ವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯ

ವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯ Kalyana Karnataka Utsava celebrated at V.S.K. University: Everyone's participation essential for dev

ಲೋಕದರ್ಶನ ವರದಿ 

        ಬಳ್ಳಾರಿ,ಸೆ.17 :  ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಅಂದಿನ ಕಾನೂನು ಸಚಿವರಾಗಿದ್ದ ಡಾ. ಬಿ. ಆರ್‌. ಅಂಬೇಡ್ಕರ್ ಅವರ ಅಚಲ ಇಚ್ಛಾಶಕ್ತಿಯ ಫಲವಾಗಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸೆಪ್ಟೆಂಬರ್ 17, 1948 ರಂದು ನಿಜಾಮರ ಕಪಿಮುಷ್ಠಿಯಿಂದ ವಿಮೋಚನೆ ದೊರೆಯಿತು ಎಂದು ವಿವಿಯ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಕಲ್ಯಾಣ ಕರ್ನಾಟಕ ರಚನಾ ಸಮಿತಿಯ ಸದಸ್ಯರಾದ ಡಾ. ರಾಜೇಂದ್ರ ಪ್ರಸಾದ್ ಎನ್‌. ಎಲ್‌. ಸ್ಮರಿಸಿದರು. 

ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕಲ್ಯಾಣ-ಕರ್ನಾಟಕ ಉತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗಣ್ಯರೊಂದಿಗೆ ಧ್ವಜಾರೋಹಣ ನೆರವೇರಿಸಿ, ಪಟೇಲ್ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. 

ಹೈದ್ರಾಬಾದ್ ನಿಜಾಮರ ಆಳ್ವಿಕೆಯಲ್ಲಿದ್ದ ಈ ಭಾಗವನ್ನು ಪಟೇಲರು ತಮ್ಮ ಚಾಣಾಕ್ಷ ನಡತೆ ಮತ್ತು ರಾಜತಾಂತ್ರಿಕತೆಯಿಂದ ಮುಕ್ತಿಗೊಳಿಸಿದರು. ಆದರೆ ಇಂದಿಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಇವುಗಳನ್ನು ನಿವಾರಿಸಲು ಕಲ್ಯಾಣ ಕರ್ನಾಟಕ ರಚನಾ ಸಮಿತಿಯು ನಿರಂತರವಾಗಿ ಶ್ರಮಿಸುತ್ತಿದೆ. ಲಭ್ಯವಿರುವ ಅನುದಾನಗಳ ಸಮರ​‍್ಕ ಹಂಚಿಕೆ ಹಾಗೂ ಸದ್ಬಳಕೆ ಕುರಿತಂತೆ ಸರ್ಕಾರಕ್ಕೆ ಸಮಿತಿಯು ಕಾಲಕಾಲಕ್ಕೆ ಸೂಕ್ತ ವರದಿ ನೀಡುತ್ತಾ ಬಂದಿದೆ ಎಂದು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿಯ ಕುಲಪತಿ ಪ್ರೊ. ಎಂ. ಮುನಿರಾಜು ಅವರು, ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಇಂದಿಗೂ ಗುಣಮಟ್ಟದ ಕೌಶಲ್ಯಯುತ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನಲೆಯನ್ನು ಬದಲಾಯಿಸಲು ಪ್ರತಿಯೊಬ್ಬ ಶಿಕ್ಷಕರೂ ಶ್ರದ್ಧೆ, ಭಕ್ತಿ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳ ಸರ್ವತೋಮುಖ ಕಲ್ಯಾಣಕ್ಕೆ ಮುನ್ನುಡಿ ಬರೆಯಬೇಕು ಎಂದು ಕರೆ ನೀಡಿದರು.