ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ

ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ Kannada Flag on Every Home Campaign–2026': Free distribution of 5,000 Kannada flags.

ಬೆಳಗಾವಿ : ಬೆಳಗಾವಿಯಲ್ಲಿ ಕನ್ನಡಿಗರ ವಿಜಯ ಸೇನೆಯ ವತಿಯಿಂದ ಆಯೋಜಿಸಿರುವ ‘ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’ ಕಾರ್ಯಕ್ರಮದ ಅಂಗವಾಗಿ ಇಂದು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಸುಮಾರು 5,000 ಕನ್ನಡ ಬಾವುಟಗಳನ್ನು ಉಚಿತವಾಗಿ ವಿತರಿಸಲಾಯಿತು.

    ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ ಕನ್ನಡಿಗರ ವಿಜಯ ಸೇನೆಯ ಪದಾಧಿಕಾರಿಗಳು ಸಾರ್ವಜನಿಕರಿಗೆ ಕನ್ನಡ ಬಾವುಟಗಳನ್ನು ಹಂಚುವ ಮೂಲಕ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸುವ ಸಂದೇಶ ನೀಡಿದರು.

   ಈ ಕಾರ್ಯಕ್ರಮದಲ್ಲಿ ಕನ್ನಡಿಗರ ವಿಜಯ ಸೇನೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ವಿಜಯ್ ಕುಮಾರ್ ಎಸ್, ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ಕುಮಾರ್, ಉಪಾಧ್ಯಕ್ಷರಾದ ಪ್ರಸಾದ್ ಬಿ.ಆರ್., ನಾಗೇಶ್, ರಂಜಿತ್, ಬಾಲಾಜಿ ಹಾಗೂ ಸೋಮಶೇಖರ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಪುಟ್ಟೇಗೌಡ, ಬೆಳಗಾವಿ ಜಿಲ್ಲಾಧ್ಯಕ್ಷ ರಾಮನಗೌಡ ಪಾಟೀಲ್ ಸೇರಿದಂತೆ ವಿವಿಧ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

  ಕನ್ನಡ ಬಾವುಟವನ್ನು ಪ್ರತಿಯೊಂದು ಕನ್ನಡಿಗರ ಮನೆ ಮೇಲೂ ಹಾರಿಸುವ ಉದ್ದೇಶದಿಂದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಕನ್ನಡ ನಾಡು-ನುಡಿಯ ಗೌರವವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.