗುತ್ತಿದೆ. ಹರಿದು ಬಂದ ಭಕ್ತ ಸಾಗರ: ಈ ಬಾರಿಯೂ ಭಾನುವಾರ ಬೆಳಗಿನ ಜಾವ ನಡೆದ ಐತಿಹಾಸಿಕ ಗೋಪಾಲ ಕಾವಲಿ (ಮೊಸರು ಗಡಿಗೆ) ಒಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಬೇರೆ ರಾಜ್ಯಗಳಲ್ಲಿರುವ ಶ್ರೀಮಠದ ಅಪಾರಭಕ್ತರು ಭಾಗವಹಿಸಿ ಮೊಸರು ಗಡಗಿಯ ಪ್ರಸಾದವನ್ನು ಪಡೆದು ಪುನೀತರಾದರು. ಕಾರ್ಯಕ್ರಮದಲ್ಲಿ ಮಠದ  ಸಿದ್ದಲಿಂಗ ದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಠದ ಉಸ್ತುವಾರಿ ವೇ.ಮೂ. ಮುರುಗೇಶ ವಿರಕ್ತ ಮಠ ಇದ್ದರು.